More

    ರಾಜ್ಯದಲ್ಲಿ ಕನಿಷ್ಠ 24 ಕ್ಷೇತ್ರಗಳಲ್ಲಿ ಮೈತ್ರಿಗೆ ಗೆಲುವು

    ಬೀರೂರು: ಮುಂಬರುವ ಲೋಕಸಭಾ ಚುನಾವಣೆಯನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯೊಂದಿಗೆ ಎದುರಿಸಲಿದ್ದು, ರಾಜ್ಯದಲ್ಲಿ ಕನಿಷ್ಠ 24 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದೇವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

    ಪಟ್ಟಣದಲ್ಲಿ ಶುಕ್ರವಾರ ಜೆಡಿಎಸ್ ಮುಖಂಡ ಕೆ.ಎಂ.ವಿನಾಯಕ್ ಮನೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರೇ ಪಕ್ಷದ ಬಲವಾಗಿದ್ದು ಮೈತ್ರಿಯಿಂದ ಹೆಚ್ಚು ಸ್ಥಾನ ಗಳಿಸುವ ಉದ್ದೇಶ ಹೊಂದಲಾಗಿದೆ ಎಂದರು.
    ಪಕ್ಷದ ಬಲವರ್ಧನೆಗಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಒಂದೂ ಸೀಟನ್ನು ನೀಡಿಲ್ಲವೇಕೆ ಎಂಬ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತರ ಕರ್ನಾಟಕದಲ್ಲಿ ಕಾರ್ಯಕರ್ತರಿದ್ದಾರೆ, ನಾಯಕರ ಕೊರತೆ ಇದೆ. ಮೈಸೂರು ಪ್ರಾಂತ್ಯದಲ್ಲಿ ನಾಯಕರೊಂದಿಗೆ ಕಾರ್ಯಕರ್ತರ ಬಲವೂ ಇದೆ. ಮೈತ್ರಿ ಧರ್ಮದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದೇ ಮುಖ್ಯ ಎಂದು ಹೇಳಿದರು.
    ಕೇಂದ್ರ ಆರೋಗ್ಯ ಸಚಿವರಾದ್ರೂ ಅಚ್ಚರಿ ಇಲ್ಲ:
    ರಾಜ್ಯದಲ್ಲಿ ಜೆಡಿಎಸ್‌ಗೆ ಮೂರು ಸ್ಥಾನ ದೊರಕಿದ್ದು ಅಮಿತ್ ಷಾ ಹಾಗೂ ನರೇಂದ್ರ ಮೋದಿ ಅವರ ಒತ್ತಾಸೆ ಮೇರೆಗೆ ಅಳಿಯ ಡಾ. ಸಿ.ಎನ್.ಮಂಜುನಾಥ್ ಸೇವೆಯನ್ನು ಪರಿಗಣಿಸಿ ಅವರ ಸೇವೆ ದೇಶಕ್ಕೆ ಬೇಕೆಂಬ ಆಶಯದಿಂದ ಅವರಿಗೆ ಮನಸ್ಸಿಲ್ಲದಿದ್ದರೂ ಒಪ್ಪಿಸಿ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. 150 ಹಾಸಿಗೆಯಿಂದ ಆರಂಭಗೊಂಡ ಜಯದೇವ ಹೃದ್ರೋಗ ಆಸ್ಪತ್ರೆಯನ್ನು 2000 ಹಾಸಿಗೆಗಳಿಗೆ ವಿಸ್ತರಿಸಿ ಲಕ್ಷಾಂತರ ಹೃದ್ರೋಗಿಗಳಿಗೆ ಆಶಾಕಿರಣವಾಗಿ ಖಾಸಗಿ, ಬಂಡವಾಳಶಾಹಿಗಳು ಮಾಡಲಾಗದ ದೊಡ್ಡ ಸಾಧನೆ ಮಾಡಿದ್ದನ್ನು ಗುರುತಿಸಿ ಅವರಿಗೆ ಅವಕಾಶ ನೀಡಿದ್ದಾರೆ. ಅವರು ಮುಂದೆ ಕೇಂದ್ರದಲ್ಲಿ ಆರೋಗ್ಯ ಮಂತ್ರಿಯಾದರೂ ಆಗಬಹುದೇನೋ? ಎಂಬ ಆಶಯ ವ್ಯಕ್ತಪಡಿಸಿದರು.
    ಕಡೂರು ತಾಲೂಕಿನಲ್ಲಿ ಈ ಬಾರಿ ಕಾರ್ಯಕರ್ತರು ಹಾಗೂ ನಾಯಕರ ಪರಿಶ್ರಮದಿಂದ ಹೆಚ್ಚಿನ ಮತ ಗಳಿಸಿ, ಹಾಸನ ಲೋಕಸಭಾ ಕ್ಷೇತ್ರವನ್ನು ಮತ್ತೊಮ್ಮೆ ಉಳಿಸಿಕೊಂಡು ಜನರಿಗೆ ಉತ್ತಮ ಸೇವೆ ಮಾಡಲು ಪ್ರಜ್ವಲ್ ರೇವಣ್ಣ ಶ್ರಮಿಸಲಿದ್ದಾರೆ ಎಂದರು.
    ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಕೆ.ಎಂ.ವಿನಾಯಕ್ ಅವರು ವೈಎಸ್‌ವಿ ದತ್ತ ಅವರೊಂದಿಗೆ ಪಕ್ಷಕ್ಕಾಗಿ ಶ್ರಮಿಸಿದ್ದರು. ಮುಖಂಡರು ಹಾಗೂ ಕಾರ್ಯಕರ್ತರ ಮಾರ್ಗದರ್ಶನದಲ್ಲಿ ಕಡೂರು ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ನೆರವನ್ನು ಒದಗಿಸಲು ಬದ್ಧನಾಗಿರುವೆ ಎಂದರು.
    ಎಚ್.ಡಿ.ದೇವೇಗೌಡ ಅವರನ್ನು ಕೆ.ಎಂ.ವಿನಾಯಕ್ ಗೌರವಿಸಿದರು. ತಾಯಿ ಪ್ರೇಮಾ ಮಲ್ಲಿಕಾರ್ಜುನ್, ಸಹೋದರ ಕೆ.ಎಂ.ಶಿವಕುಮಾರ್, ಮಗ ಕೆ.ವಿ.ವಿವೇಕ್ ಇದ್ದರು. ಮಾಜಿ ಶಾಸಕ ವೈಎಸ್‌ವಿ ದತ್ತ, ಜೆಡಿಎಸ್ ನಗರ ಘಟಕ ಅಧ್ಯಕ್ಷ ಬಾವಿಮನೆ ಮಧು, ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಚೇತನ್ ಕೆಂಪರಾಜು, ಪುರಸಭೆ ಸದಸ್ಯರಾದ ಲಕ್ಷ್ಮಣ್, ರವಿ, ಕಾರ್ಯಕರ್ತರಾದ ಹೇಮಂತ್‌ಕುಮಾರ್, ಅಯೂಬ್ ಅಹಮದ್, ರಾಜಣ್ಣ, ಕಲ್ಲೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts