More

    ದೇಗುಲಗಳಲ್ಲಿ ಪೂಜಾ ವಿಧಿಗಳ ಬಗ್ಗೆ ಬದ್ಧತೆ ಇರಲಿ -ಹಿರೇಮಗಳೂರು ಕಣ್ಣನ್

    ದಾವಣಗೆರೆ: ದೇವಸ್ಥಾನಗಳಲ್ಲಿ ನಡೆಯುವ ನಿತ್ಯಪೂಜೆ ಹಾಗೂ ವಿಶೇಷ ಪೂಜಾ ವಿಧಿಗಳ ಬಗ್ಗೆ ಬದ್ಧತೆ ಹೊಂದಿರಬೇಕು ಎಂದು ವೇದ ಪಂಡಿತ ಹಿರೇಮಗಳೂರು ಕಣ್ಣನ್ ಆಡಳಿತ ಮಂಡಳಿ ಧರ್ಮದರ್ಶಿಗಳಿಗೆ ಕಿವಿಮಾತು ಹೇಳಿದರು.
    ಕರ್ನಾಟಕ ಆರ್ಯವೈಶ್ಯ ಮಹಾಸಭಾ ಹಾಗೂ ಶ್ರೀ ವಾಸವಿ ದೇವಾಲಯಗಳ ಒಕ್ಕೂಟದಿಂದ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾಸವಿ ದೇವಾಲಯಗಳ ಪ್ರಥಮ ಅಧಿವೇಶನದಲ್ಲಿ ನಿತ್ಯಪೂಜಾ ವಿಧಿಗಳು, ಹೋಮ ಯಾಗಗಳು, ಅದರ ಪರಿಣಾಮಗಳ ಕುರಿತು ಮಾತನಾಡಿದರು.
    ಧಾರ್ಮಿಕ ಹಾಗೂ ಜಾತ್ಯತೀತ ಕೇಂದ್ರಗಳಾದ ದೇವಸ್ಥಾನಗಳಲ್ಲಿ ಧರ್ಮನಿಷ್ಠೆಯಿಂದ ನಡೆಯಬೇಕು, ಧರಿಸುವ ಉಡುಪುಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರಬೇಕು. ಅಹಂಭಾವ ತ್ಯಜಿಸಿ ಸಮತೆಯ ಭಾವ ಇರಿಸಿಕೊಂಡಿರಬೇಕು ಎಂದು ತಿಳಿಸಿದರು.
    ದೇವಸ್ಥಾನಗಳಿಗೆ ಬರುವಾಗ ಎಲ್ಲರ ಹೃದಯ ಧರ್ಮಸ್ಥಳ ಆಗಿರಬೇಕು. ಶುದ್ಧ ಸಂಕಲ್ಪ ಮಾಡಬೇಕು. ಮನಸ್ಸನ್ನು ಕುರುಕ್ಷೇತ್ರ ಮಾಡಿಕೊಂಡರೆ ಯಾವುದೇ ಪ್ರಯೋಜನ ಲಭಿಸುವುದಿಲ್ಲ ಎಂದರು.
    ದೇವಾಲಯಗಳಲ್ಲಿ ಹೇಳುವ ಮಂತ್ರಗಳು ಜಗತ್ತಿನ ಕಲ್ಯಾಣಕ್ಕಾಗಿಯೇ ಇವೆ. ಸಂಸ್ಕೃತದಲ್ಲಿ ಹೇಳುವ ಮಂತ್ರಗಳನ್ನು ಕನ್ನಡದಲ್ಲಿ ತಿಳಿದರೆ ಅವುಗಳ ಬಗ್ಗೆ ಜ್ಞಾನ ಹೆಚ್ಚುತ್ತದೆ ಎಂದು ಹೇಳಿದ ಅವರು ಶ್ಲೋಕಗಳ ಮಹತ್ವ ತಿಳಿಸಿದರು.
    ರಾಜ್ಯ ದೇವಾಲಯ ಸಂವರ್ಧನಾ ಸಮಿತಿ ಪ್ರಚಾರಕ ಮನೋಹರ್ ಮಠದ್ ದೇವಾಲಯಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತು ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts