More

    ಧರ್ಮ ಸಮ್ಮೇಳನಕ್ಕೆ ಸಹಕರಿಸಿದವರಿಗೆ ಅಭಾರಿ : ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿಕೆ

    ಹಾಸನ : ಬೇಲೂರಿನಲ್ಲಿ ಹತ್ತು ದಿನಗಳಿಂದ ನಡೆದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಜರುಗಿದ್ದು ಇತಿಹಾಸ ನಿರ್ಮಿಸಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಗೌರವ ಸಲ್ಲಿಸುತ್ತೇವೆ. ಮುಖ್ಯವಾಗಿ ಪೌರ ಕಾರ್ಮಿಕರ ಸೇವೆ ಶ್ಲಾಘನೀಯವಾಗಿದೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ವೀರ ಸಿಂಹಾಸನ ಮಹಾ ಸಂಸ್ಥಾನದ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.


    ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೇಲೂರು ಪುರಸಭೆ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.


    ಸಮ್ಮೇಳನದಲ್ಲಿ ಪೌರ ಕಾರ್ಮಿಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇದರಿಂದ ಸ್ವಚ್ಛತೆ ಬಗ್ಗೆ ಎಲ್ಲೂ ಅಪಸ್ವರ ಕೇಳಿಬರಲಿಲ್ಲ. ಅವರ ಸೇವೆಯನ್ನು ಗೌರವಿಸಲಾಗುವುದು. ಸಮ್ಮೇಳನ ಅಭೂತಪೂರ್ವವಾಗಿ ಪೂರ್ಣಗೊಂಡಿದೆ. ಇದರ ನೆನಪಿಗಾಗಿ ಪ್ರಮುಖ ವೃತ್ತ ಅಥವಾ ರಸ್ತೆಯಲ್ಲಿ ಜಗದ್ಗುರು ರೇಣುಕಾಚಾರ್ಯರ ಪ್ರತಿಮೆ, ನಾಮಕರಣ ಮಾಡಿಸಿದರೆ ಇದರ ನೆನಪು ಅಚ್ಚಳಿಯದೆ ಉಳಿಯುತ್ತದೆ ಎಂದರು.


    ಸಮ್ಮೇಳನ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಸ್.ಲಿಂಗೇಶ್ ಅವರು, ತಮ್ಮ ಮಗನ ನೆನಪಿಗಾಗಿ ಆನೆ (ಗಜಲಕ್ಷ್ಮೀ) ನೀಡುವುದಾಗಿ ಹೇಳಿದ್ದಾರೆ. ಮುಂದಿನ ದಸರಾದೊಳಗೆ ಗಜಲಕ್ಷ್ಮೀ ಬಂದರೆ ಅದು ಕೂಡ ಒಂದು ಇತಿಹಾಸವಾಗುತ್ತದೆ. ಕಳೆದ ಎಲ್ಲ ದಸರಾಗಳನ್ನು ಮೀರಿ ಬೇಲೂರಿನ ದಸರಾ ಇತಿಹಾಸ ಸೃಷ್ಟಿಸಿದೆ. ಮಾಧ್ಯಮ ಪ್ರಚಾರ ಅತ್ಯುನ್ನತವಾಗಿ ಮೂಡಿ ಬಂದಿದೆ. ಇದನ್ನೂ ಎಂದೆಂದಿಗೂ ಮರೆಯಲಾಗದು. ಸುದ್ದಿಗಳನ್ನು ಸಂಗ್ರಹಿಸಿ ಕೆಲವರು ಪುಸ್ತಕದ ರೂಪದಲ್ಲಿ ನಮಗೆ ಒದಗಿಸಿ ಕೊಟ್ಟಿದ್ದಾರೆ. ಎಲ್ಲವನ್ನೂ ಸಂಗ್ರಹಿಸಿ ಒಂದು ಕಿರು ಹೊತ್ತಿಗೆ ಮಾಡಿ ಬಿಡುಗಡೆ ಮಾಡುತ್ತೇವೆ ಎಂದು ಶ್ರೀಗಳು ತಿಳಿಸಿದರು.


    ನಮ್ಮ ಈ ಬೀಳ್ಕೊಡುಗೆ ಸಹ ಮಿನಿ ದಸರಾ ಎಂಬಂತಿದೆ. ನಮ್ಮ ಸವಾಲು 52 ಅಡಿ ಎತ್ತರದ ಪಂಚಾಚಾರ್ಯರ ಪ್ರತಿಮೆ ಪ್ರತಿಷ್ಠಾಪನೆ ಮಾಡುವುದು. ಮಠದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮಠದ 3 ಕಿ.ಮೀ.ರಸ್ತೆಯನ್ನು 8 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಮೂಲ ಗುರುಪೀಠ 75 ವರ್ಷದ ಹಿಂದಿನ ಕಟ್ಟಡವನ್ನು ಹಾಗೆಯೇ ವಿನ್ಯಾಸ ಮಾಡುವ ದೃಷ್ಟಿಯಿಂದ ಹೆಜ್ಜೆಯನ್ನಿಡುತ್ತಿದ್ದು 3 ವರ್ಷದಲ್ಲಿ ಮುಗಿಯಬಹುದು. ಈ ಕಾರ್ಯಗಳಿಗೆ ಭಕ್ತರ ಸಹಕಾರ ಅತ್ಯವಶ್ಯಕ ಎಂದರು.
    ಬೇಲೂರಿನ ಈ ಕಾರ್ಯಕ್ರಮ ಮರೆಯಲು ಸಾಧ್ಯವಿಲ್ಲ. ಈ ಭಾಗದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ತಪ್ಪದೆ ಬಂದಿದ್ದೇವೆ. ಮಲೆನಾಡಿನ ಕಾರ್ಯಕ್ರಮ ಎಂದರೆ ಸಂತೋಷ. ಸಮಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಪೀಠದ ಬಗ್ಗೆ ಗೌರವ ವಿರುವುದನ್ನು ನಾವು ಸ್ಮರಿಸುತ್ತೇವೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts