More

    ದೊಡ್ಡಕಂಬಳಿಯಲ್ಲಿ ಡಿಸಿ ಗ್ರಾಮವಾಸ್ತವ್ಯ

    ಕೆಜಿಎಫ್: ಆಡಳಿತವು ಕೇವಲ ಕೇಂದ್ರೀಯ ಸ್ಥಾನಕ್ಕೆ ಸೀಮಿತವಾಗಬಾರದೆಂದು ಸರ್ಕಾರ ಗ್ರಾಮವಾಸ್ತವ್ಯ ಹಮ್ಮಿಕೊಳ್ಳಲು ಸೂಚಿಸಿದೆ. ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.

    ತಾಲೂಕಿನ ಮಾರಿಕುಪ್ಪ ಗ್ರಾಪಂ ವ್ಯಾಪ್ತಿಯ ದೊಡ್ಡಕಂಬಳಿ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

    ಸ್ಥಳದಲ್ಲೇ ಅರ್ಜಿ ವಿಲೇ ಮಾಡುವ ಪ್ರಯತ್ನ ಮಾಡಲಾಗುವುದು. ಉಳಿದ ಅರ್ಜಿಗಳನ್ನು 15 ದಿನಗಳಲ್ಲಿ ವಿಲೇ ಮಾಡಲು ಕ್ರಮ ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಯಾರಿಗೂ ಮಾಹಿತಿ ನೀಡದೆ ನೇರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂದರು.

    ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಜನಪ್ರತಿನಿಧಿಗಳು ಬದಲಾಗುತ್ತಿರುತ್ತಾರೆ. ಆದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಪಂ ಚುನಾವಣೆ ಆಕಾಂಕ್ಷಿಗಳು ಗ್ರಾಮಗಳಲ್ಲಿ ಸರ್ವೇ ನಡೆಸಿ ಅರ್ಹರಿಗೆ ಯಾವ ಸೌಲಭ್ಯ ತಲುಪಬೇಕೋ ಅದನ್ನು ತಲುಪಿಸುವ ಕಾರ್ಯ ಮಾಡಬೇಕು. ಇದರಲ್ಲೂ ರಾಜಕೀಯ ಮಾಡಬಾರದು ಎಂದರು.

    ನರೇಗಾ ಯೋಜನೆಯಡಿ ಕೈಗೊಳ್ಳಲಾಗುವ ಕಾಮಗಾರಿಗಳಿಗೆ ವಿನಾಕಾರಣವಾಗಿ ತೊಂದರೆ ನೀಡುವ ಉದ್ದೇಶದಿಂದ ಆರ್‌ಟಿಐ ಅರ್ಜಿ ಹಾಕುವವರ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ದೂರು ವ್ಯಾಪಕವಾಗಿದ್ದು, ಈಗಾಗಲೆ 350 ಕೇಸ್ ದಾಖಲಾಗಿವೆ. ಇನ್ನು ಮುಂದೆ ಹೆಚ್ಚುವರಿಯಾಗಿ ಮದ್ಯ ತಂದಿರುವುದು ಸಾಬೀತಾದರೆ ಬಾರ್ ಪರವಾನಗಿ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು.

    ಶಾಸಕಿ ಎಂ.ರೂಪಕಲಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಂದಾಯ ಇಲಾಖೆಯಿಂದ ತೊಂದರೆಯಾಗುತ್ತಿದೆ. ಕೃಷಿ ಮಾಡುವ ಸಲುವಾಗಿ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಮರ್ಪಕವಾಗಿ ದಾಖಲೆ ಸಲ್ಲಿಸಬೇಕಾಗುತ್ತದೆ. ಆದರೆ ಮನೆಯ ಹಿರಿಯರಿಂದ ಪೌತಿ ಖಾತೆ ಮಾಡಿಲ್ಲ. ಸಮಾನವಾಗಿ ಜಮೀನು ಹಂಚಿಕೆ ಮಾಡುವ ಸಲುವಾಗಿ ಸಾಗುವಳಿ ಚೀಟಿ ಸೇರಿ ಜಮೀನು ಸರ್ವೇ ಮಾಡಿಕೊಡಿ ಎಂದು ಕಚೇರಿಗೆ ಬಂದರೆ ಅಧಿಕಾರಿಗಳು ಲಭ್ಯ ಇರುವುದಿಲ್ಲ. ರೈತರು ಕಚೇರಿಗೆ ಅಲೆಯುವುದು ಹೆಚ್ಚಾಗಿದೆ. ಜಿಲ್ಲಾಧಿಕಾರಿ ಗ್ರಾಪಂಗೆ ಆಗಮಿಸುವ ಮುನ್ನ ಆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಪಟ್ಟಿ ಮಾಡಿ ಬಗೆಹರಿಸಲು ಮುಂದಾಗಬೇಕು ಎಂದರು.
    ನೂರಾರು ರೈತರು ಜಮೀನು, ಕೆರೆ ಒತ್ತುವರಿ ರಸ್ತೆ ತೆರವು ಸೇರಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದರು.

    ಜಿಪಂ ಸಿಇಒ ಉಕೇಶ್‌ಕುಮಾರ್, ಎಡಿಸಿ ಡಾ.ಸ್ನೇಹಾ, ತಾಪಂ ಇಒ ಮಂಜುನಾಥ್, ಕಾರ್ಮಿಕ ಅಧಿಕಾರಿ ಅರುಣ್ ಪ್ರಸಾದ್, ಮಾರಿಕುಪ್ಪ ಗ್ರಾಪಂ ಅಧ್ಯಕ್ಷೆ ಜಲಜಾಕ್ಷಿ ಶಿವ, ಘಟ್ಟಮಾದಮಂಗಲ ಗ್ರಾಪಂ ಅಧ್ಯಕ್ಷ ಹರಿಕೃಷ್ಣ, ಎಪಿಎಂಸಿ ಅಧ್ಯಕ್ಷ ವಿಜಯ್ ರಾಘವರೆಡ್ಡಿ, ಮುಖಂಡರಾದ ಕಂಬಳಿಬಾಬು, ಮುನಿಸ್ವಾಮಿರೆಡ್ಡಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

    ಗ್ರಾಮಲೆಕ್ಕಾಧಿಕಾರಿ ಅಮಾನತಿಗೆ ಸೂಚನೆ: ಗ್ರಾಮ ಲೆಕ್ಕಾಧಿಕಾರಿ ರಮೇಶ್ ಕುಮಾರ್ ಸರ್ಕಾರದ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಅಕ್ರಮವಾಗಿ ಹಣ ಪಡೆಯುತ್ತಿದ್ದಾರೆ. ಹಣ ಪಡೆಯುವುದನ್ನು ನಿಲ್ಲಿಸಲು ಸೂಚಿಸಿದಾಗ ಪ್ರಾಣ ಬೆದರಿಕೆ ಹಾಕಿರುವುದಾಗಿ ಮಾರಿಕುಪ್ಪ ಗ್ರಾಮಸ್ಥರು ದೂರು ನೀಡಿದರು. ಗ್ರಾಮ ಲೆಕ್ಕಾಧಿಕಾರಿ ರಮೇಶ್‌ಕುಮಾರ್ ಅವರನ್ನು ಅಮಾನತುಪಡಿಸುವಂತೆ ತಹಸೀಲ್ದಾರ್ ಸುಜಾತಾ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

    ಎಪಿಎಂಸಿಗೆ ಜಮೀನು ಮಂಜೂರಾಗಲಿ: ರಾಜಪೇಟ್ ರಸ್ತೆ ಬಳಿ 25 ಎಕರೆ ಜಮೀನು ಗುರುತಿಸಲಾಗಿದ್ದು, ಜಿಲ್ಲಾಧಿಕಾರಿಗಳು ಮಂಜೂರು ಮಾಡಿದರೆ ಕೋಲಾರ ಜಿಲ್ಲೆಯಲ್ಲೇ ಅತ್ಯುತ್ತಮ ಎಪಿಎಂಸಿ ಮಾರುಕಟ್ಟೆ ಕೆಜಿಎ್ ಕ್ಷೇತ್ರದ ರೈತರಿಗೆ ದಕ್ಕಿದಂತಾಗಲಿದೆ. ಇದರಿಂದ ಆಂಧ್ರ, ತಮಿಳುನಾಡು ರಾಜ್ಯಗಳಿಗೆ ತರಕಾರಿ ಸರಬರಾಜು ಮಾಡಲು ಅನುಕೂಲವಾಗಲಿದೆ ಎಂದು ರೂಪಕಲಾ ಅಭಿಪ್ರಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts