More

    ದ್ವಾಪರಯುಗದ ಮುಳಬಾಗಿಲು ಆಂಜನೇಯ ದೇಗುಲ

    ಮುಳಬಾಗಿಲು: ದ್ವಾಪರಯುಗದಲ್ಲಿ ಶ್ರೀಕೃಷ್ಣ ಪರಮಾತ್ಮನ ಆಜ್ಞೆಯ ಮೇರೆಗೆ ಅರ್ಜುನನಿಂದ ಪ್ರತಿಷ್ಠಾಪನೆಗೊಂಡ ಮುಳಬಾಗಿಲಿನ ಪುರಾಣ ಪ್ರಸಿದ್ಧ ಆಂಜನೇಯ ದೇವಾಲಯ ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ.

    ಭಾಸ್ಕರ ಕ್ಷೇತ್ರವೆಂದು ಕರೆಯುವ ಮುಳಬಾಗಿಲು ಈ ಹಿಂದೆ ಕೋಟೆಗಳಿಂದ ಕೂಡಿದ್ದು, ಮೂಡಲಬಾಗಿಲಾಗಿ ಪ್ರಸಿದ್ಧಿ ಹೊಂದಿದೆ. ಹಿಂದೆ ತಿರುಪತಿಗೆ ತೆರಳುವ ಭಕ್ತರು ಆಂಜನೇಯಸ್ವಾಮಿ ದರ್ಶನ ಪಡೆದೇ ಪಾದಯಾತ್ರೆ ತೆರಳುತ್ತಿದ್ದರು. ಈಗಲೂ ಕೆಲವರು ಇದನ್ನು ರೂಢಿಸಿಕೊಂಡಿದ್ದಾರೆ. ತಿರುಪತಿಗೆ ಹೋಗುವವರು ಆಂಜನೇಯಸ್ವಾಮಿ ದರ್ಶನ ಪಡೆದು ಹೋದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ. ಮೈಸೂರು ಮಹಾರಾಜರು ತಿರುಪತಿಗೆ ತೆರಳಬೇಕಾದರೆ ಆಂಜನೇಯಸ್ವಾಮಿ ದರ್ಶನ ಪಡೆದು ತೆರಳುತ್ತಿದ್ದರು.

    ಈ ಸ್ಥಳ ಪುರಾಣದಂತೆ ಭಾಸ್ಕರ ಕ್ಷೇತ್ರ, ಕದಳಿಷಂಡವನ, ಶತಕವಾಟಪುರಿ, ಅಂಜನಾಪುರ, ಮೂಡಲಬಾಗಿಲು ಧಾರ್ಮಿಕ ಪುಣ್ಯಕ್ಷೇತ್ರಗಳಿಗೆ ಹೆಸರುವಾಸಿಯಾಗಿದ್ದು ಹಲವಾರು ಪುರಾಣಪ್ರಸಿದ್ಧ ದೇವಾಲಯಗಳನ್ನು ಈಗಲೂ ಮುಳಬಾಗಿಲು ಸುತ್ತಮುತ್ತ ಕಾಣಬಹುದಾಗಿದೆ. ಬೃಗು ಮಹಾಮುನಿಗಳಿಂದ ಪ್ರತಿಷ್ಠಾಪಿಸಲಾದ ಸೀತಾ ಕೋದಂಡರಾಮ ಸಮೇತ ಲಕ್ಷ್ಮಣ ದೇವರ ಪ್ರತಿಷ್ಠಾಪನೆ ಮಾಡಲಾಗಿದ್ದು, ವಸಿಷ್ಠ ಮಹಾಮುನಿಗಳು ಈ ಕ್ಷೇತ್ರದಲ್ಲಿ ಆರಾಧನೆ ಮಾಡಿದ್ದಾರೆ ಎಂಬ ಐತಿಹ್ಯವಿದೆ.

    ಬೃಗು ಮಹಾಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಪದ್ಮಾವತಿ ವೆಂಕಟರವಣಸ್ವಾಮಿ ದೇವಾಲಯ ಹಾಗೂ ಭೂನೀಳಾ ದೇವಿ ಸಮೇತ ಗೋವಿಂದರಾಜಸ್ವಾಮಿ ದೇವಾಲಯ, ವರದರಾಜಸ್ವಾಮಿ ದೇವಾಲಯ ಇರುವುದು ವಿಶೇಷ. ಈ ದೇವಾಲಯಗಳನ್ನು ದಾನಿಗಳು ಇತ್ತೀಚೆಗೆ ಮರು ನಿರ್ಮಾಣ ಮತ್ತು ಅಭಿವೃದ್ಧಿ ಮಾಡಿದ್ದಾರೆ.

    ಮಾಹಿತಿಗೆ ಸಂಪರ್ಕಿಸಿ: ದೇವಾಲಯದ ಪ್ರಧಾನ ಅರ್ಚಕರು ಇತ್ತೀಚೆಗೆ ಮೃತಪಟ್ಟಿದ್ದು ಹಿರಿಯ ಅರ್ಚಕ ರಾಮಕೃಷ್ಣಮಾಚಾರ್ ಸೇರಿ ಹಲವು ಅರ್ಚಕರು ಪೂಜಾ ಕಾರ್ಯ ಮುಂದುವರಿಸಿದ್ದಾರೆ. ದೇವಾಲಯದ ಪೂಜಾ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕ ಸಿ.ಚೆಲುವಸ್ವಾಮಿ, ಮೊ.ಸಂ.9902912011ಗೆ ಸಂಪರ್ಕಿಸಬಹುದು.

    ದ್ವಾಪರಯುಗದ ಇತಿಹಾಸ: ಪಾಂಡವರು ಕುರುಕ್ಷೇತ್ರದ ಮಹಾ ಯುದ್ಧವನ್ನು ಗೆದ್ದ ನಂತರ ಅರ್ಜುನ ರಥದ ಮೇಲಿದ್ದ ಹನುಮಧ್ವಜದ ಮೂರ್ತಿಯನ್ನು ಶ್ರೀ ಕೃಷ್ಣನ ಆಜ್ಞೆ ಮೇರೆಗೆ ದ್ವಾಪರ ಯುಗಾಂತ್ಯದಲ್ಲಿ ಪ್ರತಿಷ್ಠಾಪಿಸಿರುವ ಪುಣ್ಯಕ್ಷೇತ್ರ ಇದಾಗಿದೆ.

    ಕೇದಿಗೆ ಹೂವುಗಳಿಂದ ವಿಶೇಷ ಪೂಜೆ: ಬೇರೆ ಯಾವ ಭಾಗಗಳಲ್ಲಿ ಸಿಗದ ಕೇದಿಗೆ ಹೂವುಗಳು ಮುಳಬಾಗಿಲು ಸುತ್ತಮುತ್ತ ಪ್ರತಿದಿನವೂ ದೇವರ ಪೂಜೆಗೆ ಸಿಗುತ್ತಿದ್ದು, ಪ್ರತಿನಿತ್ಯ ಆಂಜನೇಯಸ್ವಾಮಿಗೆ ಕೇದಿಗೆ ಹೂಗಳಿಂದ ಪೂಜೆ ಸಲ್ಲಿಸುವುದು ವಿಶೇಷ. ಕೇದಿಗೆ ಹೂವಿನ ಮುಳ್ಳುಗಳಿರುವ ಎಲೆಗಳು ಸುಗಂಧ ಭರಿತವಾಗಿದ್ದು, ದೇವರಿಗೆ ಅತಿ ಶ್ರೇಷ್ಠ. ಪ್ರತಿದಿನವೂ ಸಿಗುತ್ತಿರುವುದು ದೇವರ ಮಹಿಮೆಗೆ ಸಾಕ್ಷಿಯಾಗಿದೆ.

    ದೇವಾಲಯದಲ್ಲಿ ನಡೆಯುವ ಪ್ರಮುಖ ಕಾರ‌್ಯಕ್ರಮಗಳು: ರಾಮೋತ್ಸವ, ಬ್ರಹ್ಮೋತ್ಸವ, ಲಕ್ಷಾರ್ಚನೆ, ಶರನ್ನವರಾತ್ರಿ, ರಥಸಪ್ತಮಿ, ಹನುಮ ಜಯಂತಿ, ವಿಷ್ಣು ದೀಪೋತ್ಸವ ನಡೆಯಲಿದೆ. ದೇವಾಲಯ ಆವರಣದಲ್ಲಿರುವ ಭೂ ನೀಳದೇವಿ ಸಮೇತ ಗೋವಿಂದರಾಜಸ್ವಾಮಿ ದೇವಾಲಯದಲ್ಲಿ ಮುಕ್ಕೋಟಿ ದ್ವಾದಶಿಯಂದು ವಿಶೇಷ ಪೂಜೆ, ಪಂಚಾಮೃತಾಭಿಷೇಕ, ವೈಕುಂಠದ್ವಾರ ಪ್ರವೇಶ ಇರುತ್ತದೆ

    ಬೆಳಗ್ಗೆ 6ರಿಂದಲೇ ಪೂಜೆ: ಮುಳಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ಪ್ರತಿದಿನ ಬೆಳಗ್ಗೆ 6ರಿಂದ ಪೂಜಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಮಧ್ಯಾಹ್ನ 1 ಗಂಟೆಯವರೆಗೂ ಭಕ್ತರ ದರ್ಶನಕ್ಕೆ ಬಾಗಿಲು ತೆರೆದಿರುತ್ತದೆ. ಮಧ್ಯಾಹ್ನ 3 ರಿಂದ ಸಂಜೆ 7.30ರವರೆಗೂ ದರ್ಶನ ಪಡೆಯಬಹುದಾಗಿದೆ. ಪ್ರತಿ ಶನಿವಾರ ಅಭಿಷೇಕ ನಡೆಯಲಿದೆ. ಆಸಕ್ತ ಭಕ್ತರು ಅಭಿಷೇಕಕ್ಕೆ ಒಂದು ವಾರ ಮುಂಚಿತವಾಗಿ ಹಣ ನೀಡ ರಸೀದಿ ಪಡೆದು ಪಾಲ್ಗೊಳ್ಳಬಹುದು. ಪ್ರತ್ಯೇಕ ಅಭಿಷೇಕ ಮಾಡಿಸುವವರು ಶನಿವಾರ ಹೊರತುಪಡಿಸಿ ವಿಶೇಷ ಶುಲ್ಕ ಭರಿಸಿ ಅಭಿಷೇಕ ಮಾಡಿಸಬಹುದು.

    ಮುಳಬಾಗಿಲಿನ ಆಂಜನೇಯಸ್ವಾಮಿ ದೇವಾಲಯ ತ್ರೇತಾಯುಗದಲ್ಲಿ ಸ್ಥಾಪನೆಗೊಂಡಿದ್ದು, ಭಕ್ತರು ಇಲ್ಲಿ ಪೂಜೆ ಮಾಡಿಕೊಂಡು ತಿರುಪತಿಗೆ ತೆರಳುತ್ತಾರೆ. ಕೇದಿಗೆ ಹೂವಿಂದ ಪ್ರತಿನಿತ್ಯ ದೇವರಿಗೆ ಪೂಜೆ ನಡೆಯುತ್ತಿದೆ. ವರ್ಷದ ಎಲ್ಲ ದಿನವೂ ಕೇದಿಗೆ ಹೂ ಮುಳಬಾಗಿಲು ಕ್ಷೇತ್ರದ ಸುತ್ತಮುತ್ತ ಮಾತ್ರ ಸಿಗುವುದು ವಿಶೇಷ.
    ರಾಮಕೃಷ್ಣಮಾಚಾರ್, ಹಿರಿಯ ಅರ್ಚಕರು, ಆಂಜನೇಯಸ್ವಾಮಿ ದೇವಾಲಯ, ಮುಳಬಾಗಿಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts