More

    ದೊರೆಯದ ಆತ್ಮ ನಿರ್ಭರ ಸಾಲ

    ಶಿರಸಿ: ಆತ್ಮ ನಿರ್ಭರ ಘೊಷಣೆಯ ವಾರ್ಷಿಕ 10 ಸಾವಿರ ರೂಪಾಯಿ ಸಾಲಕ್ಕಾಗಿ ಬೀದಿ ವ್ಯಾಪಾರಿಗಳು ಅರ್ಜಿ ಸಲ್ಲಿಸಿ ತಿಂಗಳು ಕಾಲ ಕಳೆದಿದೆ. ಸಾಲಕ್ಕಾಗಿ ಬ್ಯಾಂಕ್​ಗಳಿಗೆ ಅಲೆದು ಸುಸ್ತಾಗಿದ್ದಾರೆ. ಸೌಲಭ್ಯ ದೊರೆಯದೆ ಹತಾಶರಾಗಿದ್ದಾರೆ.

    ಕೋವಿಡ್ ಲಾಕ್​ಡೌನ್ ಪರಿಣಾಮ ಬೀದಿ ಬದಿ ವ್ಯಾಪಾರಿ ಗಳಿಗಾಗಿಯೇ ಕೇಂದ್ರ ಸರ್ಕಾರ ಜೂನ್​ನಲ್ಲಿ ದೀನ್​ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್)ದಲ್ಲಿ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ಯೋಜನೆಯನ್ನು ಜಾರಿಗೊಳಿಸಿತ್ತು. ಆದರೆ, ಈ ಸೌಲಭ್ಯ ಜಿಲ್ಲೆಯ ಬಹುತೇಕ ವ್ಯಾಪಾರಿಗಳಿಗೆ ಇನ್ನೂ ದೊರೆಯುತ್ತಿಲ್ಲ.

    ಸ್ಮಾರ್ಟ್ ಫೋನ್ ಇಲ್ಲ: ಸಾಲಕ್ಕಾಗಿ ಅರ್ಜಿ ಸಲ್ಲಿಸುವವರ ಬಳಿ ಕಡ್ಡಾಯವಾಗಿ ಸ್ಮಾರ್ಟ್ ಫೋನ್ ಇರಬೇಕು. ಅದರ ಮೂಲಕವೇ ಯುಪಿಐ ಆಪ್​ಡೌನ್ ಲೋಡ್ ಮಾಡಿಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಬೇಕು. ಡಿಜಿಟಲ್ ವ್ಯವಹಾರ ಮಾಡಬೇಕು. ಆ ಮೂಲಕ ಕ್ಯಾಶ್​ಬ್ಯಾಕ್ ಸೌಲಭ್ಯವನ್ನೂ ಪಡೆಯಬೇಕು ಎಂಬುದು ಯೋಜನೆ ನಿಯಮ. ಆದರೆ, ಬಹುತೇಕ ವ್ಯಾಪಾರಿಗಳ ಬಳಿಕ ಆಧುನಿಕ ಫೋನ್ ಬದಲಿಗೆ ಸಾಮಾನ್ಯ ಫೋನ್ ಇರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಬಹುತೇಕರಿಗೆ ಡಿಜಿಟಲ್ ವ್ಯವಹಾರ ಗೊತ್ತಿಲ್ಲ. ಹೀಗಾಗಿ ಕ್ಯಾಶ್ ಬ್ಯಾಕ್ ಎಂದರೇನೆಂಬುದೂ ಗೊತ್ತಿಲ್ಲ. ಯೋಜನೆ ಜಾರಿಗೆ ಬಂದಿದ್ದರೂ ಅದರ ಪ್ರಯೋಜನ ದೊರಕದೆ ವ್ಯಾಪಾರ ಮುಂದುವರಿಸಿದ್ದಾರೆ.

    5 ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳು: ಜಿಲ್ಲೆಯ ಶಿರಸಿ, ಕಾರವಾರ, ಭಟ್ಕಳ ಸೇರಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 5 ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಈ ಸಾಲ ಸೌಲಭ್ಯ ಪಡೆಯಲು ಉತ್ಸುಕತೆ ತೋರುತ್ತಿದ್ದಾರೆ. ಆದರೆ, ಸ್ಮಾರ್ಟ್ ಪೋನ್ ಇಲ್ಲದ ಕಾರಣ 2 ಸಾವಿರದಷ್ಟು ಜನರು ಮಾತ್ರ ಈವರೆಗೆ ಅರ್ಜಿ ಸಲ್ಲಿಸಲು ಅವಕಾಶವಾಗಿದೆ.

    ಇದರ ಜತೆ ಕೆಲ ಬೀದಿಬದಿ ವ್ಯಾಪಾರಿಗಳು ಒಬ್ಬರದೇ ಹೆಸರಿನಲ್ಲಿ ಮೂರ್ನಾಲ್ಕು ಅರ್ಜಿ ಸಲ್ಲಿಸಿರುವುದು, ಯಾರದ್ದೋ ಅಂಗಡಿಯೆದುರು ನಿಂತ ಫೋಟೋವನ್ನು ದಾಖಲೆಯಾಗಿ ನೀಡಿದ್ದು ಸೇರಿ ಹಲವು ಗೊಂದಲಗಳಿದ್ದು, ಈ ಕಾರಣಕ್ಕೆ ಕೆಲವು ಬ್ಯಾಂಕ್ ನವರೂ ಸಾಲ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಯೋಜನೆಗೆ ಅರ್ಹರಿರುವ ಫಲಾನುಭವಿಗಳಿಗೂ ಸಾಲ ಸಿಗಲು ವಿಳಂಬವಾಗುತ್ತಿದೆ ಎಂಬುದು ಬೀದಿಬದಿ ವ್ಯಾಪಾರಿಗಳಾದ ಸಂತೋಷ ನಾಯ್ಕ, ರೇಣುಕಮ್ಮ ಹಾಗೂ ಇತರರ ಅಭಿಪ್ರಾಯ.

    ಯೋಜನೆಯ ನಿಯಮ: ಸಾಲ ಪಡೆದವರು 12ನೇ ತಿಂಗಳ ಹೊತ್ತಿಗೆ ಸಾಲ ಮತ್ತು ಬಡ್ಡಿಯ ಎಲ್ಲ ಕಂತುಗಳನ್ನೂ ಸೇರಿಸಿ 11,349 ಮರುಪಾವತಿ ಮಾಡಿರಬೇಕು. ಹಾಗಾದರೆ ಮಾತ್ರ ಬಡ್ಡಿಯ ಶೇ.30ರಷ್ಟು ರಿಯಾಯಿತಿಯ ಮೊತ್ತ 402 ರೂ. ಫಲಾನುಭವಿಯ ಖಾತೆಗೆ ಪಾವತಿಯಾಗುತ್ತದೆ. ಜತೆ, ಬಡ್ಡಿಯ ಶೇ.88ರಷ್ಟು ಅಂದರೆ 1,200 ಕ್ಯಾಶ್​ಬ್ಯಾಕ್ ಬಂದಿರುತ್ತದೆ. ಒಟ್ಟಾರೆ 1,602 ಲಾಭವಾಗಿರುತ್ತದೆ ಎಂಬುದು ಯೋಜನೆ ನಿಯಮಗಳಲ್ಲಿ ತೋರಿಸಿರುವ ಅಂಕಿ-ಅಂಶದ ಮಾಹಿತಿ ಎಂದು ಅಧಿಕಾರಿಗಳು ಹೇಳುತ್ತಾರೆ.

    ಶಿರಸಿ ನಗರಸಭೆ ವ್ಯಾಪ್ತಿಯಲ್ಲಿ 680 ಬೀದಿಬದಿ ವ್ಯಾಪಾರಿಗಳಿಂದ ಆನ್​ಲೈನ್ ಅರ್ಜಿ ಸಲ್ಲಿಸಲಾಗಿದೆ. ಕೆಲವು ದಾಖಲೆಗಳು ಸುಳ್ಳಾಗಿದ್ದೆಂದು ಕಂಡು ಬಂದ ಕಾರಣ ಬ್ಯಾಂಕ್​ನವರು ಸಾಲ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣದಿಂದ ಈಗಾಗಲೇ ಬ್ಯಾಂಕ್​ಗಳನ್ನು ಭೇಟಿ ಮಾಡಿ ಅಧಿಕಾರಿಗಳ ಜತೆ ಮಾತನಾಡಲಾಗಿದೆ. ತಿಂಗಳ ನಂತರ ಸಾಲ ನೀಡುವುದಾಗಿ ತಿಳಿಸಿದ್ದಾರೆ. | ಗಣಪತಿ ನಾಯ್ಕ ಶಿರಸಿ ನಗರಸಭೆ ಅಧ್ಯಕ್ಷ

    ಸಾಲ ಪಡೆಯುವ ಉದ್ದೇಶಕ್ಕಾಗಿಯೇ ಅನಿವಾರ್ಯವಾಗಿ ಸ್ಮಾರ್ಟ್ ಫೋನ್ ಖರೀದಿಸಿದ್ದೆ. ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ಇನ್ನೂ ಸಾಲ ನೀಡಿಲ್ಲ. ಇದರಿಂದ ಬೀದಿ ಬದಿ ವ್ಯಾಪಾರ ಮಾಡಿ ಜೀವನ ಸಾಗಿರುವ ಸನ್ನಿವೇಶದಲ್ಲಿರುವ ನಮಗೆ ಸಮಸ್ಯೆ ಆಗಿದೆ. | ಬಸವೇಶ್ವರಮ್ಮ ಬೀದಿಬದಿ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts