More

    ದೇವರ ದರ್ಶನಕ್ಕೆ ಭಕ್ತರ ದಂಡು

    ಗದಗ: ಕರೊನಾ ಲಾಕ್​ಡೌನ್​ನಿಂದ ಎರಡೂವರೆ ತಿಂಗಳು ಬಂದ್ ಆಗಿದ್ದ ಜಿಲ್ಲೆಯ ದೇವಾಲಯಗಳು ಸರ್ಕಾರದ ಆದೇಶದಂತೆ ಸೋಮವಾರ ಬಾಗಿಲು ತೆರೆದಿದ್ದರಿಂದ ಭಕ್ತರು ದೇವರ ದರ್ಶನ ಪಡೆದರು.

    ಬೆಳಗ್ಗೆ ನಗರದ ವೀರನಾರಾಯಣ ದೇವಾಲಯ, ತ್ರಿಕೂಟೇಶ್ವರ ದೇವಾಲಯ, ಗಣಪತಿ ದೇವಸ್ಥಾನ, ಬನಶಂಕರಿ ದೇವಸ್ಥಾನ, ರಾಘವೇಂದ್ರ ರಾಯರ ದೇವಸ್ಥಾನ, ಜೋಡು ಹನುಮಂತ ದೇವಸ್ಥಾನ ಸೇರಿ ಗದಗ-ಬೆಟಗೇರಿ ಅವಳಿ ನಗರದ ಬಹುತೇಕ ದೇವಸ್ಥಾನಗಳಲ್ಲಿ ಅಭಿಷೇಕ ಮತ್ತಿತರ ಪೂಜಾ ಕಾರ್ಯಗಳು ಜರುಗಿದವು. ಅಲ್ಲದೆ, ಮಸೀದಿ, ಚರ್ಚ್​ಗಳು ಬಾಗಿಲು ತೆರೆದಿದ್ದವು.

    ಅವಳಿ ನಗರ ಸೇರಿ ಜಿಲ್ಲೆಯಲ್ಲಿ ಹೋಟೆಲ್​ಗಳು ಒಂದು ವಾರದಿಂದ ಆರಂಭವಾಗಿದ್ದರೂ ಪಾರ್ಸೆಲ್ ನೀಡುವುದಕ್ಕೆ ಮಾತ್ರ ಸೀಮಿತವಾಗಿದ್ದವು. ಸೋಮವಾರ ಯಥಾಪ್ರಕಾರ ಹೋಟೆಲ್ ಒಳಗೆ ಕುಳಿತು ಊಟ, ಉಪಾಹಾರ ಸೇವಿಸಲು ಅವಕಾಶವಿದ್ದರೂ ಜನರ ಸಂಖ್ಯೆ ಕಡಿಮೆ ಇತ್ತು. ಹೋಟೆಲ್​ಗೆ ಬರುವ ಜನರ ಕೈಗೆ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿತ್ತು. ಆದರೆ, ಜನರು ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ವ್ಯಾಪಾರವೇ ಇಲ್ಲ ಎಂದು ಹೋಟೆಲ್ ಮಾಲೀಕರು ಬೇಸರ ವ್ಯಕ್ತಪಡಿಸುತ್ತಿರುವುದು ಕಂಡುಬಂದಿತು. ಇನ್ನು ನಗರದ ಮಾಲ್​ಗೆ ಭೇಟಿ ನೀಡುವ ಜನರ ಸಂಖ್ಯೆ ವಿರಳವಾಗಿತ್ತು.

    ಕರೊನಾ ನಿಗ್ರಹಕ್ಕಾಗಿ ಜಲಾಭಿಷೇಕ:
    ಲಕ್ಷ್ಮೇಶ್ವರ: ಲಾಕ್​ಡೌನ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಂದ್ ಮಾಡಲಾಗಿದ್ದ ದೇವಸ್ಥಾನ, ಮಸೀದಿ, ಮಂದಿರಗಳ ಬಾಗಿಲು ಸರ್ಕಾರದ ಆದೇಶದಂತೆ ಸೋಮವಾರ ತೆರೆದಿದ್ದವು.

    ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನ, ದೂದಪೀರಾಂ ದರ್ಗಾ, ಜೈನ ಬಸಿದಿಗಳ ಬಾಗಿಲುಗಳನ್ನು ಸೋಮವಾರ ಬೆಳಗ್ಗೆ ತಹಸೀಲ್ದಾರ್ ಸೂಚನೆಯ ಹಿನ್ನೆಲೆಯಲ್ಲಿ ತೆರೆಯಲಾಯಿತು.

    ಸಂಪ್ರದಾಯದಂತೆ ಸೋಮೇಶ್ವರ ದೇವಸ್ಥಾನಕ್ಕೆ ಸೋಮವಾರ ಭಕ್ತರ ಸಂಖ್ಯೆ ಹೆಚ್ಚಿತ್ತು. ಮೊದಲ ದಿನವಾಗಿದ್ದರಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಅಷ್ಟಷ್ಟೇ ಭಕ್ತರು ಆಗಮಿಸಿದ್ದು ಕಂಡುಬಂದಿತು. ದೇವಸ್ಥಾನದಲ್ಲಿ ಭಕ್ತರು ವ್ಯಕ್ತಿಗತ ಅಂತರ ಕಾಯ್ದುಕೊಂಡು ಬರಲು ಸೂಚನಾ ಫಲಕಗಳನ್ನು ಹಾಕಲಾಗಿತ್ತು. ಅಲ್ಲದೆ, 6 ಅಡಿ ಅಂತರಕ್ಕೊಂದು ಬಾಕ್ಸ್ ಗುರುತು ಹಾಕಿ ಮುಂಭಾಗದಲ್ಲಿ ಸ್ಯಾನಿಟೈಸರ್ ಇಡಲಾಗಿತ್ತು. ‘ಸೋಮೇಶ್ವರನಿಗೆ ಸೋಮವಾರ ವಿಶೇಷ ದಿನವಾದ್ದರಿಂದ ಕರೊನಾ ಮಹಾಮಾರಿ ನಿಗ್ರಹಕ್ಕಾಗಿ ಜಲಾಭಿಷೇಕ, ರುದ್ರಪಠಣ ಮಾಡಲಾಯಿತು. ಭಕ್ತರು ಆಗಮಿಸಿ ಶಿವ-ಪಾರ್ವತಿಯರು ನಂದಿ ಮೇಲೆ ಕುಳಿತು ಹೊರಟ ವಿಶ್ವ ಪ್ರಸಿದ್ಧ ಸ್ವಯಂಭೂ ಸೋಮೇಶ್ವರನನ್ನು ನೋಡಿ ಕಣ್ತುಂಬಿಕೊಂಡರು. ಮೇ 2ರಂದು ಇದ್ದ ಜಾತ್ರಾ ಮಹೋತ್ಸವವನ್ನು ರದ್ದು ಪಡಿಸಲಾಗಿತ್ತು’ ಎಂದು ಅರ್ಚಕರಾದ ಕೃಷ್ಣ ಪೂಜಾರ, ಸಮೀರ ಪೂಜಾರ ಪತ್ರಿಕೆಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts