More

    ಧಾರ್ವಿುಕ ಕಾರ್ಯಕ್ರಮಕ್ಕೆ ನಿರ್ಬಂಧವಿಲ್ಲ

    ವಿಜಯವಾಣಿ ಸುದ್ದಿಜಾಲ ಕಾರವಾರ: ಕರೊನಾ ಸೋಂಕು ಹರಡುವುದನ್ನು ತಡೆಯಲು ಮುಂದಿನ 20 ದಿನಗಳವರೆಗೆ ಹೆಚ್ಚು ಜನ ಸೇರುವ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ವಿುಕ ಕಾರ್ಯಕ್ರಮಗಳು ನಡೆಸಲು ಯಾವುದೇ ನಿರ್ಬಂಧ ಇಲ್ಲ. ಆದರೆ, ಅಲ್ಲಿ ಮಿತಿಗಿಂತ ಹೆಚ್ಚಿನ ಜನ ಸೇರಲು ಅವಕಾಶ ನೀಡುವುದಿಲ್ಲ. ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸುವವರ ವಿರುದ್ಧ ಪೊಲೀಸ್ ಅಧಿಕಾರ ಬಳಸಲು ಸೂಚಿಸಿದ್ದೇನೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿ ಸಲು ಟಾಸ್ಕ್ ಫೋರ್ಸ್ ಸಮಿತಿಯ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸ ಲಾಗಿದೆ. ಜಿಲ್ಲೆಯ ಜನ ಆಡಳಿತದೊಟ್ಟಿಗೆ ಸಹಕಾರ ನೀಡಬೇಕು ಎಂದರು.

    ಸೋಕಿನಿಂದ ಮುಂದೆ ಗಂಭೀರ ಪರಿಸ್ಥಿತಿ ಎದುರಾದಲ್ಲಿ ಎದುರಿಸಲು ಸಜ್ಜಾಗಿದ್ದೇವೆ. ಎಲ್ಲ ಸರ್ಕಾರಿ ನೌಕರರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಿದ್ದೇವೆ. ಕುಮಟಾ ಮತ್ತು ಮಂಕಿಯಲ್ಲಿರುವ ವಿಪತ್ತು ನಿರ್ವಹಣೆ ಶೆಲ್ಟರ್ ಸೇರಿ ಸರ್ಕಾರಿ ಕಟ್ಟಡಗಳನ್ನು ಕರೊನಾ ಸೋಂಕಿತರನ್ನು ಇಡಲು ಬಳಸಾಗುವುದು ಎಂದರು. ರೆಸಾರ್ಟ್​ಗಳಿಗೆ ಹೊಸದಾಗಿ ಬುಕ್ಕಿಂಗ್ ಮಾಡದಂತೆ ಸೂಚಿಸಲಾಗಿದೆ. ವಿದೇಶದಿಂದ ಬಂದವರ ಟ್ರಾವೆಲ್ ಲಿಸ್ಟ್ ಅನ್ನು ಸ್ವಯಂ ಘೊಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

    ಎಲ್ಲರಿಗೂ ಮಾಸ್ಕ್ ಇಲ್ಲ: ಎಲ್ಲರೂ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಅದಕ್ಕೆ ಅವಕಾಶವೂ ಇಲ್ಲ. ಏನಾದರೂ ಸೋಂಕು ಕಂಡುಬಂದಲ್ಲಿ ಅವರಿಗೆ ಮಾಸ್ಕ್ ವಿತರಿಸುವ ವ್ಯವಸ್ಥೆ ಮಾಡಲಾಗುವುದು. ಎಲ್ಲ ಔಷಧ ಅಂಗಡಿಗಳ ಪರಿಶೀಲನೆ ಪ್ರಾರಂಭಿಸಲಾಗಿದೆ. ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾಸ್ಕ್ ಸೆನಿಟೈಸರ್ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಅಂಥ ಔಷಧ ಅಂಗಡಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದರು.

    ವಿದೇಶದಿಂದ ಬಂದ 240 ಜನರು: ಸರ್ವೆಲೆನ್ಸ್​ನಲ್ಲಿ: ವಿದೇಶದಿಂದ ಮರಳಿದ 240 ಜನರನ್ನು ಆರೋಗ್ಯ ಅಧಿಕಾರಿಗಳು ನಿರಂತರ ಪರಿಶೀಲನೆ ಮಾಡುತ್ತಿದ್ದಾರೆ. 10 ಜನ 28 ದಿನಗಳ ಅವಧಿಯನ್ನು ಮುಗಿಸಿದ್ದಾರೆ. ಇನ್ನುಳಿದವರು 14 ದಿನದ ಗೃಹ ಮೇಲ್ವಿಚಾರಣೆಯಲ್ಲಿದ್ದಾರೆ. ಎಲ್ಲರಿಗೂ ಆರೋಗ್ಯಾಧಿಕಾರಿಗಳು ಪ್ರತಿ ದಿನ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾರೆ ಎಂದರು.

    ಕಚೇರಿಗೆ ಬರಬೇಡಿ: ತೀರ ಅನಿವಾರ್ಯ ಅವಶ್ಯಕತೆ ಇಲ್ಲದೆ ಸರ್ಕಾರಿ ಕಚೇರಿಗಳಿಗೆ ಜನ ಬರದಂತೆ ಜಿಪಂ ಸಿಇಒ ಎಂ.ರೋಶನ್ ಮನವಿ ಮಾಡಿದ್ದಾರೆ. ಕರೊನಾ ತಡೆಯುವ ಹಿನ್ನೆಲೆಯಲ್ಲಿ ಈ ಕ್ರಮ ವಹಿಸಲಾಗಿದೆ. ಕರೊನಾ ತಡೆಯುವ ಸಂಬಂಧ ವ್ಯಾಪಕ ಪ್ರಚಾರ ಕೈಗೊಳ್ಳಲಾಗುವುದು. ಎಲ್ಲ ಸರ್ಕಾರಿ ಕಚೇರಿಗಳ ಎದುರು ಹ್ಯಾಂಡ್ ಸ್ಯಾನಿಟೈಸರ್ ಅಥವಾ ಸರ್ಜಿಕಲ್ ಸ್ಪಿರಿಟ್ ಡೈಲ್ಯೂಟರ್ ಇಡಲು ಸೂಚಿಸಲಾಗಿದೆ. ಪ್ರತಿ 2 ಗಂಟೆಗೊಮ್ಮೆ ಎಲ್ಲ ಅಧಿಕಾರಿಗಳು ಕೈ ತೊಳೆದುಕೊಳ್ಳಬೇಕು ಎಂದರು. ಎಸ್​ಪಿ ಶಿವ ಪ್ರಕಾಶ ದೇವರಾಜು ಮಾತನಾಡಿ, ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ ಎಂದರು.

    ಎಲ್ಲ ವಾರ್ಡ್​ಗಳಲ್ಲಿ ಸಂತೆ: ಕರೊನಾ ಭೀತಿ ಮುಗಿಯುವವರೆಗೆ ಕಾರವಾರ ಸೇರಿ ವಿವಿಧೆಡೆ ನಡೆಯುವ ವಾರದ ಸಂತೆಯನ್ನು ಒಂದೇ ಕಡೆ ಮಾಡದೆ ವಿವಿಧ ವಾರ್ಡ್​ಗಳಲ್ಲಿ ಮಾಡಲು ಆಯಾ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಜಿಪಂ ಸಿಇಒ ಎಂ.ರೋಶನ್ ತಿಳಿಸಿದರು. ಕುಮಟಾ ಎಪಿಎಂಸಿಯಲ್ಲಿ ಮಾ. 18 ರಂದು ಬುಧವಾರದ ಸಂತೆಯನ್ನು ಕರೊನಾ ತಡೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿಗಳ ಆದೇಶದನ್ವಯ ರದ್ದುಪಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts