More

    ದೇವರ ದರ್ಶನ ಪಡೆದು ಪುನೀತರಾದ ಭಕ್ತರು

    ರಾಣೆಬೆನ್ನೂರ: ಕರೊನಾ ಸೋಂಕು ತಡೆಗಟ್ಟುವ ದೃಷ್ಟಿಯಿಂದ ದೇವಸ್ಥಾನ, ಮಠ-ಮಂದಿರಗಳ ಮೇಲೆ ಹೇರಲಾಗಿದ್ದ ಬಂದ್​ಗೆ ಸರ್ಕಾರ ಸಡಿಲಿಕೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ನಗರ ಸೇರಿ ತಾಲೂಕಿನಲ್ಲಿ ಸಣ್ಣಪುಟ್ಟ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

    ಆದರೆ ಪ್ರಮುಖ ದೇವಸ್ಥಾನವಾದ ತಾಲೂಕಿನ ಶ್ರೀಕ್ಷೇತ್ರ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕೆ ಜೂ. 30ರವರೆಗೆ ನಿಷೇಧ ಹೇರಲಾಗಿದ್ದು, ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ. ಗ್ರಾಪಂ, ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಈ ತೀರ್ಮಾನ ತೆಗೆದುಕೊಂಡ ಕುರಿತು ದೇವಸ್ಥಾನದಿಂದ ಪ್ರಕಟಣೆ ಸಹ ಹೊರಡಿಸಲಾಗಿದೆ.

    ಇದನ್ನು ಹೊರತು ಪಡಿಸಿ ಇನ್ನುಳಿದಂತೆ ನಗರದ ಕೆ.ಇ.ಬಿ ಗಣೇಶ ದೇವಸ್ಥಾನ, ವಿನಾಯಕ ನಗರದ ಗಣೇಶ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನ ಸೇರಿ ಬಹುತೇಕ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಮಾಸ್ಕ್ ಧರಿಸಿ ಭಕ್ತರು ದೇವರ ದರ್ಶನ ಪಡೆದರು.

    ಲಾಕ್​ಡೌನ್ ಘೊಷಣೆಯಾದ ದಿನದಿಂದ ದೇವಸ್ಥಾನಗಳು ಭಕ್ತರ ಸಮೂಹ ಇಲ್ಲದೇ ಬಣಗುಡುತ್ತಿದ್ದವು. ಸೋಮವಾರ ಭಕ್ತ ಸಮೂಹದಿಂದ ದೇವಸ್ಥಾನ ತುಂಬಿಕೊಂಡ ದೃಶ್ಯಗಳು ಕಂಡು ಬಂದವು.

    ಇಂದಿನಿಂದ ಚೌಡೇಶ್ವರಿ ದರ್ಶನ: ಇಲ್ಲಿಯ ಮೇಡ್ಲೇರಿ ರಸ್ತೆಯ ಗಂಗಾಜಲ ಚೌಡೇಶ್ವರಿ ದೇವಸ್ಥಾನವನ್ನು ದೇವಿಯ ವಾರವಾದ ಮಂಗಳವಾರದಿಂದ ಆರಂಭಿಸಲು ಸಮಿತಿ ವತಿಯಿಂದ ತೀರ್ವನಿಸಿದ್ದು, ಸೋಮವಾರ ದೇವಸ್ಥಾನಕ್ಕೆ ಬೀಗ ಹಾಕಲಾಗಿತ್ತು.

    ಸರ್ಕಾರ ಸೂಚಿಸಿದ ನಿಯಮಾನುಸಾರ ಕ್ರಮ ಕೈಗೊಂಡು ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗುವುದು. ಭಕ್ತರು ಸಹ ದೇವಸ್ಥಾನ ಆಡಳಿತ ಮಂಡಳಿಯ ಮಾರ್ಗಸೂಚಿಯಂತೆ ನಡೆದುಕೊಂಡು ಸಹಕಾರ ನೀಡಬೇಕು ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷ ಬಸವರಾಜ ನಾಯಕ ‘ವಿಜಯವಾಣಿ’ಗೆ ತಿಳಿಸಿದರು.

    ಹಾವೇರಿ: ಕಳೆದ ಎರಡೂವರೆ ತಿಂಗಳಿಂದ ಬಾಗಿಲು ಮುಚ್ಚಿದ್ದ ಜಿಲ್ಲೆಯ ದೇವಸ್ಥಾನ, ಮಸೀದಿ, ಚರ್ಚ್​ಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಬೆಳಗ್ಗೆಯಿಂದಲೇ ಭಕ್ತರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು.

    ಜಿಲ್ಲೆಯ ಹಾನಗಲ್ಲ ತಾಲೂಕು ಕುಮಾರೇಶ್ವರ ವಿರಕ್ತಮಠ, ತಾರಕೇಶ್ವರ ದೇವಸ್ಥಾನ, ಹಾವೇರಿಯ ಹುಕ್ಕೇರಿಮಠ, ವೀರಭದ್ರೇಶ್ವರ ದೇವಸ್ಥಾನ, ಹೊಸಮಠ, ಸಿಂದಗಿಮಠ, ಪುರಸಿದ್ದೇಶ್ವರ ದೇವಸ್ಥಾನ, ಸವಣೂರ ತಾಲೂಕಿನ ಕಾರಡಗಿ ವೀರಭದ್ರೇಶ್ವರ ದೇವಸ್ಥಾನ, ಶಿಗ್ಗಾಂವಿಯ ಶಿಶುನಾಳ ಶರೀಫಗಿರಿ, ಸೇರಿದಂತೆ ಜಿಲ್ಲೆಯ ವಿವಿಧ ದೇವಸ್ಥಾನಗಳ ಬಾಗಿಲು ತೆರೆದುಕೊಂಡಿದ್ದವು. ಆದರೆ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಆಂಜನೇಯ ದೇವಸ್ಥಾನ ತೆರೆಯಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ತಹಸೀಲ್ದಾರ್​ರ ಆದೇಶಕ್ಕೆ ಕಾಯಲಾಗುತ್ತಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಕಾಗಿನೆಲೆ ಆದಿಕೇಶವ ದೇವಸ್ಥಾನವನ್ನು ಜಿಲ್ಲಾಡಳಿತದ ಅಧಿಕೃತ ಆದೇಶ ಸಿಗದ ಹಿನ್ನೆಲೆಯಲ್ಲಿ ಆರಂಭಿಸಿಲ್ಲ.

    ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ ಎ ದರ್ಜೆಯ ಒಂದು, ಬಿ ದರ್ಜೆಯ 11ಹಾಗೂ ಸಿ ದರ್ಜೆಯ 1,200ದೇವಸ್ಥಾನಗಳಿದ್ದು ಎಲ್ಲ ದೇವಸ್ಥಾನಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸುರಕ್ಷತಾ ಕ್ರಮಕೈಗೊಳ್ಳಲಾಗಿದೆ. ಇವುಗಳ ಪಾಲನೆಯ ಮೇಲುಸ್ತುವಾರಿಯನ್ನು ಆಯಾ ತಾಲೂಕಾ ತಹಸೀಲ್ದಾರ್​ರಿಗೆ ವಹಿಸಿಕೊಡಲಾಗಿದೆ. ದೇವರ ದರ್ಶನಕ್ಕೆ ದೇವಾಲಯಕ್ಕೆ ಬರುವ ಭಕ್ತರು ಪರಸ್ಪರ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಗುರುತು ಹಾಕಲಾಗಿತ್ತು. ದೇವಸ್ಥಾನ ಆವರಣದಲ್ಲಿ ಆಗಾಗ ಸ್ವಚ್ಛತೆ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಒಳಗೆ ಪ್ರವೇಶಿಸುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಲು ಹಾಗೂ ಸ್ಯಾನಿಟೈಸರ್ ಸಿಂಪರಣೆ ಮಾಡಲು ಕೆಲವೆಡೆ ಸಿಬ್ಬಂದಿ ನೇಮಿಸಿರುವುದು ಕಂಡು ಬಂದಿತು.

    ಸರ್ಕಾರದ ಸುರಕ್ಷತಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಯಾವುದೇ ವಿಶೇಷ ಪೂಜೆ, ಹೋಮ-ಹವನ, ಪ್ರಸಾದ, ತೀರ್ಥ ವ್ಯವಸ್ಥೆ ಇರಲಿಲ್ಲ. ಇನ್ನು ಲಾಕ್​ಡೌನ್ ಸಡಿಲಿಕೆಯ ಮೊದಲ ದಿನ ಜಿಲ್ಲೆಯ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆಯೂ ವಿರಳವಾಗಿತ್ತು. ಮಸೀದಿ, ಚರ್ಚ್​ಗಳು ಸಹ ಬಾಗಿಲು ತೆರೆದಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts