More

    ದೇಶೀಯ ಗೋವು ಆಧಾರಿತ ಕೃಷಿ ಅತ್ಯವಶ್ಯ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಸಲಹೆ, ರಾಷ್ಟ್ರೋತ್ಥಾನ ಪರಿಷತ್ ಗೋಶಾಲೆಯಲ್ಲಿ ಸಸಿ ನೆಡು ಸಪ್ತಾಹ

    ದೊಡ್ಡಬಳ್ಳಾಪುರ/ತೂಬಗೆರೆ: ದೇಶೀಯ ಗೋವು ಆಧಾರಿತ ಕೃಷಿಯಿಂದ ಮಾತ್ರ ಮುಂದಿನ ಪೀಳಿಗೆಗೆ ಗುಣಮಟ್ಟದ ಆಹಾರ ನೀಡಲು ಸಾಧ್ಯ. ಇಲ್ಲವಾದಲ್ಲಿ ಕರೊನಾದಂಥ ಹೊಸ ಹೊಸ ರೋಗಗಳಿಗೆ ಬೆಲೆ ತೆರಬೇಕಾಗುತ್ತದೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಆತಂಕ ವ್ಯಕ್ತಪಡಿಸಿದರು.

    ದೊಡ್ಡಬಳ್ಳಾಪುರ ತಾಲೂಕು ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ ಗೋಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 7 ದಿನದ ಬೃಂದಾವನ ಕೃಷಿ ಅರಣ್ಯ ಯೋಜನೆಯ ಸಸಿ ನೆಡು ಸಪ್ತಾಹದ 4ನೇ ದಿನದ ಕಾರ‌್ಯಕ್ರಮದಲ್ಲಿ ಮಾತನಾಡಿದರು.
    ಪೂಜೆ ಪುನಸ್ಕಾರಗಳಿಗಷ್ಟೇ ಗೋವು ಸೀಮಿತವಲ್ಲ. ಕೃಷಿ ಪದ್ಧತಿಯಲ್ಲಿ ಗೋವಿನ ಸೇವೆಯನ್ನು ಸಮರ್ಪಕವಾಗಿ ಬಳಸಿದರೆ ಉತ್ತಮ ಲಿತಾಂಶ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.

    ಶ್ರದ್ಧೆ ಹಾಗೂ ಧನಾತ್ಮಕ ಚಿಂತನೆ ಅಗತ್ಯ: ಜೀವನದಲ್ಲಿ ಗುರಿ ಮುಟ್ಟಲು ಶ್ರದ್ಧೆ ಹಾಗೂ ಧನಾತ್ಮಕ ಚಿಂತನೆ ಅತ್ಯವಶ್ಯಕ, ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳುವ ಸಾಮರ್ಥ್ಯವಿರಬೇಕು ಎಂದು ಡಾ.ವಿಜಯ ಸಂಕೇಶ್ವರ ಸಲಹೆ ನೀಡಿದರು.

    ಅಪ್ಪ ಮಾಡಿಟ್ಟ ಆಸ್ತಿಯಿಂದಲೇ ಉದ್ಯಮ ನಡೆಸಲು ಸಾಧ್ಯ ಎಂಬ ಭ್ರಮೆಯಿಂದ ಹೊರಬರಬೇಕು. ಚಹಾ ಮಾರುತ್ತಿದ್ದ ನರೇಂದ್ರಮೋದಿ ಅವರು ದೇಶದ ಪ್ರಧಾನಿಯಾಗಿದ್ದಾರೆ. ಇಂತಹ ಪ್ರೇರಣೆಗಳು ಧನಾತ್ಮಕ ಚಿಂತನೆಗಳನ್ನು ಕಟ್ಟಿಕೊಡುವಲ್ಲಿ ಸಹಕಾರಿಯಾಗುತ್ತವೆ ಎಂದರು.
    ಯಾವುದೇ ಉದ್ಯಮ ಆರಂಭಿಸಲು ಬಂಡವಾಳವಿಲ್ಲ ಎಂದು ಕೈಕಟ್ಟಿ ಕೂರಬಾರದು. ಬದಲಿಗೆ ಇದ್ದ ಬಂಡವಾಳವನ್ನೇ ಹೂಡಿ ದೇವರ ಪೂಜೆಯಂತೆ ಶ್ರದ್ಧೆಯಿಂದ ದುಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಕಿವಿಮಾತು ಹೇಳಿದರು.

    ಸಾಧಕಿಯರ ಅನುಕರಣೆಯಾಗಲಿ: ಹೆಣ್ಣು ಮಕ್ಕಳು ಶಿಕ್ಷಣ ಸೇರಿ ಹಲವು ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸುತ್ತಿದ್ದಾರೆ, ಈ ಮೂಲಕ ಅಸಮಾನತೆ ಎಂಬ ಭ್ರಮೆಯನ್ನು ಕಿತ್ತೊಗೆದು ಸಾಧನೆ ಮಾಡುತ್ತಿದ್ದಾರೆ. ಈ ಮೂಲಕ ಹೆಣ್ಣು ಮಕ್ಕಳು ದೇಶದ ಭವಿಷ್ಯ ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇಂಥ ಸಾಧಕಿಯರನ್ನು ಎಲ್ಲ ಹೆಣ್ಣು ಮಕ್ಕಳು ಮಾದರಿಯಾಗಿ ಅನುಕರಣೆ ಮಾಡಬೇಕು ಎಂದು ಡಾ.ವಿಜಯ ಸಂಕೇಶ್ವರ ಸಲಹೆ ನೀಡಿದರು.

    ಯಾವುದೇ ಉದ್ಯಮವಾಗಿರಲಿ, ಅದರಲ್ಲಿ ಸಾಧನೆ ಮಾಡಲು ಹೆಣ್ಣು ಅಥವಾ ಗಂಡು ಎಂಬ ಭೇದಭಾವವಿಲ್ಲ, ಎಲ್ಲ ಕ್ಷೇತ್ರಗಳಿಗೂ ಇದು ಅನ್ವಯವಾಗುತ್ತದೆ ಎಂದರು.

    ಬದುಕಿನಲ್ಲಿ ಬಂದು ಹೋಗುವ ಸಣ್ಣ ಸಣ್ಣ ವಿಚಾರಗಳನ್ನೂ ಸೂಕ್ಷ್ಮವಾಗಿ ಗಮನಿಸುವ ಸೂಕ್ಷ್ಮ ಪ್ರಜ್ಞೆಯೊಂದಿಗಿನ ಗ್ರಹಿಕೆ ಸಾಧನೆಯ ಹಾದಿಗೆ ಮೆಟ್ಟಿಲಾಗುತ್ತದೆ. ಇಂತಹ ವಿಚಾರಗಳನ್ನು ಚಿಕ್ಕ ವಯಸ್ಸಿನಿಂದಲೇ ಅಭ್ಯಾಸ ಮಾಡಿದರೆ ಯಶಸ್ಸಿನ ಶಿಖರ ಏರಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.

    ರಾಷ್ಟ್ರೋತ್ಥಾನ ಪರಿಷತ್ ದೂರದೃಷ್ಟಿ ಶ್ಲಾಘನೀಯ: ರಾಷ್ಟ್ರೋತ್ಥಾನ ಪರಿಷತ್ತಿನ ಗೋಶಾಲೆಯ ದೇಶೀಯ ಗೋವು ಆಧಾರಿತ ಬದುಕು, ಕೃಷಿ, ಗೋ ಉತ್ಪನ್ನಗಳ ಬಳಕೆ, ಉತ್ಪನ್ನಗಳಿಂದಲೇ ಔಷಧ ತಯಾರಿಕೆ ಹೀಗೆ ಇಲ್ಲಿನ ಹಲವು ವಿಚಾರಗಳು ಇಂದಿನ ದಿನಮಾನಕ್ಕೆ ಅಪರೂಪದ್ದಾಗಿದೆ ಎಂದು ಡಾ.ವಿಜಯ ಸಂಕೇಶ್ವರ ಮೆಚ್ಚುಗೆ ವ್ಯಕ್ತಪಡಿಸಿದರು.

    ಇಲ್ಲಿನ ಮಾಧವ ಸೃಷ್ಟಿ ಎಂಬ ವಿವಿಧ ಜಾತಿಯ ಔಷಧಗುಣಗಳುಳ್ಳ ಅರಣ್ಯ ನಿರ್ಮಾಣ ಕೈಂಕರ್ಯ ಹಾಗೂ ಇದರಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಆ ಮೂಲಕ ಮಕ್ಕಳಿಗೆ ಅರಣ್ಯ ಹಾಗೂ ಈ ಮಣ್ಣಿನ ನಡುವಿನ ಸಂಬಂಧ ಬೆಸೆಯುವ ಕಾರ್ಯಕ್ಕೆ ರಾಷ್ಟ್ರೋತ್ಥಾನ ಪರಿಷತ್‌ನ ದೂರದೃಷ್ಟಿ ಶ್ಲಾಘನೀಯವಾಗಿದೆ ಎಂದು ನುಡಿದರು.

    ರಾಷ್ಟ್ರೋತ್ಥಾನ ಪರಿಷತ್ ಉದ್ದೇಶಿತ ಕಾರ್ಯಗಳು ದೇಶದ ಉತ್ಪಾದನೆ ಹೆಚ್ಚಿಸುವ ದೂರದೃಷ್ಟಿ ಚಿಂತನೆಯಾಗಿದೆ. ಈ ಮೂಲಕ ಅರಣ್ಯ ಆಧಾರಿತ ಕೃಷಿ ತರಬೇತಿ, ಕಲಿಕೆಗಳು, ಅದರ ನೈಜ್ಯ ಭವಿಷ್ಯ ದರ್ಶನ ಸೇರಿ ಮಕ್ಕಳಿಂದಲೇ ಯುವ ಸಮುದಾಯಕ್ಕೆ ಭಾರತೀಯ ಸಂಸ್ಕೃತಿ, ದೇಶೀಯ ಆಹಾರ ಪದ್ಧತಿ ಸೇರಿ ಹತ್ತಾರು ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಲತೆ ಕಾಣುತ್ತಿದೆ ಎಂದರು.

    ಮನುಕುಲಕ್ಕೆ ವೃಕ್ಷ ನಿರ್ಣಾಯಕ: ಮನುಷ್ಯ ಹಾಗೂ ಪ್ರಾಣಿ-ಪಕ್ಷಿ ಸಂಕುಲದ ಅಳಿವು-ಉಳಿವಿನ ವಿಚಾರದಲ್ಲಿ ವೃಕ್ಷಗಳದ್ದು ನಿರ್ಣಾಯಕ ಪಾತ್ರವಾಗಿದೆ. ಅಗತ್ಯ ಆಹಾರ, ಆಮ್ಲಜನಕದೊಂದಿಗೆ ಎಲ್ಲ ಮೂಲಸೌಲಭ್ಯಗಳಿಗೆ ಮನುಕುಲ ವೃಕ್ಷಗಳನ್ನೇ ಅವಲಂಬಿಸಿದ್ದಾನೆ. ಮಣ್ಣಿನ ಸವಕಳಿ, ಬಿಸಿಲಿನ ತಾಪ ಸೇರಿ ಪರಿಸರ ಸಮತೋಲನ ಕಾಪಾಡುವಲ್ಲಿ ಸಸ್ಯ ಸಂಪತ್ತಿನ ಪಾತ್ರ ಅವರ್ಣನೀಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತೀಯ ಕ್ಷೇತ್ರೀಯ ಸಂಘ ಸಂಚಾಲಕ ವಿ.ನಾಗರಾಜ್ ತಿಳಿಸಿದರು.

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಬೃಂದಾವನ ಸಸಿ ನೆಡುವ 7 ದಿನದ ಸಪ್ತಾಹದಲ್ಲಿ ಪರಿಸರ ತಜ್ಞರ ಸಲಹೆಯಂತೆ ವಿವಿಧ ಜಾತಿಯ 10 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ದೊಡ್ಡ ಸಾಧನೆ ಮಾಡುತ್ತಿದೆ ಎಂದರು. ಇದರೊಂದಿಗೆ ದೇಶ ಪ್ರೇಮ ಬೆಳೆಸುವ ಸುಮಾರು 500 ವಹಾನ್ ಪುರುಷರ ಜೀವನ ಗಾಥೆಯ ಚಿಕ್ಕ ಚಿಕ್ಕ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ರಾಷ್ಟ್ರ ಪ್ರೇಮದ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದರು.

    ಸಸಿ ನೆಟ್ಟ ಮಕ್ಕಳು: ಕಾರ್ಯಕ್ರಮಕ್ಕೂ ಮುನ್ನ ಡಾ.ವಿಜಯ ಸಂಕೇಶ್ವರ ಹಾಗೂ ಇನ್ನಿತರ ಗಣ್ಯರು ಗೋ ಶಾಲೆಯ ಮೊದಲ ಹಂತದಲ್ಲಿ ನಿರ್ಮಾಣವಾಗಿರುವ ಬೃಂದಾವನ ಅರಣ್ಯ ಸೇರಿ ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ಪಡೆದರು. ನಂತರ ಗೋ ಪೂಜೆ ಹಾಗೂ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಪ್ತಾಹದಲ್ಲಿ ಬೆಂಗಳೂರಿನ ವಿವಿಧ ಶಾಲೆಯ ಮಕ್ಕಳೊಂದಿಗೆ ಪಾಲಕರು ಸಸಿಗಳನ್ನು ನೆಟ್ಟರು.

    ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ‌್ಯದರ್ಶಿ ದಿನೇಶ್ ಹೆಗಡೆ, ಖಜಾಂಚಿ ನಾರಾಯಣ್, ಗೋ ಶಾಲೆ ವ್ಯವಸ್ಥಾಪಕ ಹಾಗೂ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ರಾಜ್ಯ ಸದಸ್ಯ ಡಾ.ಜೀವನ್ ಕುಮಾರ್ ಮತ್ತಿತರರು ಇದ್ದರು.

    ಒಂದು ರೂಪಾಯಿ ಪತ್ರಿಕಾ ಕ್ರಾಂತಿಕಾರಿ: ಒಂದು ರೂಪಾಯಿಗೆ ಪತ್ರಿಕೆಯನ್ನು ಪರಿಚಯ ಮಾಡಿ ದಿನಪತ್ರಿಕೆ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ವಿಜಯಸಂಕೇಶ್ವರ ಅವರನ್ನು ಸರ್ಕಾರ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದ್ದು, ಉದ್ಯಮ, ಸೇವಾ ಕ್ಷೇತ್ರಗಳಿಗೆ ಮಾದರಿಯಾಗಿದ್ದಾರೆ ಎಂದು ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ‌್ಯದರ್ಶಿ ದಿನೇಶ್ ಹೆಗಡೆ ಶ್ಲಾಘಿಸಿದರು.

    ಸಮಯ ಪಾಲನೆ ಮಾಡುವುದರಲ್ಲಿ ಸಂಘ ಪರಿವಾರಕ್ಕಿಂತ ಒಂದು ಹೆಜ್ಜೆ ಮುಂದಿರುವ ಅವರು, ಎಲ್ಲ ವಿಚಾರದಲ್ಲೂ ಅಧ್ಯಯನಶೀಲರಾಗಿದ್ದಾರೆ. ಹೀಗಾಗಿ ಮಕ್ಕಳಿಗೆ ಇಂತಹ ಸಾಧಕರ ಪರಿಚಯವಾಗಲಿ ಎಂದು ಸಂಕೇಶ್ವರರನ್ನು ಆಹ್ವಾನಿಸಿದ್ದೇವೆ ಎಂದರು.

    ಕೃಷಿ ಯೋಗ್ಯವಲ್ಲದ ಭೂಮಿಯಲ್ಲಿ ಸಾಧನೆ: 2006ರಲ್ಲಿ ನಾಲ್ಕು ಎಕರೆಯಿಂದ ಆರಂಭವಾದ ಗೋ ಶಾಲೆ 10ಎಕರೆಗೂ ಹೆಚ್ಚು ವಿಸ್ತಾರ ಹೊಂದಿದೆ. ಸರ್ಕಾರವೇ ಕೃಷಿಗೆ ಯೋಗ್ಯ ಭೂಮಿ ಅಲ್ಲ ಎಂದಿದ್ದ 40 ಎಕರೆಯನ್ನು ಕೃಷಿ ಯೋಗ್ಯ ಭೂಮಿ ಮಾಡಿ ಅದರಲ್ಲಿ ಅರಣ್ಯ ನಿರ್ಮಾಣ ಮಾಡಿದ್ದೇವೆ. ಇಲ್ಲಿ ಕೃಷಿ, ಗೋ ಸಾಕಣೆ, ಪರಿಸರ ಸೇರಿ ಭಾರತೀಯ ಗ್ರಾಮೀಣ ಸೊಗಡು ಕುರಿತ ಮಾರ್ಗದರ್ಶಿ ಕೇಂದ್ರವಾಗಿ ರೂಪುಗೊಳ್ಳುವ ಮೂಲಕ ಉತ್ತಮ ತರಬೇತಿ ಕೇಂದ್ರವಾಗಿ ಕಾರ‌್ಯನಿರ್ವಹಿಸುತ್ತಿದೆ ಎಂದು ದಿನೇಶ್ ಹೆಗಡೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts