More

    ದೂರದಿಂದಲೇ ಮಕ್ಕಳತ್ತ ಕೈ ಬೀಸಿದ ಪಾಲಕರು

    ಹುಬ್ಬಳ್ಳಿ: ತಿಂಗಳು, ವರ್ಷಗಟ್ಟಲೇ ದೂರದ ದೆಹಲಿಯಲ್ಲಿದ್ದ ಮಕ್ಕಳು ಮರಳಿ ಬಂದರೂ ಅವರನ್ನು ಸಮೀಪದಿಂದ ಮಾತನಾಡಿಸದಂತಹ ಸ್ಥಿತಿ ಹೆತ್ತ ಕರುಳಿನದ್ದು. ಉನ್ನತ ಶಿಕ್ಷಣಕ್ಕೆ, ಉದ್ಯೋಗಕ್ಕೆ ಹೋದವರು ಈ ಹಿಂದೆಲ್ಲ ರಜೆ ಇದ್ದಾಗ ನೇರವಾಗಿ ಮನೆಗೆ ಬರುತ್ತಿದ್ದರು. ಆದರೆ, ಈ ಸಲ ನೇರವಾಗಿ ತೆರಳಿದ್ದು 14 ದಿನಗಳ ಕ್ವಾರಂಟೈನ್​ಗೆ.

    ಶ್ರಮಿಕ ಎಕ್ಸ್​ಪ್ರೆಸ್ ರೈಲಿನ ಮೂಲಕ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಬಂದಿಳಿದ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರನ್ನು ಭೇಟಿಯಾಗಲು ಬಂದ ಹೆತ್ತವರು ದೂರದಲ್ಲೇ ನಿಂತು ಕೈಬೀಸಿ ಕಣ್ಣೀರು ಸುರಿಸಿದರು. ಲಾಕ್​ಡೌನ್​ನಿಂದಾಗಿ ದೆಹಲಿಯಲ್ಲಿ ಸಿಲುಕಿಕೊಂಡಿದ್ದ ಮಕ್ಕಳು, ನಿತ್ಯ ಅನುಭವಿಸುತ್ತಿದ್ದ ಕಷ್ಟಗಳನ್ನು ಫೋನ್ ಮೂಲಕ ಹಂಚಿಕೊಳ್ಳುತ್ತಿದ್ದರು. ಶನಿವಾರ ಮಕ್ಕಳು ಹಾಗೂ ಪಾಲಕರು ಮುಖಾಮುಖಿಯಾದರೂ, ಅಪರಿಚಿತರಂತೆ ದೂರ ನಿಂತಿದ್ದರು.

    ರೈಲ್ವೆ ಇಲಾಖೆಯ ನಿವೃತ್ತ ನೌಕರರಾದ ಹುಬ್ಬಳ್ಳಿ ಚೇತನಾ ಕಾಲನಿ ನಿವಾಸಿ ರಾಮಣ್ಣ ಹರ್ತನಳ್ಳಿ ದೆಹಲಿಯಿಂದ ಬರಲಿದ್ದ ತಮ್ಮ ಮಗಳ ಸ್ವಾಗತಕ್ಕೆಂದು ಬೆಳಗ್ಗೆ 6.30ಕ್ಕೆ ಬಂದು ಕಾಯುತ್ತಿದ್ದರು. ಮಗಳು ರಂಜಿತಾ ಯುಪಿಎಸ್​ಸಿ ಪರೀಕ್ಷೆ ತರಬೇತಿಗೆ 10 ತಿಂಗಳ ಹಿಂದೆ ದೆಹಲಿಗೆ ತೆರಳಿದ್ದಳು. ಮಗಳನ್ನು ಮನೆಗೆ ಕಳಿಸಿಕೊಡುವಂತೆ ಅಧಿಕಾರಿಗಳಲ್ಲಿ ಕೈಮುಗಿದು ವಿನಂತಿಸಿಕೊಳ್ಳುತ್ತೇನೆ. ಕಳುಹಿಸಿದರೆ ಖುಷಿಯಿಂದ ಮನೆಗೆ ಕರೆದುಕೊಂಡು ಹೋಗುತ್ತೇನೆಂದು ಅಧಿಕಾರಿಗಳೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದರು ವೃದ್ಧ ತಂದೆ ರಾಮಣ್ಣ.

    ರಾಮಣ್ಣ ಅವರ ಪ್ರಯತ್ನ ಕೈಗೂಡಲಿಲ್ಲ. ರೈಲ್ವೆ ನಿಲ್ದಾಣದಿಂದ ಹೊರ ಬಂದ ಮಗಳತ್ತ ದೂರದಿಂದಲೇ ಕೈಬೀಸಿದರು. ಕ್ವಾರಂಟೈನ್​ಗಾಗಿ ಧಾರವಾಡಕ್ಕೆ ತೆರಳಲು ಮಗಳು ಬಸ್ ಏರುತ್ತಿದ್ದಂತೆಯೇ ರಾಮಣ್ಣ ಅವರ ಧ್ವನಿ ಕ್ಷೀಣಗೊಂಡಿತು. ಇನ್ನೂ 14 ದಿನಗಳಷ್ಟೇ, ಆರಾಮವಾಗಿರು. ಆಮೇಲೆ ಮನೆಗೆ ಬಾ ಎಂದು ರಾಮಣ್ಣ ಒಲ್ಲದ ಮನಸ್ಸಿನಿಂದಲೇ ಮಗಳನ್ನು ಬೀಳ್ಕೊಟ್ಟರು. ಮಗಳು ರಂಜಿತಾ ಸಹ ಕುಟುಂಬದವರ ಆರೋಗ್ಯ ವಿಚಾರಿಸುವಾಗ ಕಣ್ಣೀರಾದರು.

    ಶ್ರಮಿಕ ಎಕ್ಸ್​ಪ್ರೆಸ್ ರೈಲಿನ ಮೂಲಕ ದೆಹಲಿಯಿಂದ ಹುಬ್ಬಳ್ಳಿಗೆ ಬಂದಿಳಿದವರಲ್ಲಿ ಹೆಚ್ಚಿನವರು ಯುಪಿಎಸ್​ಸಿ ತರಬೇತಿಗೆ ಹೋದವರು. ದೆಹಲಿಯ ವಿವಿಧ ತರಬೇತಿ ಕೇಂದ್ರಗಳಲ್ಲಿ ಇದ್ದ ಈ ವಿದ್ಯಾರ್ಥಿಗಳು ಲಾಕ್​ಡೌನ್ ಘೋಷಣೆಯಾಗುತ್ತಿದ್ದಂತೆಯೇ ಊರಿಗೆ ಬರಲು ಪ್ರಯತ್ನಿಸಿದ್ದರು. ತಮ್ಮೂರಿಗೆ ಕಳುಹಿಸುವಂತೆ ದೆಹಲಿಯ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿ, ಗೋಗರೆದಿದ್ದರು. ಕೇಂದ್ರ, ದೆಹಲಿ ಹಾಗೂ ಕರ್ನಾಟಕ ಸರ್ಕಾರಗಳಿಗೆ ಮನವಿಯನ್ನೂ ಮಾಡಿಕೊಂಡಿದ್ದರು.

    ವಿದ್ಯಾರ್ಥಿಗಳ ಸತತ ಪ್ರಯತ್ನದಿಂದಾಗಿ ದೆಹಲಿ ಹಾಗೂ ಕರ್ನಾಟಕ ಸರ್ಕಾರಗಳು ಎರಡೂ ರಾಜ್ಯಗಳ ಮಧ್ಯೆ ಶ್ರಮಿಕ ಸ್ಪೆಷಲ್ ರೈಲು ಓಡಿಸಲು ನಿರ್ಧರಿಸಿದವು. ವಿದ್ಯಾರ್ಥಿಗಳೊಂದಿಗೆ ದೆಹಲಿ ಹಾಗೂ ಹರ್ಯಾಣಾದಲ್ಲಿನ ಕರ್ನಾಟಕದ ಉದ್ಯೋಗಿಗಳೂ ತವರೂರಿಗೆ ತಲುಪಿದರು.

    ಊಟ ತಂದಿದ್ದ ಪಾಲಕರು: ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಎಚ್​ಡಿ ಮಾಡುತ್ತಿದ್ದ ಮಗ ಸಾಗರ, ಮನೆಯ ಊಟ ಮಾಡಿ ವರ್ಷವೇ ಕಳೆದು ಹೋಗಿದೆಯೆಂದು ಆತನಿಗೆ ಊಟ ಕೊಡಲು ಪಾಲಕರು ರೈಲ್ವೆ ನಿಲ್ದಾಣದ ಎದುರು ಕಾಯುತ್ತಿದ್ದರು.

    ಹೆತ್ತ ಕರುಳಿನ ಕೂಗಿನ ಅರಿವಿರದ ಕೆಲ ಪೊಲೀಸರು ಅವರನ್ನು ಅಲ್ಲಿಂದ ಓಡಿಸುತ್ತಿದ್ದರು. ಪಾಲಕರು ಮತ್ತೆ ಮತ್ತೆ ಊಟದ ಡಬ್ಬಿ ಇದ್ದ ಚೀಲ ಹಿಡಿದುಕೊಂಡು ನಿಲ್ದಾಣದ ಎದುರು ಬಂದು ನಿಲ್ಲುತ್ತಿದ್ದರು. ಕೊನೆಗೆ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರನ್ನು ಭೇಟಿಯಾದ ಸಾಗರನ ಪಾಲಕರು, ಊಟದ ಡಬ್ಬಿ ಇರುವ ಚೀಲವನ್ನು ದೂರದಲ್ಲಿಯೇ ಇಟ್ಟು, ತೆಗೆದುಕೊಳ್ಳುವಂತೆ ಮಗನಿಗೆ ಕೂಗಿ ಹೇಳಲು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡರು. ಆಯುಕ್ತ ಇಟ್ನಾಳ ಅವರು ಪಾಲಕರ ಮನವಿಗೆ ಸ್ಪಂದಿಸಿದರು.

    ಸಿಬ್ಬಂದಿಯನ್ನೇ ಹಿಡಿಯಲು ಹೋದರು!: ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ರೈಲ್ವೆ ಸಿಬ್ಬಂದಿಯೊಬ್ಬರು ಹೊರಗೆ ಹೋಗುತ್ತಿದ್ದರು. ಆತ ದೆಹಲಿಯಿಂದ ಬಂದ ವಿದ್ಯಾರ್ಥಿಯಾಗಿದ್ದು, ತಪ್ಪಿಸಿಕೊಂಡು ಹೋಗುತ್ತಿದ್ದಾನೆಂದು ಭಾವಿಸಿ ಪೊಲೀಸರು ಹಾಗೂ ಸಾರಿಗೆ ಬಸ್ ಚಾಲಕರು ಆತನನ್ನು ಹಿಡಿಯುವ ಪ್ರಯತ್ನ ನಡೆಸಿದರು. ರೈಲಿನಲ್ಲಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಯುವಕನೊಬ್ಬ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಅವಸರದಿಂದ ನಿಲ್ದಾಣದಿಂದ ಹೊರಗೆ ಬಂದ. ಬಸ್ ಏರಲು ಸರದಿಯಲ್ಲಿ ನಿಂತಿದ್ದವರ ಮಧ್ಯೆ ನುಸುಳಿ, ನಿಲ್ದಾಣದ ಆವರಣದಿಂದ ಅವಸರದಲ್ಲಿ ಹೊರಗೆ ಹೋಗತೊಡಗಿದ. ದೆಹಲಿಯಿಂದ ಬಂದವ ತಪ್ಪಿಸಿಕೊಂಡು ಹೋಗುತ್ತಿದ್ದಾನೆಂದು ಪೊಲೀಸರು ಹಾಗೂ ಬಸ್ ಚಾಲಕರು ಆತನನ್ನು ಹಿಡಿಯಲು ಯತ್ನಿಸಿದರು. ತಾನು ರೈಲ್ವೆ ಸಿಬ್ಬಂದಿಯೆಂದು ಆತ ಹೇಳಿದ ನಂತರ ಎಲ್ಲರೂ ನಿಟ್ಟುಸಿರು ಬಿಟ್ಟರು.

    ಕೊಪ್ಪಳ ಜಿಲ್ಲೆಯ 10ಕ್ಕೂ ಹೆಚ್ಚು ಸ್ನೇಹಿತರು ದೆಹಲಿಯಲ್ಲಿ ಯುಪಿಎಸ್​ಸಿ ತರಬೇತಿಗೆ ಹೋಗಿದ್ದೆವು. ಲಾಕ್​ಡೌನ್ ನಂತರ ಊರಿಗೆ ಮರಳಲು ಪ್ರಯತ್ನಿಸಿದರೂ ಆಗಲಿಲ್ಲ. ನಂತರ ಸರ್ಕಾರಗಳಿಗೆ ಪತ್ರ ಬರೆದು, ಮನವಿ ಮಾಡಿಕೊಂಡೆವು. ಪರಿಣಾಮವಾಗಿ, ರಾಜ್ಯಕ್ಕೆ ಮರಳಿದ್ದೇವೆ.

    |ಲಿಂಗಪ್ರಸಾದ, ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts