More

    ದೇಶದ್ರೋಹಿ ಪಟ್ಟಕ್ಕೆ ಸಂಘರ್ಷ ಸಮಿತಿ ಪಟ್ಟು- ಅಂಬೇಡ್ಕರ್‌ರನ್ನು ಅವಮಾನಿಸಿದ್ದಕ್ಕೆ ಆಕ್ರೋಶ

    ದಾವಣಗೆರೆ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್‌ರನ್ನು ಅವಮಾನಿಸಿದ ಬೆಂಗಳೂರು ಜೈನ್ ವಿವಿಯ ವಿದ್ಯಾರ್ಥಿಗಳು ಹಾಗೂ ರಾಷ್ಟ್ರೀಯ ದಲಿತ ಸೇನೆ ರಾಷ್ಟ್ರೀಯ ಅಧ್ಯಕ್ಷ ಹಮಾರಾ ಪ್ರಸಾದ್‌ನನ್ನು ದೇಶದ್ರೋಹಿಗಳೆಂದು ಘೋಷಿಸಲು ಆಗ್ರಹಿಸಿ ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾ ಘಟಕ ಹಾಗೂ ವಿದ್ಯಾರ್ಥಿಗಳ ಒಕ್ಕೂಟದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
    ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ವಿದ್ಯಾರ್ಥಿಗಳು, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು.
    ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ಅಭಿನಯಿಸಿದ ನಾಟಕವೊಂದರಲ್ಲಿ ಅಂಬೇಡ್ಕರ್ ಅವರನ್ನು ಹೀಯಾಳಿಸಿದ್ದಾರೆ. ಇದು ವಿವಿಯ ಕೆಳ ಹಂತದ ಶೈಕ್ಷಣಿಕ ಮಟ್ಟವನ್ನು ತೋರಿಸುತ್ತದೆ. ಕೂಡಲೆ ಈ ವಿವಿಯನ್ನು ರಾಷ್ಟ್ರೀಕರಣಗೊಳಿಸಬೇಕು.
    ಅದರಡಿಯ ಎಲ್ಲ ಶೈಕ್ಷಣಿಕ ಸಂಸ್ಥೆಗಳನ್ನು ಸರ್ಕಾರ ವಶಕ್ಕೆ ಪಡೆಯಬೇಕು. ವಿವಿ ಆಡಳಿತ ಮಂಡಳಿ ಸದಸ್ಯರನ್ನು ದೇಶದ್ರೋಹಿ ಎಂದು ಪರಿಗಣಿಸಬೇಕು, ದೌರ್ಜನ್ಯ ಕಾಯ್ದಯಡಿ ಕ್ರಮವಾಗಬೇಕೆಂದು ಆಗ್ರಹಿಸಿದರು.
    ಅಂಬೇಡ್ಕರ್ ಅವರನ್ನು ಕೊಲ್ಲುತ್ತಿದ್ದೆ ಎಂದು ವಿವಾದಿತ ಹೇಳಿಕೆ ನೀಡಿದ್ದ ಹಮಾರಾ ಪ್ರಸಾದ್ ವಿರುದ್ಧ ದೇಶದ್ರೋಹ ಪಟ್ಟ ಕಟ್ಟಿ ಗಡಿಪಾರು ಮಾಡಬೇಕು. ಆತ ರಾಷ್ಟ್ರೀಯ ಅಧ್ಯಕ್ಷನಾದ ರಾಷ್ಟ್ರೀಯ ದಲಿತಸೇನೆ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
    ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ. ತಿಪ್ಪೇರುದ್ರಪ್ಪ, ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್.ನಾಗೇಶ್, ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಜಿ.ಸಿ. ಪರಶುರಾಂ, ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ, ಪ್ರಕಾಶ್, ರಘು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts