More

    ಧಾರವಾಡದಲ್ಲಿ ನಿಯಂತ್ರಣಕ್ಕೆ ಬಂದ ಜನ ಸಂದಣಿ

    ಧಾರವಾಡ: ಲಾಕ್​ಡೌನ್ ಆದೇಶ ಹೊರಬಿದ್ದ ಎರಡ್ಮೂರು ದಿನಗಳ ಕಾಲ ನಗರದ ಹೊಸ ಎಪಿಎಂಸಿ ಆವರಣದಲ್ಲಿ ಜಮಾಯಿಸುತ್ತಿದ್ದ ಜನರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಆದರೆ ಭಾನುವಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಜನಸಂದಣಿ ತಕ್ಕಮಟ್ಟಿಗೆ ನಿಯಂತ್ರಣವಾಗಿದೆ.

    ಜನಸಂದಣಿ ನಿಯಂತ್ರಣಕ್ಕೆ ಏನೆಲ್ಲ ಕ್ರಮಕೈಗೊಳ್ಳಬಹುದು ಎಂಬ ವಿಚಾರವಾಗಿ ವ್ಯಾಪಾರಸ್ಥರೊಂದಿಗೆ ತಹಸೀಲ್ದಾರ್ ಸಂತೋಷ ಬಿರಾದಾರ ಹಾಗೂ ಎಪಿಎಂಸಿ ಅಧ್ಯಕ್ಷ ಮಹಾವೀರ ಜೈನ್ ಶನಿವಾರ ಸಮಾಲೋಚನೆ ನಡೆಸಿದ್ದರು. ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಭಾನುವಾರದಿಂದ ಅನುಷ್ಠಾನಕ್ಕೆ ತಂದ ಹಿನ್ನೆಲೆಯಲ್ಲಿ ಜನಸಂದಣಿ ಕಡಿಮೆಯಾಗಿದೆ.

    ತರಕಾರಿ ಖರೀದಿಗಾಗಿ ಸಗಟು ವ್ಯಾಪಾರಸ್ಥರಲ್ಲದೆ, ಚಿಲ್ಲರೆ ವ್ಯಾಪಾರಸ್ಥರೂ ಆಗಮಿಸಿ ಅಲ್ಲೇ ವ್ಯಾಪಾರ ನಡೆಸುತ್ತಿದ್ದರು. ಇದು ಜನಸಂದಣಿ ಹೆಚ್ಚಾಗಲು ಪ್ರಮುಖ ಕಾರಣವಾಗಿತ್ತು. ಹೀಗಾಗಿ ಭಾನುವಾರ ಆವರಣದ ಎರಡೂ ಗೇಟ್​ಗಳನ್ನು ಬಂದ್ ಮಾಡಿ ಪಾಸ್ ಹೊಂದಿರುವ ವ್ಯಾಪಾರಿಗಳಿಗೆ ಮಾತ್ರ ಪ್ರವೇಶ ನೀಡಿ, ಆವರಣದಲ್ಲಿ ಚಿಲ್ಲರೆ ವ್ಯಾಪಾರ ಸಂಪೂರ್ಣ ಬಂದ್ ಮಾಡಲಾಗಿತ್ತು.

    ಆವರಣದಲ್ಲಿ ಸಗಟು ವ್ಯಾಪಾರಿಗಳು ಕುಳಿತುಕೊಳ್ಳಲು ಮಾರ್ಕಿಂಗ್ ಸಹ ಮಾಡಲಾಗಿದೆ. ವ್ಯಾಪಾರಿಗಳಿಗೆ ಗುರುತಿಸಿದ ಜಾಗದಲ್ಲೇ ಕುಳಿತು ವ್ಯವಸ್ಥಿತವಾಗಿ ವ್ಯಾಪಾರ ನಡೆಸಲು ಸೂಚಿಸಲಾಗಿದೆ. ಈಗಾಗಲೇ 80ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಪಾಸ್ ವಿತರಿಸಿದ್ದು, ಗೇಟ್ ಬಳಿ ಪೊಲೀಸರು ತಪಾಸಣೆ ನಡೆಸಿ ಬಿಡುತ್ತಿದ್ದಾರೆ. ವಿನಾಕಾರಣ ಆವರಣ ಪ್ರವೇಶಿಸುವ ಜನರಿಗೆ ನಿಷೇಧ ಹೇರಲಾಗಿದೆ. ಸ್ಥಳದಲ್ಲೇ ಬೀಡು ಬಿಟ್ಟಿದ್ದ ತಹಸೀಲ್ದಾರ್ ಸಂತೋಷ ಬಿರಾದಾರ, ಎಪಿಎಂಸಿ ಅಧ್ಯಕ್ಷ ಮಹಾವೀರ ಜೈನ್, ಎಸಿಪಿ ಅನುಷಾ ಜೆ ಹಾಗೂ ಸ್ಥಳೀಯ ಠಾಣೆ ಪೊಲೀಸರು, ವ್ಯಾಪಾರ ಸುಗಮವಾಗಿ ನಡೆಯುವಂತೆ ಎಚ್ಚರ ವಹಿಸಿದ್ದರು.

    ಮಾರುಕಟ್ಟೆಗೆ ಆಗಮಿಸುತ್ತಿದ್ದ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಖರೀದಿಯಲ್ಲಿ ತೊಡಗುತ್ತಿದ್ದರು. ಹೀಗಾಗಿ ಜನಸಂದಣಿ ನಿಯಂತ್ರಣ ತಲೆನೋವಾಗಿತ್ತು. ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಜನರು ತಮ್ಮ ಬಡಾವಣೆಗಳಿಗೆ ಆಗಮಿಸುವ ವಾಹನಗಳಲ್ಲೇ ತರಕಾರಿಗಳನ್ನು ಖರೀದಿ ಮಾಡಬೇಕು ಎಂದು ಎಪಿಎಂಸಿ ಅಧ್ಯಕ್ಷ ಮಹಾವೀರ ಜೈನ್ ತಿಳಿಸಿದ್ದಾರೆ.

    ವ್ಯಾಪಾರಿಗಳಿಗೆ ತಿಳಿವಳಿಕೆ: ಸುಮಾರು ಎರಡ್ಮೂರು ದಿನಗಳ ಕಾಲ ಜನರನ್ನು ಚದುರಿಸಲು ಲಾಠಿ ಬೀಸುತ್ತಿದ್ದ ಪೊಲೀಸರು, ಭಾನುವಾರ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದರು. ಉಪನಗರ ಠಾಣೆ ಇನ್ಸ್​ಪೆಕ್ಟರ್ ಪ್ರಮೋದ ಯಲಿಗಾರ ಹಾಗೂ ತಂಡ, ಆವರಣಕ್ಕೆ ಪ್ರವೇಶಿಸುವ ವ್ಯಾಪಾರಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಲ್ಲದೆ, ತಮಗೆ ನೀಡಿದ ಪಾಸ್​ಗಳನ್ನು ಧರಿಸಬೇಕು ಎಂಬ ಸಂದೇಶ ನೀಡುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts