More

    ಧಾರವಾಡ ಮತ್ತೆ ನಾಲ್ವರಿಗೆ ಕರೊನಾಘಾತ

    ಧಾರವಾಡ: ಜಿಲ್ಲೆಯಲ್ಲಿ ಸೋಮವಾರ ಮತ್ತೆ 4 ಕೋವಿಡ್ (ಕರೊನಾ) ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇವರು ಮಹಾರಾಷ್ಟ್ರದಿಂದ ಮರಳಿರುವವರೊಂದಿಗೆ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ.

    ಸೋಮವಾರ ಸೋಂಕು ಕಂಡುಬಂದಿರುವವರಲ್ಲಿ 2 ವರ್ಷದ 5 ತಿಂಗಳದ ಬಾಲಕನೂ ಇದ್ದಾನೆ. ಮೂವರು ಒಂದೇ ಕುಟುಂಬದವರು ಎಂದು ಹೇಳಲಾಗಿದೆ.

    ಕರೊನಾ ಸೋಂಕು ದೃಢಪಟ್ಟಿರುವ 33 ವರ್ಷದ ಮಹಿಳೆಗೆ ಪಿ- 2156, 17 ವರ್ಷದ ಬಾಲಕನಿಗೆ ಪಿ- 2157 ಹಾಗೂ 29 ತಿಂಗಳ ಮಗುವಿಗೆ ಪಿ- 2158 ಎಂದು ಸಂಖ್ಯೆ ನೀಡಲಾಗಿದೆ. ಇವರು ಮಹಾರಾಷ್ಟ್ರದಿಂದ ಹಿಂದಿರುಗಿರುವ ಪಿ- 1942, ಪಿ-1943,ಪಿ- 1944 ಹಾಗೂ ಪಿ- 1945 ಅವರೊಂದಿಗೆ ಸಂಪರ್ಕದ ಹಿನ್ನೆಲೆ ಹೊಂದಿದ್ದಾರೆ. ಇವರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಭಾನುವಾರದವರೆಗೆ ಅವರನ್ನು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು.

    33 ವರ್ಷದ ಇನ್ನೊಬ್ಬ(ಪುರುಷ)ನಲ್ಲಿ ಸಹ ಕರೊನಾ ಸೋಂಕು ಪತ್ತೆಯಾಗಿದೆ. ಪಿ- 2181 ಎಂದು ಆತನಿಗೆ ಸಂಖ್ಯೆ ನೀಡಲಾಗಿದೆ. ಈತ ಸಹ ಮಹಾರಾಷ್ಟ್ರ ಪ್ರಯಾಣದ ಇತಿಹಾಸ ಹೊಂದಿದ್ದಾರೆ. ಕೃಷಿ ವಿವಿ ಆವರಣದ ಆಗಮನ ಕೇಂದ್ರದಲ್ಲಿ ಆತನ ಗಂಟಲು ದ್ರವ ಸಂಗ್ರಹಿಸಿದ ನಂತರ ಸಾಂಸ್ಥಿಕ ಕ್ವಾರಂಟೈನ್​ನಲ್ಲಿರಲು ಸೂಚಿಸಲಾಗಿತ್ತು. ಸೋಮವಾರ ಗಂಟಲುದ್ರವ ಪರೀಕ್ಷಾ ವರದಿಯು ಕರೊನಾ ಪಾಸಿಟಿವ್ ಎಂದು ಬಂದಿದೆ.

    ಈ ನಾಲ್ವರನ್ನೂ ಹುಬ್ಬಳ್ಳಿ ಕಿಮ್್ಸ ಆವರಣದಲ್ಲಿಯ ಕರೊನಾ ಚಿಕಿತ್ಸಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅರ್ಧ ಶತಕದತ್ತ: ಸೋಮವಾರ ಪತ್ತೆಯಾದ 4 ಪ್ರಕರಣಗಳಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಕರೊನಾ ಸೋಂಕು ಪ್ರಕರಣಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಕೆಲವು ದಿನಗಳಿಂದ ನಿತ್ಯವೂ ಸೋಂಕು ಪ್ರಕರಣ ವರದಿಯಾಗುತ್ತಿದೆ. ಕೆಂಪು ವಲಯ ಎಂದು ಗುರುತಿಸಲಾಗಿರುವ ರಾಜ್ಯದಿಂದ ಬರುವವರ ಸಂಖ್ಯೆ ಏರುತ್ತಿದ್ದು, ಸೋಂಕಿತರ ಸಂಖ್ಯೆ ಅರ್ಧ ಶತಕ ತಲುಪುವ ದಿನ ದೂರವಿಲ್ಲ ಎಂದು ರ್ತಸಲಾಗಿದೆ.

    ಇತ್ತೀಚೆಗೆ ಪತ್ತೆಯಾಗಿರುವವುಗಳಲ್ಲಿ ಹೆಚ್ಚಿನವು ಮಹಾರಾಷ್ಟ್ರದ ಸಂಬಂಧ ಹೊಂದಿದವುಗಳೇ ಆಗಿವೆ. ಇದುವರೆಗೆ ಮಕ್ಕಳು ಸೇರಿ 10 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದುವರೆಗೆ ಕರೊನಾ ಗೆದ್ದವರಲ್ಲಿ 3 ವರ್ಷದ ಮಗುವಿನಿಂದ 63 ವರ್ಷದವರೆಗಿನವರು ಇದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ 70 ವರ್ಷದ ವ್ಯಕ್ತಿ ಜಿಲ್ಲೆಯಲ್ಲಿ ಕರೊನಾ ಪೀಡಿತರಲ್ಲಿ ಅತಿ ಹಿರಿಯ ಎನ್ನಲಾಗಿದ್ದು, ಆತನೂ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದುಬಂದಿದೆ.

    623 ವರದಿ ಬಾಕಿ: ಜಿಲ್ಲೆಯಲ್ಲಿ ಸೋಮವಾರ ಸಂಜೆವರೆಗಿನ 24 ಗಂಟೆ ಅವಧಿಯಲ್ಲಿ 296 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಭಾನುವಾರ ಇದ್ದ 13154 ನಿಗಾವಹಿಸಿದವರ ಸಂಖ್ಯೆ ಸೋಮವಾರ 13464ಕ್ಕೆ ಏರಿಕೆಯಾಗಿದೆ.

    ಈವರೆಗೆ ಜಿಲ್ಲೆಯಲ್ಲಿ 12738 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 12082 ಜನರ ವರದಿ ನೆಗೆಟಿವ್ ಬಂದಿವೆ. ಇನ್ನೂ 623 ಜನರ ಗಂಟಲು ದ್ರವದ ಪರೀಕ್ಷಾ ವರದಿಗಳು ಬರಬೇಕಿವೆ.

    ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 13464 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 5812 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆ ಪ್ರತ್ಯೇಕ ವಾರ್ಡಗಳಲ್ಲಿ 33 ಜನ ದಾಖಲಾಗಿದ್ದಾರೆ. 4593 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 3026 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

    ಶಂಕಿತರ ಗಂಟಲುದ್ರವ ಪರೀಕ್ಷೆ ಕೇಂದ್ರಗಳ ಸಂಖ್ಯೆ ಜಾಸ್ತಿಯಾಗಿದ್ದು, ಯಾರು ಬೇಕಾದರೂ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ. ಆದರೆ, ಗಂಟಲುದ್ರವ ಪರೀಕ್ಷೆಗೆ ಜಾಸ್ತಿ ಸಮಯ ತಗಲುತ್ತಿದೆ. ಜಿಲ್ಲೆಯಲ್ಲಿ 2 ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಯುತ್ತಿದ್ದು, ತಜ್ಞರು ನಿರಂತರ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts