More

    ಧಾರವಾಡ ಎಪಿಎಂಸಿಯಲ್ಲಿ ಮತ್ತೆ ಜನಸಂದಣಿ

    ಧಾರವಾಡ: ಲಾಕ್​ಡೌನ್ ಆದೇಶಕ್ಕೆ ನಗರದ ಹೊಸ ಎಪಿಎಂಸಿ ಆವರಣದಲ್ಲಿ ಮಾತ್ರ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಆವರಣಕ್ಕೆ ನಿತ್ಯವೂ ತೆರಳುವ ಪೊಲೀಸ್ ಸಿಬ್ಬಂದಿ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡುತ್ತಲೇ ಇದ್ದಾರೆ. ಆದರೆ, ಜನರು ಮಾತ್ರ ಅವರ ಮಾತಿಗೆ ಕ್ಯಾರೆ ಎನ್ನುತ್ತಿಲ್ಲ.

    ಬೆಳಗ್ಗೆ 6 ಗಂಟೆಯಿಂದ ಕೆಲ ತಾಸುಗಳ ಕಾಲ ಎಪಿಎಂಸಿ ಆವರಣದಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗುತ್ತಿದೆ. ಆದರೆ, ಜನರು ಮಾತ್ರ ಲಾಕ್​ಡೌನ್ ಪರಿಜ್ಞಾನವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಮಾಸ್ಕ್ ಧರಿಸದೇ ಆವರಣಕ್ಕೆ ಆಗಮಿಸುವ ಮೂಲಕ ಸರ್ಕಾರದ ಆದೇಶಗಳು ನಮಗೆ ಅನ್ವಯಿಸುವುದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

    ಇಷ್ಟು ದಿನಗಳ ಕಾಲ ಸ್ಥಳೀಯ ಠಾಣೆ ಪೊಲೀಸರು ಹಾಗೂ ಸಿಬ್ಬಂದಿ ಆಗಮಿಸಿ ಜನರಿಗೆ ತಿಳಿವಳಿಕೆ ಹೇಳುವ ಕೆಲಸ ಮಾಡುತ್ತಿದ್ದರು. ಆದರೆ, ಶನಿವಾರ ಸ್ವತಃ ಎಸಿಪಿ ಅನುಷಾ ಅವರೇ ಆಗಮಿಸಿ ಕೆಲವರಿಗೆ ಲಾಠಿ ರುಚಿ ತೋರಿಸುವ ಮೂಲಕ ಎಲ್ಲರೂ ಆದೇಶ ಪಾಲನೆ ಮಾಡಬೇಕು ಎಂಬ ಸಂದೇಶ ನೀಡಿದ್ದಾರೆ.

    ಬಡಾವಣೆಗಳಲ್ಲೇ ತರಕಾರಿ ವ್ಯಾಪಾರಸ್ಥರು ಆಗಮಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದ್ದರೂ ಜನರು ಮಾತ್ರ ಎಪಿಎಂಸಿಗೆ ತೆರಳುತ್ತಿರುವುದು ತಪ್ಪುತ್ತಿಲ್ಲ. ಇನ್ನು ಮುಂದಿನ ದಿನಗಳಲ್ಲಾದರೂ ತಮ್ಮ ಬಡಾವಣೆಗಳಲ್ಲೇ ಅಗತ್ಯ ವಸ್ತುಗಳನ್ನು ಖರೀದಿ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾಡಳಿತ ಸೋಂಕು ತಡೆಗೆ ಇಷ್ಟೆಲ್ಲ ವ್ಯವಸ್ಥೆ ಮಾಡಿರುವುದು ಪ್ರಯೋಜನಕ್ಕೆ ಬರದಂತಾಗುತ್ತದೆ.

    ಶ್ರೀರಾಮ ನವಮಿ ಉತ್ಸವ ರದ್ದು: ಕಿತ್ತೂರು ತಾಲೂಕಿನ ಕಾದರವಳ್ಳಿ ಗ್ರಾಮದಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಶ್ರೀರಾಮ ನವಮಿ ಉತ್ಸವವನ್ನು ರದ್ದು ಮಾಡಲಾಗಿದೆ. ಕರೊನಾ ಕಾಯಿಲೆ ಹರಡುವಿಕೆ ತಡೆಯುವ ಹಿನ್ನೆಲೆಯಲ್ಲಿ ಉತ್ಸವ ರದ್ದು ಮಾಡಲಾಗಿದೆ. ಭಕ್ತರು ಸಹಕರಿಸಬೇಕು ಎಂದು ಶ್ರೀರಾಮ ಮಂದಿರ ಪೀಠಾಧಿಪತಿ ಶ್ರೀ ಗುರುಪುತ್ರ ಮಹಾರಾಜರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts