More

    ದೆಹಲಿಯಿಂದ ಬಂದ 178 ಪ್ರಯಾಣಿಕರು

    ಹುಬ್ಬಳ್ಳಿ: ಲಾಕ್​ಡೌನ್ ಸಡಿಲಿಕೆ ನಂತರ ಮೊದಲ ಬಾರಿಗೆ ಶುಕ್ರವಾರ ಬೆಳಗಿನಜಾವ ದೆಹಲಿಯಿಂದ ನಗರಕ್ಕೆ ಆಗಮಿಸಿದ ನಿಜಾಮುದ್ದಿನ್- ಹುಬ್ಬಳ್ಳಿ/ ವಾಸ್ಕೊ ಡ ಗಾಮಾ ಲಿಂಕ್ ಎಕ್ಸ್​ಪ್ರೆಸ್ ರೈಲಿನಲ್ಲಿ 178 ಪ್ರಯಾಣಿಕರು ಬಂದಿಳಿದರು.

    ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ಕಲ್ಬುರ್ಗಿ, ಕೊಪ್ಪಳ ಸೇರಿ ಉತ್ತರ ಕರ್ನಾಟಕದ ವಿವಿಧೆಡೆ ತೆರಳಬೇಕಿದ್ದ ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿದ್ದ ಪ್ರಯಾಣಿಕರನ್ನೊಳಗೊಂಡ ಈ ರೈಲು ಜೂ. 3ರಂದು ಮಧ್ಯಾಹ್ನ ದೆಹಲಿಯಿಂದ ಹೊರಟಿದ್ದು, ಶುಕ್ರವಾರ ಬೆಳಗಿನಜಾವ ಸುಮಾರು 5.40ಕ್ಕೆ ಹುಬ್ಬಳ್ಳಿಗೆ ಆಗಮಿಸಿತು.

    ನಿಗದಿತ ಅವಧಿಗಿಂತ ಸುಮಾರು 40 ನಿಮಿಷ ಮುಂಚೆಯೇ ಆಗಮಿಸಿದ ಎಲ್ಲ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ಅನ್ನು ಹುಬ್ಬಳ್ಳಿ ನಿಲ್ದಾಣದಲ್ಲಿ ನಡೆಸಿ, ಕೈಗೆ ಕ್ವಾರಂಟೈನ್ ಸೀಲ್ ಹಾಕಲಾಯಿತು.

    ಕರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಮಹಾರಾಷ್ಟ್ರದಿಂದ ಬಂದಿದ್ದ 40 ಜನರ ಆರೋಗ್ಯ ತಪಾಸಣೆಯನ್ನು ಪ್ರತ್ಯೇಕವಾಗಿ ನಡೆಸಿ, ಸಾಂಸ್ಥಿಕ ಕ್ವಾರಂಟೈನ್​ಗಾಗಿ ನಗರದ ಗೋಕುಲ ರಸ್ತೆಯಲ್ಲಿರುವ ಹಾಸ್ಟೆಲ್​ವೊಂದಕ್ಕೆ ಸಾರಿಗೆ ಬಸ್​ನಲ್ಲಿ ಕರೆದೊಯ್ಯಲಾಯಿತು.

    ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಇನ್ನುಳಿದ 138 ಪ್ರಯಾಣಿಕರನ್ನು ಅವರ ತವರು ಜಿಲ್ಲೆಗಳಿಗೆ ಕಳುಹಿಸಲಾಯಿತು.

    ಹುಬ್ಬಳ್ಳಿ ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ, ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ಎಸ್. ಹಿತ್ತಲಮನಿ ಇತರರಿದ್ದರು.

    ಕ್ವಾರಂಟೈನ್ ಸೀಲ್ : ಬಸ್​ನಲ್ಲಿ ಹತ್ತಿಸಿಕೊಳ್ಳಲು ನಿರಾಕರಣೆ: ನಿಜಾಮುದ್ದಿನ್ ಎಕ್ಸ್​ಪ್ರೆಸ್ ರೈಲಿನಲ್ಲಿ ನಗರಕ್ಕೆ ಬಂದಿಳಿದ ಬಳ್ಳಾರಿಯ ಸ್ಟೀಲ್ ಕೈಗಾರಿಕೆ ಉದ್ಯೋಗಿಗಳನ್ನು ಸಾರಿಗೆ ಬಸ್​ನಲ್ಲಿ ಹತ್ತಿಸಿಕೊಳ್ಳಲು ನಿರಾಕರಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆಯಿತು. ಹರಿಯಾಣ ನಿವಾಸಿಗಳಾದ ಮೂವರು ಯುವಕರು ಬಳ್ಳಾರಿಯ ಸ್ಟೀಲ್ ಕೈಗಾರಿಕೆಯ ಉದ್ಯೋಗಿಗಳಾಗಿದ್ದು, ಲಾಕ್​ಡೌನ್​ಗೆ ಮುಂಚೆಯೇ ರಜೆಗಾಗಿ ತವರು ರಾಜ್ಯಕ್ಕೆ ತೆರಳಿದ್ದರು. ಈ ಅವಧಿಯಲ್ಲಿ ಕೈಗಾರಿಕೆಯೂ ಬಂದ್ ಆಗಿದ್ದಲ್ಲದೆ, ವಾಹನ ಸಂಚಾರವೂ ಸ್ಥಗಿತಗೊಂಡಿದ್ದರಿಂದ ಇವರು ತವರು ರಾಜ್ಯದಲ್ಲಿಯೇ ಉಳಿದುಕೊಂಡಿದ್ದರು. ಕಳೆದ ಕೆಲ ದಿನಗಳಿಂದ ಸ್ಟೀಲ್ ಕೈಗಾರಿಕೆ ಪುನರಾರಂಭಗೊಂಡಿದೆ. ಹೀಗಾಗಿ ಬಳ್ಳಾರಿಗೆ ತೆರಳುವುದಕ್ಕಾಗಿ ಮೂವರು ಉದ್ಯೋಗಿಗಳು ಹುಬ್ಬ್ಳೆ ಆಗಮಿಸಿದ್ದರು. ಬಳ್ಳಾರಿಗೆ ತೆರಳುವುದಕ್ಕಾಗಿ ನಗರದ ಬಸ್ ನಿಲ್ದಾಣಕ್ಕೆ ಹೋಗಿದ್ದಾರೆ. ಆದರೆ, ಮೂವರ ಕೈ ಮೇಲೆ ಕ್ವಾರಂಟೈನ್ ಸೀಲ್ ಹಾಕಿದ್ದರಿಂದ ಸಾರಿಗೆ ಸಿಬ್ಬಂದಿ ಇವರನ್ನು ಬಸ್​ನಲ್ಲಿ ಪ್ರವೇಶಿಸದಂತೆ ತಡೆದು, 14 ದಿನಗಳ ನಂತರ ಬರುವಂತೆ ವಾಪಸ್ ಕಳುಹಿಸಿದ್ದಾರೆ. ದಿಕ್ಕು ತೋಚದೆ ರೈಲ್ವೆ ನಿಲ್ದಾಣಕ್ಕೆ ಬಂದ ಈ ಮೂವರಿಗೂ ಖಾಸಗಿ ವಾಹನದಲ್ಲಿ ಬಳ್ಳಾರಿಗೆ ತೆರಳುವಂತೆ ಪೊಲೀಸರು ಸಲಹೆ ನೀಡಿದರು.

    6 ತಿಂಗಳ ಬಾಣಂತಿ ಪ್ರಯಾಣ: 6 ತಿಂಗಳ ಹಸುಗೂಸಿನೊಂದಿಗೆ ಬಾಣಂತಿಯೊಬ್ಬಳು ನಿಜಾಮುದ್ದಿನ್ ಎಕ್ಸ್​ಪ್ರೆಸ್ ರೈಲಿನ ಮೂಲಕ ನಗರಕ್ಕೆ ಆಗಮಿಸಿದಳು. ಇಲ್ಲಿನ ಖಾಸಗಿ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದ ಮಹಿಳೆ ಹೆರಿಗೆಗಾಗಿ ತನ್ನ ತವರೂರಾದ ಮಹಾರಾಷ್ಟ್ರದ ಔರಾಂಗಾಬಾದ್​ಗೆ ತೆರಳಿದ್ದಳು. ಬಾಣಂತಿಯಾಗಿದ್ದರಿಂದ ಆಕೆಯನ್ನು ಮನೆಯಲ್ಲಿಯೇ ಕ್ವಾರಂಟೈನ್​ನಲ್ಲಿ ಇರುವಂತೆ ಅಧಿಕಾರಿಗಳು ಸೂಚಿಸಿದರು.

    ಶಂಕಾಸ್ಪದವಾಗಿ ವರ್ತಿಸಿದ ಮಹಿಳೆ: ಸಾಂಸ್ಥಿಕ ಕ್ವಾರಂಟೈನ್​ಗಾಗಿ ಬಸ್ ಏರಲು ಸರದಿಯಲ್ಲಿ ನಿಂತಿದ್ದವರ ಸಾಲಿನಿಂದ ಹೊರ ಬಂದ ಮಹಿಳೆಯೊಬ್ಬಳು ಸಂಶಯಾಸ್ಪದವಾಗಿ ಸುತ್ತಾಡುತ್ತ ಆತಂಕ ಸೃಷ್ಟಿಸಿದಳು. ರೈಲ್ವೆ ನಿಲ್ದಾಣದಿಂದ ಹೊರಬಂದು ಅವಸರದಲ್ಲಿ ಮುಖ್ಯ ರಸ್ತೆಯತ್ತ ತೆರಳುತ್ತಿದ್ದ ಮಹಿಳೆಯನ್ನು ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತಡೆದರು. ತಾನು ಮಹಾರಾಷ್ಟ್ರದಿಂದ ಬಂದಿಲ್ಲ. ಬೆಳಗಾವಿಗೆ ರೈಲಿನಲ್ಲಿ ತೆರಳುವುದಕ್ಕಾಗಿ ಬಂದಿದ್ದೆ. ಟಿಕೆಟ್ ಕೌಂಟರ್ ಬಂದ್ ಆಗಿದ್ದರಿಂದ ವಾಪಸ್ ತೆರಳುತ್ತಿರುವುದಾಗಿ ಹೇಳಿದಳು. ಇಂಜಿನಿಯರಿಂಗ್ ವಿದ್ಯಾರ್ಥಿಯೆಂದು ಹೇಳಿಕೊಂಡ ಈಕೆಗೆ ಅಗತ್ಯ ದಾಖಲೆಗಳನ್ನು ತೋರಿಸುವಂತೆ ಅಧಿಕಾರಿಗಳು ಹೇಳಿದರೂ, ದಾಖಲೆಗಳನ್ನು ತೋರಿಸಲಿಲ್ಲ. ಅಧಿಕಾರಿಗಳು ಸಹ ಆಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವಸರದಲ್ಲಿ ನಿಲ್ದಾಣದ ಆವರಣದಿಂದ ಹೊರ ನಡೆದ ಆಕೆ, ನೋಡನೋಡುತ್ತಲೇ ಕಾಣದಂತಾದಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts