More

    ದುಬೈ ವಹಿವಾಟಿಗೆ ಯುಜಿಡಿ ಅಡ್ಡಿ

    ಆನಂದ ಅಂಗಡಿ ಹುಬ್ಬಳ್ಳಿ

    ಇದು ನಗರದ ದುಬೈ. ವಿಸ್ತಾರವಾಗಿ ಹೇಳುವುದಾದರೆ ದುರ್ಗದಬೈಲ್. ಬ್ರಾಡ್​ವೇ ಎಂದೂ ಕರೆಯುತ್ತಾರೆ. ದುರ್ಗದಬೈಲ್ ಎಂದಾಕ್ಷಣ ಕಣ್ಣೆದುರು ಮೂಡುವುದು ಇಲ್ಲಿನ ವ್ಯಾಪಾರ, ಜನ ದಟ್ಟಣೆ. ಸಂಜೆಯಾಯಿತೆಂದರೆ ಸಾಕು, ಈ ಮಾರುಕಟ್ಟೆ ಪ್ರದೇಶದಲ್ಲಿ ಜನಜಾತ್ರೆಯೇ ಸೇರುತ್ತದೆ.

    ಆದರೆ, ಕಳೆದ ಅಂದಾಜು 20 ದಿನಗಳಿಂದ ಕಾಲಿಡಲೂ ಆಗದಂತಹ ಸನ್ನಿವೇಶ ಇಲ್ಲಿ ಉದ್ಭವಿಸಿದೆ. ವಾಣಿಜ್ಯ ನಗರದ ಕೇಂದ್ರ ಬಿಂದು ಎಂದೇ ಕರೆಯಲಾಗುವ ದುರ್ಗದಬೈಲ್​ನ ಒಂದು ಭಾಗದಲ್ಲಿ ವ್ಯಾಪಾರ, ವಹಿವಾಟು ನೆಲಕಚ್ಚಿದೆ.

    ಇದಕ್ಕೆಲ್ಲ ಕಾರಣ, ಇಲ್ಲಿ ನಡೆಯುತ್ತಿರುವ ಒಳಚರಂಡಿ (ಯುಜಿಡಿ) ನಿರ್ಮಾಣ ಕಾಮಗಾರಿ. ಮಹಾನಗರ ಪಾಲಿಕೆಯ 52ನೇ ವಾರ್ಡ್ ವ್ಯಾಪ್ತಿಯ ದುರ್ಗದಬೈಲ್ ವೃತ್ತದಿಂದ ಶಹಾ ಬಜಾರ್​ವರೆಗಿನ 500 ಮೀಟರ್ ಉದ್ದದವರೆಗೆ ಒಳಚರಂಡಿ ಪೈಪ್ ಅಳವಡಿಸುವುದಕ್ಕಾಗಿ ತಗ್ಗು ತೋಡಲಾಗಿದೆ.

    16 ಲಕ್ಷ ರೂ. ವೆಚ್ಚದಲ್ಲಿ ಮಹಾನಗರ ಪಾಲಿಕೆ ಕೈಗೊಂಡಿರುವ ಒಳಚರಂಡಿ ನಿರ್ಮಾಣ ಕಾಮಗಾರಿಯಿಂದಾಗಿ ದುರ್ಗದಬೈಲ್ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ವ್ಯಾಪಾರಿಗಳು ಆರೋಪಿಸುತ್ತಾರೆ. ಕಲ್ಮೇಶ ಎಚ್. ಎಂಬುವವರಿಗೆ ಒಳಚರಂಡಿ ಕಾಮಗಾರಿಯ ಗುತ್ತಿಗೆ ನೀಡಲಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು 3 ತಿಂಗಳ ಅವಧಿ ನೀಡಲಾಗಿದೆ. ಭೂಮಿಯ ಒಳಗೆ ಹಾಕಿರುವ ಪೈಪ್​ಗಳನ್ನು ಸರಿಯಾಗಿ ಮುಚ್ಚದೆ, ತಗ್ಗು ತೋಡಿರುವ ಸ್ಥಳಕ್ಕೆ ಹೊಂದಿಕೊಂಡು ಮಣ್ಣು ಹಾಗೂ ಇಟ್ಟಿಗೆಯ ಗುಡ್ಡೆ ಹಾಕಲಾಗಿದೆ. ಮಣ್ಣು ಅತ್ತಿತ್ತ ಹರಡಿಹೋಗದಂತೆ ಇಟ್ಟಿಗೆಯಿಂದ ಒಂದೆರಡು ಅಡಿ ಎತ್ತರದ ತಾತ್ಕಾಲಿಕ ಗೋಡೆಯನ್ನಾದರೂ ಕಟ್ಟಿದ್ದರೆ ಜನರಿಗೆ ಓಡಾಡಲು ಸಣ್ಣ ಹಾದಿ ಸಿಗುತ್ತಿತ್ತು.

    ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ. ಆದರೆ, ಇನ್ನೂ 2 ತಿಂಗಳ ಸಮಯವಿದೆ. ತ್ವರಿತಗತಿಯಿಂದ ಒಳಚರಂಡಿ ಪೈಪ್ ಅಳವಡಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇವೆ. ಹೀಗಾಗಿ, ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

    ಪೈಪ್ ಅಳವಡಿಸುವ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆಯೇ, ತಗ್ಗು ಮುಚ್ಚುವ ಕಾರ್ಯ ಆಗಬೇಕಿತ್ತು. ರಸ್ತೆ ಮಧ್ಯೆ ಸಂಗ್ರಹಿಸಿಟ್ಟಿರುವ ಮಣ್ಣು, ಇಟ್ಟಿಗೆಯ ಗುಡ್ಡೆ ತೆರವುಗೊಳಿಸಬೇಕಿತ್ತು. ಆದರೆ, ಇಲ್ಲಿನ ಅವ್ಯವಸ್ಥೆಯಿಂದಾಗಿ ಹರಸಾಹಸಪಟ್ಟು ನಡೆಯುವಂತಹ ಪರಿಸ್ಥಿತಿ ನಿರ್ವಣಗೊಂಡಿದೆ. ವಾಹನ ಸಂಚಾರವನ್ನಂತೂ ಸಂಪೂರ್ಣ ನಿರ್ಬಂಧಿಸಲಾಗಿದೆ.

    ಪೈಪ್ ಅಳವಡಿಸುತ್ತಿದ್ದಂತೆಯೇ ರಸ್ತೆ ನಿರ್ವಿುಸುವ ಕಾರ್ಯವನ್ನೂ ಪಾಲಿಕೆ ಮಾಡುತ್ತಿಲ್ಲ. ಹೀಗಾಗಿ, ಸುತ್ತಲೂ ಧೂಳುಮಯ ವಾತಾವರಣ ನಿರ್ವಣಗೊಂಡಿದೆ. ದುರ್ಗದಬೈಲ್ ಎಂದರೆ ಸಾಕು, ಖುಷಿಯಿಂದ ಹೋಗುತ್ತಿದ್ದ ಜನ ಈಗ ಇಲ್ಲಿ ಕಾಲಿಡಲೂ ಹಿಂದೇಟು ಹಾಕುತ್ತಿದ್ದಾರೆ.

    ಯುಜಿಡಿ ಪೈಪ್ ಅನ್ನು ಗೌಳಿ ಗಲ್ಲಿಗೆ ಸಂರ್ಪಸಬೇಕಿರುವುದರಿಂದ ಕೆಲವೆಡೆ ತಗ್ಗು ಮುಚ್ಚಿಲ್ಲ. 2 ತಿಂಗಳಲ್ಲಿ ಇಲ್ಲಿನ ಕಾಮಗಾರಿ ಪೂರ್ಣಗೊಳ್ಳಲಿದೆ. ಸ್ಮಾರ್ಟ್​ಸಿಟಿ ಯೋಜನೆಯಡಿ ಇಲ್ಲಿ ರಸ್ತೆ ನಿರ್ವಿುಸಲಾಗುತ್ತದೆ.
    – ಸುನೀಲ ಆಲೂರೆ, ಮಹಾನಗರ ಪಾಲಿಕೆ ವಲಯ ಕಚೇರಿ 8ರ ಅಧಿಕಾರಿ

    ದುರ್ಗದಬೈಲ್​ನಲ್ಲಿ ನಡೆಸುವ ನಿತ್ಯದ ವ್ಯಾಪಾರದಿಂದ ಕುಟುಂಬದವರ ಹೊಟ್ಟೆ ತುಂಬುತ್ತಿತ್ತು. ಆದರೆ, ಕಳೆದ ಬೇಸಿಗೆಯಲ್ಲಿ ಕರೊನಾ ಲಾಕ್​ಡೌನ್, ನಂತರದಲ್ಲಿ ಕರೊನಾ ನಿರ್ಬಂಧಗಳಿಂದಾಗಿ ಹೆಚ್ಚು ಜನ ಬಾರದೇ ಇದ್ದುದರಿಂದ ನಾವು ಖಾಲಿ ಕುಳಿತಿದ್ದೇವು. 20 ದಿನಗಳಿಂದ ಇಲ್ಲಿ ಯುಜಿಡಿ ಕೆಲಸ ನಡೆಯುತ್ತಿದ್ದು, ರಸ್ತೆ ಅಗೆಯಲಾಗಿದೆ. ಜನರ ಓಡಾಟ ತೀವ್ರ ಕಡಿಮೆಯಾಗಿದೆ. ಹೀಗಾಗಿ, ವ್ಯಾಪಾರ ನಡೆಸುವುದು ಕಷ್ಟವಾಗಿದೆ.
    ಅರುಣ ಬಳಿಗಾರ, ರಸ್ತೆಬದಿ ವ್ಯಾಪಾರಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts