More

    ದೂರು ಬಾರದಂತೆ ಕರ್ತವ್ಯ ನಿರ್ವಹಿಸಿ

    ಕಮಲನಗರ: ಔರಾದ್ ಮತ್ತು ಕಮಲನಗರ ತಾಲೂಕು ಅಭಿವೃದ್ಧಿಗೆ ಕೋಟ್ಯಂತರ ರೂ. ಬಿಡಗಡೆ ಮಾಡಲಾಗಿದೆ. ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ದೂರು ಬಾರದಂತೆ ಕರ್ತವ್ಯ ನಿರ್ವಹಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ಕಿವಿಮಾತು ಹೇಳಿದರು.

    ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಹೆಚ್ಚಾಗಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಮತ್ತು ಸವರ್ೇ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ಬರುತ್ತಿವೆ. ಸುಧಾರಿಸಿಕೊಳ್ಳದಿದ್ದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗವುದು ಎಂದು ಎಚ್ಚರಿಕೆ ನೀಡಿದರು.

    ಔರಾದ್ ಮತ್ತು ಕಮಲನಗರ ತಾಲೂಕುಗಳ 39 ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಜಲ ಜೀವನ್ ಮಿಷನ್ ಅಡಿ 182 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಈ ಮೂಲಕ ಪ್ರತಿ ಮನೆ ಬಾಗಿಲಿಗೆ ನಲ್ಲಿ ಮೂಲಕ ನೀರು ಸರಬರಾಜು ಆಗಬೇಕು ಎಂದು ಸಲಹೆ ನೀಡಿದರು.

    ದಾಬಕಾ ಹೋಬಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಣ್ಣಪುಟ್ಟ ಕೆಲಸಗಳಿದ್ದಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಕೆಲಸ ಮಾಡಿಸಬೇಕು. ಬೇಸಿಗೆ ಮುಗಿಯುವವರೆಗೆ ದೂರು ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಮರಳಿನ ಲಾರಿಗಳ ಅತಿ ಭಾರದಿಂದ ರಸ್ತೆಗಳು ಹಾಳಾಗುತ್ತಿವೆ. ಇದಕ್ಕೆ ಬ್ರೇಕ್ ಹಾಕಬೇಕು ಎಂದು ಭಾಲ್ಕಿ ಡಿವೈಎಸ್ಪಿ ಜೇಮ್ಸ್​ ಮಿನೇಜಸ್​ ಅವರಿಗೆ ಸೂಚಿಸಿದರು.

    ಪಟ್ಟಣದ ಪಶು ವೈದ್ಯಾಧಿಕಾರಿ ಆಸ್ಪತ್ರೆಗೆ ಬಾರದ ಕಾರಣ ರೈತರ ಜಾನುವಾರಗಳಿಗೆ ಚಿಕಿತ್ಸೆ ನೀಡಲು ತೊಂದರೆ ಆಗುತ್ತಿದೆ ಎಂದು ಗ್ರಾಪಂ ಸದಸ್ಯ ಸಂತೋಷ ತೋರಣೇಕರ್ ಗಮನ ಸಳೆದರು. ಇದಕ್ಕೆ ಸ್ಪಂದಿಸಿದ ಸಚಿವ ಚವ್ಹಾಣ್ ಕರ್ತವ್ಯಕ್ಕೆ ಹಾಜರಾಗದೆ ರೈತರಿಗೆ ಸತಾಯಿಸುತ್ತಿರುವ ವೈದ್ಯರನ್ನು ವರ್ಗಾವಣೆ ಮಾಡಲು ನಿರ್ದೇಶಿಸಿದರು.

    ತಹಸೀಲ್ದಾರ್ ರಮೇಶ ಪೆದ್ದೆ ಮಾತನಾಡಿದರು. ಇಒ ಅಬ್ದುಲ್ ಫಜಲ್, ಎಡಿ ಮಾಣಿಕರಾವ ಕೌಟಗೆ, ಲೋಕೋಪಯೋಗಿ ಇಲಾಖೆ ಎಇಇ ವೀರಶೆಟ್ಟಿ ರಾಠೋಡ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸುಭಾಷ, ಗುರಪ್ಪ ಟೊಣ್ಣೆ, ಹಾವಗಿರಾವ ಮಠಪತಿ ಇತರರಿದ್ದರು.

    ಸ್ಥಳದಲ್ಲೇ ಪರಿಹಾರ: ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆ, ಪಹಣಿಯಲ್ಲಿನ ಲೋಪದೋಷ, ಪಡಿತರ ಚೀಟಿ, ಮಾಸಾಶನ, ಸರ್ವೇ, ಸ್ಮಶಾನ ಭೂಮಿ ಸಂಬಂಧಿತ ಅಹವಾಲು ಆಲಿಸಿದ ಸಚಿವ ಪ್ರಭು ಚವ್ಹಾಣ್, ಕೆಲ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು. ಉಳಿದ ಅರ್ಜಿಗಳನ್ನು ಪರಿಶೀಲಿಸಿ ಇತ್ಯರ್ಥ ಮಾಡುವಂತೆ ಅಧಿಕಾರಿಗಳಿಗೆ ಗಡುವು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts