More

    ಧಾರವಾಡ ಜಿಲ್ಲೆ ಹಲವೆಡೆ ಪ್ರವಾಹ ಭೀತಿ

    ಹುಬ್ಬಳ್ಳಿ/ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಭಾನುವಾರ ಇಡೀ ದಿನ ಸೂರ್ಯದೇವನ ದರ್ಶನ ಸಿಗಲಿಲ್ಲ. ಒಮ್ಮೆ ಸಾಧಾರಣ, ಮತ್ತೊಮ್ಮೆ ಜೋರಾಗಿ ಸುರಿಯುತ್ತಿರುವ ಮಳೆಯಿಂದ ಹಲವು ಸೇತುವೆ, ರಸ್ತೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಳ್ಳ ಕೊಳ್ಳಗಳು ಉಕ್ಕಿ ಹರಿಯತೊಡಗಿದ್ದು, ಹಲವು ಕಡೆ ಪ್ರವಾಹ ಭೀತಿ ಉಂಟಾಗಿದೆ. ತುಪ್ಪರಿ ಹಳ್ಳದ ನೀರಿನ ಹರಿವಿನಲ್ಲಿ ಹೆಚ್ಚಳವಾಗಿದ್ದು, ಧಾರವಾಡ ತಾಲೂಕಿನ ಹಾರೋಬೆಳವಡಿಯ ಸೇತುವೆ ಮೇಲೆ ಹರಿಯುತ್ತಿದೆ. ಇದರಿಂದ ಧಾರವಾಡ-ಸವದತ್ತಿ ನೇರ ಸಂಪರ್ಕ ಕಡಿತವಾಗಿದೆ.

    ಕಂಬಾರಗಣವಿ ಸೇತುವೆ ಮುಳುಗಡೆ: ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನ ಕಂಬಾರಗಣವಿ ಸೇತುವೆ ಮುಳುಗಡೆಯಾದ ಪರಿಣಾಮ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಧಾರವಾಡ ತಾಲೂಕಿನ ಹೊಸೆಟ್ಟಿ ಗ್ರಾಮದ ಕೆರೆ ಭರ್ತಿಯಾಗಿ ಗ್ರಾಮಕ್ಕೆ ನೀರು ನುಗ್ಗಿದೆ. ಸದ್ಯ ಗ್ರಾಮದ ಬೀದಿಗಳೇ ಚಿಕ್ಕ ಹಳ್ಳಗಳಂತಾಗಿವೆ. ಇನ್ನೂ ಮಳೆ ಮುಂದುವರಿದರೆ ಮನೆಗಳಿಗೆ ನೀರು ನುಗ್ಗುವ ಅಪಾಯವಿದೆ. ಧಾರವಾಡ ಜಿಲ್ಲೆಯ ಎಲ್ಲ ಕೆರೆಗಳೂ ಭರ್ತಿಯಾಗಿವೆ. ಅನೇಕ ಕಡೆಗಳಲ್ಲಿ ಹೊಲಕ್ಕೆ ನೀರು ನುಗ್ಗಿ ಹಾನಿಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಾಣಿಜ್ಯ ನಗರಿ ಹುಬ್ಬಳ್ಳಿ ಸ್ತಬ್ಧವಾಗಿದೆ. ಜನ ಮನೆ ಬಿಟ್ಟು ಹೊರಗೆ ಬಾರದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳು ಭಣಗುಡುತ್ತಿವೆ.

    ಎರಡೇ ದಿನಗಳಲ್ಲಿ 34 ಮಿ.ಮೀ. ಮಳೆ
    ಆಗಸ್ಟ್ ತಿಂಗಳಲ್ಲಿ ಸುರಿಯಬೇಕಿದ್ದ ಮಳೆ ಬರೀ ಎರಡೇ ದಿನಗಳಲ್ಲಿ ಸುರಿದ ಪರಿಣಾಮ ಅನೇಕ ಅವಾಂತರಗಳು ಸೃಷ್ಟಿಯಾಗಿವೆ. ಜಿಲ್ಲಾದ್ಯಂತ ಆಗಸ್ಟ್ ತಿಂಗಳಲ್ಲಿ ವಾಡಿಕೆಯಂತೆ ಒಟ್ಟು 33 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಎರಡೇ ದಿನಗಳಲ್ಲಿ 34 ಮಿ.ಮೀ. ಮಳೆಯಾದ ಪರಿಣಾಮ ಜನರು ಮನೆಯಿಂದ ಹೊರಬರದಂತಾಗಿದೆ.

    ಶನಿವಾರ ರಾತ್ರಿಯಿಂದ ಒಂದೇ ಸಮನೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಳೆದ ಬಾರಿ ತೀವ್ರ ಆತಂಕ ಮೂಡಿಸಿದ್ದ ಅಳ್ನಾವರ ಪಟ್ಟಣದ ಇಂದಿರಮ್ಮನ ಕೆರೆ ಈ ಸಲವೂ ಭರ್ತಿಯಾಗುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ಅನಾಹುತವಾಗಬಹುದು ಎಂಬ ಭೀತಿ ಉಂಟಾಗಿದೆ. ಜತೆಗೆ ಅಲ್ಲಿಯ ಡೌಗಿ ನಾಲಾ ಸಹ ತುಂಬಿದ್ದು, ತಿಲಕನಗರ ಹಾಗೂ ದೇಸಾಯಿ ಚಾಳ ಜನರಿಗೆ ಪ್ರವಾಹದ ಭೀತಿ ಶುರುವಾಗಿದೆ. ಈಗಾಗಲೇ ವಿಪರೀತ ಮಳೆಯಾಗಿದ್ದರಿಂದ ಮುಂಗಾರು ಬೆಳೆ ನಷ್ಟವಾಗಿದೆ. ಹೆಸರು ಬೆಳೆ ಕೊಳೆಯುವ ಸ್ಥಿತಿಗೆ ಬಂದಿದೆ ಎಂದು ರೈತರು ಚಿಂತೆಗೀಡಾಗಿದ್ದಾರೆ. ಇನ್ನೂ ಒಂದು ವಾರ ಸಾಧಾರಣ ವಾತಾವರಣವಿದ್ದರೆ, ಅಷ್ಟಿಷ್ಟು ಬೆಳೆ ಕೈಗೆ ಬರುತ್ತಿತ್ತು. ಮಳೆ ತೀವ್ರಗೊಂಡಲ್ಲಿ ಸೋಯಾಬೀನ್, ಗೋವಿನಜೋಳ ಇತರ ಬೆಳೆಗಳು ಸಹ ನೆಲಕಚ್ಚುವ ಆತಂಕ ಉಂಟಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts