More

    ಬಿಡಾಡಿ ಜಾನುವಾರುಗಳಿಗೆ ರಿಫ್ಲೆಕ್ಟರ್ ಬೆಲ್ಟ್

    ಎನ್.ಆರ್.ಪುರ: ಬಿಡಾಡಿ ಜಾನುವಾರುಗಳಿಂದ ರಾತ್ರಿ ವೇಳೆ ವಾಹನ ಅಪಘಾತಗಳಾಗುತ್ತಿವೆ. ಬಿಡಾಡಿ ಜಾನುವಾರುಗಳಿಗೆ ರಿಫ್ಲೆಕ್ಟರ್ ಬೆಲ್ಟ್ ಅಳವಡಿಸುವುದರ ಮೂಲಕ ಅಪಘಾತ ತಪ್ಪಿಸುವ ಯತ್ನ ನಡೆದಿದೆ. ಇದು ಜಿಲ್ಲೆಯಲ್ಲಿಯೇ ಹೊಸ ಪ್ರಯೋಗ ಎಂದು ಜಿಲ್ಲಾ ಪಶು ಪಾಲನಾ ಇಲಾಖೆ ಉಪ ನಿರ್ದೇಶಕ ಹಾಗೂ ಬರ ಪರಿಸ್ಥಿತಿ ನಿರ್ವಹಣೆ ತಾಲೂಕು ನೋಡೆಲ್ ಅಧಿಕಾರಿ ಮೋಹನ್‌ಕುಮಾರ್ ಹೇಳಿದರು.

    ತಾಪಂನಲ್ಲಿ ಶುಕ್ರವಾರ ನಡೆದ ಬರ ಪರಿಸ್ಥಿತಿ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಸಭೆಯಲ್ಲಿ ಮಾತನಾಡಿ, ಬಿಡಾಡಿ ಜಾನುವಾರುಗಳು ರಸ್ತೆಯಲ್ಲಿ ರಾತ್ರಿ ಮಲಗುವುದರಿಂದ ವಾಹನಗಳ ಅಪಘಾತವಾಗುತ್ತಿದೆ. ಇದನ್ನು ಮನಗಂಡ ಜಿಪಂ ಸಿಇಒ ಡಾ. ಜಿ.ಗೋಪಾಲಕೃಷ್ಣ ಅವರು ವೈಯಕ್ತಿಕ ಗಮನ ಹರಿಸಿ ಬಿಡಾಡಿ ಜಾನುವಾರುಗಳಿಗೆ ರಿಫ್ಲೆಕ್ಟರ್ ಬೆಲ್ಟ್ ಅಳವಡಿಸುವ ಹೊಸ ಪ್ರಯೋಗ ಮಾಡಿದ್ದಾರೆ. ಕೇವಲ ರಿಫ್ಲೆಕ್ಟರ್ ಬೆಲ್ಟ್ ಅಳವಡಿಸಿದರೆ ಸಮಸ್ಯೆ ಸಂಪೂರ್ಣ ಬಗೆಹರಿಯುವುದಿಲ್ಲ. ಆದರೆ ಇದು ವಿಭಿನ್ನ ಕ್ರಮ ಎಂದು ಹೇಳಿದರು.
    ಪಶು ಪಾಲನಾ ಇಲಾಖೆಯಲ್ಲಿ ಮುಂದಿನ 28 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ಬಿಸಿಲಿನ ಝಳ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮಕೈಗೊಳ್ಳಬೇಕಿದೆ. ತಾಲೂಕಿನಲ್ಲಿ 57 ಹಳ್ಳಿಗಳಿವೆ. ಇವುಗಳಲ್ಲಿ ಕೆಲವು ಹಳ್ಳಿಗಳಲ್ಲಿ ಮಾತ್ರ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ಇದೆ. ಉಳಿದ ಹಳ್ಳಿಗಳಲ್ಲೂ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿದರೆ ಪಶು, ಪಕ್ಷಿಗಳಿಗೂ ಅನುಕೂಲವಾಗಲಿದೆ ಎಂದರು. ಜಾನುವಾರುಗಳಿಗೆ ಅಳವಡಿಸಲು ರಿಫ್ಲೆಕ್ಟರ್ ಬೆಲ್ಟ್‌ಗಳನ್ನು ಗ್ರಾಪಂಗಳಿಗೆ ವಿತರಿಸಿದರು.
    28 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅನೇಕ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ನಿಂದ ನೀರು ಪೂರೈಸಲಾಗುತ್ತಿದೆ. ಪಿಡಿಒಗಳು ಕುಡಿಯುವ ನೀರಿನ ಸಣ್ಣಪುಟ್ಟ ಕಾಮಗಾರಿಗಳನ್ನು ಅವರ ಹಂತದಲ್ಲೇ ಕೂಡಲೇ ಬಗೆಹರಿಸಿಕೊಳ್ಳಬೇಕು. ಗ್ರಾಪಂ ಅನುದಾನದಿಂದ ಸಾಧ್ಯವಾಗದೆ ಇರುವಂಥ ಕಾಮಗಾರಿಗಳ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಬೇಕೆಂದು ಪಿಡಿಒಗಳಿಗೆ ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ನಿರ್ದೇಶನ ನೀಡಿದರು. ಗ್ರಾಪಂ ವ್ಯಾಪ್ತಿಯ ಬೋರ್‌ವೆಲ್‌ಗಳನ್ನು ದುರಸ್ತಿಗೊಳಿಸಬೇಕು. ದುರಸ್ತಿ ಮಾಡಿಸಿದರೂ ಸರಿಯಾಗುವುದಿಲ್ಲ ಎಂದಾದರೆ ಮಾತ್ರ ಹೊಸ ಬೋರ್‌ವೆಲ್ ಕೊರೆಸಲು ಪ್ರಸ್ತಾವನೆ ಸಲ್ಲಿಸಿ. ಹೊಸ ಬೋರ್‌ವೆಲ್ ಕೊರೆಸುವುದೊಂದೇ ಪರಿಹಾರವಲ್ಲ. ಕೆಲವು ಗ್ರಾಪಂಗಳಲ್ಲಿ ಕುಡಿಯುವ ನೀರು ಒದಗಿಸಲು ಪೈಪ್‌ಲೈನ್ ಸಂಪರ್ಕ ಕಲ್ಪಿಸಬೇಕಾಗುತ್ತದೆ. ಇನ್ನು ಕೆಲವು ಬೋರ್‌ವೆಲ್‌ಗಳಿಗೆ ಹೊಸ ಮೋಟರ್ ಖರೀದಿ ಮಾಡಬೇಕಾಗುತ್ತದೆ. ಇಂಥ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮಾರ್ಗದರ್ಶನ ನೀಡಿದರು.
    ಸಭೆಯಲ್ಲಿ ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ್, ಜಿಪಂ ಎಇಇ ವೀರಭದ್ರಪ್ಪ, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ, ಕಚೇರಿ ಅಧೀಕ್ಷಕಿ ಕೆ.ಆರ್.ಮಧು, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts