More

    ದೃಷ್ಟಿಹೀನತೆ ನಿವಾರಣೆಗೆ ಕಾರ್ಯಯೋಜನೆ ರೂಪಿಸಿ, ನೇತ್ರ ತಜ್ಞರ ರಾಜ್ಯ ಸಮ್ಮೇಳನದಲ್ಲಿ ರಾಜ್ಯಪಾಲ ಗೆಹ್ಲೋತ್ ಸಲಹೆ

    ಹುಬ್ಬಳ್ಳಿ: ಭಾರತದಂತಹ ವಿಕಾಸಶೀಲ ದೇಶದಲ್ಲಿ ದೃಷ್ಟಿಹೀನತೆ ಎಂಬುದು ಅಭಿವೃದ್ಧಿಗೆ ಹಿನ್ನಡೆಯಾಗಿ ಪರಿಣಮಿಸುತ್ತಿದೆ, ಇದರ ನಿವಾರಣೆಗೆ ಸಮರ್ಪಕ ಕಾರ್ಯ ಯೋಜನೆ ರೂಪಿಸುವುದು ಅಗತ್ಯವಾಗಿದೆ ಎಂದು ರಾಜ್ಯಪಾಲ ಥಾವರಚಂದ ಗೆಹ್ಲೋತ್ ಹೇಳಿದರು.

    ನಗರದ ಡೆನಿಸನ್ ಹೋಟೆಲ್​ನಲ್ಲಿ ಕರ್ನಾಟಕ ನೇತ್ರ ತಜ್ಞರ ಸಂಘ ಹಾಗೂ ಹುಬ್ಬಳ್ಳಿ ಧಾರವಾಡ ಘಟಕದ ವತಿಯಿಂದ ಶನಿವಾರ ಏರ್ಪಡಿಸಿದ್ದ 41ನೇ ರಾಜ್ಯ ಮಟ್ಟದ ನೇತ್ರ ತಜ್ಞರ ಸಮ್ಮೇಳನದಲ್ಲಿ (ಕಾಸ್ಕಾನ್) ಅವರು ಮಾತನಾಡಿದರು.

    ಕಾರ್ನಿಯಾ, ಗ್ಲಕೋಮಾ ಮುಂತಾದ ಸಮಸ್ಯೆಗಳಿಂದಾಗಿ ಹಲವರು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ದೃಷ್ಟಿ ಇಲ್ಲದೇ ಎಷ್ಟೋ ಜನರು ಪ್ರಕೃತಿ ಸೌಂದರ್ಯ ಸವಿಯುವ ಅವಕಾಶದಿಂದ ವಂಚಿತವಾಗುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ತಜ್ಞರಿಗೆ ಸಲಹೆ ನೀಡಿದರು.

    ಕರ್ನಾಟಕ ರಾಜ್ಯದಲ್ಲಿಯೂ ಅನಗತ್ಯ ಅಂಧತ್ವ ನಿವಾರಣೆಗೆ ಯೋಜನೆಗಳನ್ನು ರೂಪಿಸಲಾಗಿದೆ. ಈ ದಿಸೆಯಲ್ಲಿ ನೇತ್ರ ತಜ್ಞರ ಸಂಘದ ಕೊಡುಗೆ ಅಪಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಇಂದು ಭಾರತ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲುದು ಎಂಬುದನ್ನು ಸಾಬೀತು ಮಾಡಿದೆ. ಐಎನ್​ಎಸ್ ವಿಕ್ರಾಂತ ನಿರ್ವಣ, ಕರೊನಾ ಲಸಿಕೆ ಅಭಿಯಾನ ಯಶಸ್ವಿಯಾಗಿರುವುದು ಇದಕ್ಕೆ ಸಾಕ್ಷಿ. ಇಡೀ ಜಗತ್ತು ನಮ್ಮ ದೇಶದತ್ತ ಭರವಸೆಯ ಕಣ್ಣುಗಳಿಂದ ನೋಡುತ್ತಿದೆ. ಇಲ್ಲಿನ ತಜ್ಞರ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಈ ವಾತಾವರಣವನ್ನು ಭಾರತೀಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ಮುಂಬರುವ ದಿನಗಳಲ್ಲಿ ಭಾರತವು ಮೆಡಿಕಲ್ ಟೂರಿಸಂ ಹಬ್ ಆಗಿ ಬೆಳೆಯಲಿದೆ. ದೇಶದಲ್ಲಿ ಮೂರು ಜಿಲ್ಲೆಗೊಂದರಂತೆ ಮೆಡಿಕಲ್ ಕಾಲೇಜ್ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ ಎಂದ ಜೋಶಿ ಅವರು, ಅಂಧತ್ವ ನಿವಾರಣೆ ಹಾಗೂ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸಲು ನೇತ್ರ ತಜ್ಞರು ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

    ಸಂಘದ ಅಧ್ಯಕ್ಷ ಡಾ. ಎಸ್.ಬಿ. ಪಾಟೀಲ ಮಾತನಾಡಿ, 3300 ಸದಸ್ಯರನ್ನು ಒಳಗೊಂಡ ಸಂಘವು ಈ ವರ್ಷ 6 ವೈದ್ಯಕೀಯ ಕಾರ್ಯಾಗಾರ ಏರ್ಪಡಿಸಿದೆ. ಚಟುವಟಿಕೆಗಳು ನಿರಂತರ ನಡೆಯುತ್ತಿವೆ ಎಂದರು.

    ಡಾ. ಹೇಮಂತ ಮೂರ್ತಿ ಅವರನ್ನು ಸಂಘದ ಮುಂದಿನ ಅಧ್ಯಕ್ಷ ಎಂದು ಘೋಷಣೆ ಮಾಡಲಾಯಿತು. ಹಿರಿಯ ತಜ್ಞ ಡಾ. ಎಂ.ಎಂ. ಜೋಶಿ ಅಧ್ಯಕ್ಷತೆ ವಹಿಸಿದ್ದರು. ಹಲವು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಅಖಿಲ ಭಾರತ ನೇತ್ರ ತಜ್ಞರ ಸಂಘದ ಅಧ್ಯಕ್ಷ ಡಾ. ಲಲಿತ ವಮಾ, ಡಾ. ಗುರುಪ್ರಸಾದ, ಡಾ. ಶ್ರೀನಿವಾಸ ಜೋಶಿ, ಡಾ. ಆರ್. ಕೃಷ್ಣ ಪ್ರಸಾದ, ಡಾ. ಶಂಕರಗೌಡ ಪಾಟೀಲ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts