More

    ದೇಶಕ್ಕೆ ಪ್ರಧಾನಿ ಕೊಡುಗೆ ಅಪಾರ

    ಅಥಣಿ, ಬೆಳಗಾವಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಆರೋಗ್ಯದ ಜತೆಗೆ ದೇಶದ ಜನರ ಆರೋಗ್ಯವನ್ನೂ ಕಾಪಾಡುತ್ತಿದ್ದಾರೆ ಎಂದು ವಿಪ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

    ಪಟ್ಟಣದ ಸ್ಥಳೀಯ ಡಾ.ಅವಿನಾಶ ನಾಯಿಕ ಅವರ ಪ್ರಸಾದ ಆಸ್ಪತ್ರೆಯಲ್ಲಿ ಬಿಜೆಪಿ ಮಾಧ್ಯಮ ಹಾಗೂ ವೈದ್ಯಕೀಯ ಪ್ರಕೋಷ್ಠದ ಸಹಯೋಗದಲ್ಲಿ ಪತ್ರಕರ್ತರಿಗೆ ಭಾನುವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

    ಮೋದಿ ಅವರು 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿಲ್ಲದೆ ಸತತ 18 ಗಂಟೆಗಳ ಕಾಲ ದೇಶ ಸೇವೆ ಮಾಡುತ್ತಿರುವ ಅವರು ವೇದಿಕೆ ಕಾರ್ಯಕ್ರಮ ಇರಲಿ, ಸಭೆ, ಸಮಾರಂಭಗಳಿರಲಿ ಎಷ್ಟೇ ಸಮಯವಾಗಿದ್ದರೂ ಉತ್ಸಾಹದಿಂದಲೇ ಭಾಗವಹಿ ಸುತ್ತಾರೆ. ಒಂದು ದಿನವೂ ಅನಾರೋಗ್ಯದಿಂದ ತಮ್ಮ ಕಾರ್ಯದಿಂದ ಹಿಂದೆ ಸರಿದ ಉದಾಹರಣೆ ಇಲ್ಲ. ತಮ್ಮ ಆರೋಗ್ಯ ಉತ್ತಮವಾಗಿಟ್ಟುಕೊಂಡಂತೆ ಜನಪರ ಕಾರ್ಯಕ್ರಮ ಅನುಷ್ಠಾನಗೊಳಿಸುವ ಮೂಲಕ ದೇಶವನ್ನು ಸದೃಢಗೊಳಿಸಿದ್ದಾರೆ. ದೇಶಕ್ಕೆ ಮೋದಿ ಕೊಡುಗೆ ಅಪಾರ ಎಂದರು.

    ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿಸಿಕೊಳ್ಳುವ ಪತ್ರಕರ್ತರು ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು. ಪತ್ರಕರ್ತರು ಉತ್ಸಾಹದಿಂದ, ಆರೋಗ್ಯದಿಂದ ಇದ್ದರೆ ಮಾತ್ರ ನಾವು ಕೂಡ ಉತ್ಸಾಹದಿಂದ ಇರಲು ಸಾಧ್ಯ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಮಾಧ್ಯಮ ಹಾಗೂ ವೈದ್ಯಕೀಯ ಪ್ರಕೋಷ್ಠದಿಂದ ಪತ್ರಕರ್ತರಿಗಾಗಿ ಆರೋಗ್ಯ ತಪಾಸಣೆ ಆಯೋಜಿಸಿರುವುದು ಅಭಿನಂದನಾರ್ಹ ಎಂದರು.

    ಚಿಕ್ಕೋಡಿ ಜಿಲ್ಲಾ ಮಾಧ್ಯಮ ಸಂಚಾಲಕಿ ಮೃಣಾಲಿನಿ ದೇಶಪಾಂಡೆ ಮಾತನಾಡಿ, ಪ್ರಧಾನಿ ಮೋದಿ ಜನ್ಮ ದಿನದ ಅಂಗವಾಗಿ ಬಿಜೆಪಿ ಇಡಿ ದೇಶದಲ್ಲಿ ಆಯೋಜಿಸಿದ್ದ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ದೇಶದ ಕಟ್ಟಕಡೆಯ ವ್ಯಕ್ತಿಗೂ ಸೇವೆ ತಲುಪಬೇಕು ಎನ್ನುವ ಉದ್ದೇಶದಿಂದ ಅನೇಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
    ಪ್ರಸಾದ ಆಸ್ಪತ್ರೆ ವೈದ್ಯೆ ಡಾ.ಕೇತಕಿ ನಾಯಿಕ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಉತ್ತಮ ಜೀವನ ಶೈಲಿ ಬೇಕು. ಅದಕ್ಕಾಗಿ ನಮ್ಮ ಆಹಾರ, ವಿಹಾರ ಸರಿಯಾಗಿಟ್ಟುಕೊಳ್ಳಬೇಕು. ಹಾಗಾದಾಗ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಲು ಸಾಧ್ಯ ಎಂದರು.

    ಬಿಜೆಪಿ ಧುರೀಣ ಡಾ.ಪ್ರಕಾಶ ಕುಮಠಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಖೋಕಲೆ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ತೊದಲಬಾಗಿ, ಅಶೋಕ ದಾನಗೌಡ, ಪುರಸಭಾ ಸದಸ್ಯ ರಾಜು ಗುಡೋಡಗಿ, ಧುರೀಣರಾದ ಜಡೆಪ್ಪ ಕುಂಬಾರ ಇತರರು ಇದ್ದರು. ಜಿಲ್ಲಾ ಉಪಾಧ್ಯಕ್ಷ ಆನಂದ ದೇಶಪಾಂಡೆ ವಂದಿಸಿದರು. ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ರವಿ ಸಂಕ ನಿರೂಪಿಸಿದರು. 30ಕ್ಕೂ ಹೆಚ್ಚು ಪತ್ರಕರ್ತರ ಆರೋಗ್ಯ ತಪಾಸಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts