More

    ದಿ.ನಾಗಪ್ಪ ಆಪ್ತ ಬಸವರಾಜು ಜೆಡಿಎಸ್ ಸೇರ್ಪಡೆ

    ಹನೂರು: ದಿವಂಗತ ಎಚ್. ನಾಗಪ್ಪ ಅವರ ಕುಟುಂಬದ ಪ್ರಭಾವಿ ಆಪ್ತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಬಸಪ್ಪನದೊಡ್ಡಿ ಬಸವರಾಜು ಬುಧವಾರ ಬಿಜೆಪಿ ತೊರೆದು ಜೆಡಿಎಸ್ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.


    ಪಟ್ಟಣದ ಜೆಡಿಎಸ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದಲೂ ದಿ. ನಾಗಪ್ಪ ಅವರ ಕುಟುಂಬದೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದು, ಬೆಂಬಲಿಸುತ್ತ ಬಂದಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಆಂತರಿಕ ಬೆಳವಣಿಗೆಯಿಂದ ಮನಸ್ಸಿಗೆ ತುಂಬ ಬೇಸರವಾಗಿದೆ. ಇದರಿಂದ ಮಂಜುನಾಥ್ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗುತ್ತಿದ್ದೇನೆ. ಮಂಜುನಾಥ್ ಅವರು ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಕ್ಷೇತ್ರದ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ಅಲ್ಲದೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಗುರಿಯನ್ನಿಟ್ಟುಕೊಂಡಿದ್ದಾರೆ. ಈ ದಿಸೆಯಲ್ಲಿ ಸಂಪೂರ್ಣ ಬೆಂಬಲ ನೀಡುವುದರ ಮೂಲಕ ಈ ಬಾರಿ ಅವರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.


    ಎಂ.ಆರ್.ಮಂಜುನಾಥ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ನಾನು ಸೋತಿದ್ದರೂ ಧೃತಿಗೆಡದೆ ಕ್ಷೇತ್ರದ ಜನರೊಂದಿಗೆ ನಿರಂತರ ಒಡನಾಟ ಇಟ್ಟುಕೊಂಡಿದ್ದು, ಕೈಲಾದ ಸಾಮಾಜಿಕ ಸೇವೆ ಮಾಡುತ್ತ ಬಂದಿದ್ದೇನೆ. ಇದನ್ನು ಮೆಚ್ಚಿ ಬಸವರಾಜು ಅವರು ಸೇರ್ಪಡೆಯಾಗಿರುವುದು ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದ್ದು, ಗೆಲುವಿಗೆ ದಿಕ್ಕೂಚಿಯಾಗಿದೆ. ಕ್ಷೇತ್ರ ಹಿಂದುಳಿದಿದ್ದು, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಸಮರ್ಪಕ ನೀರಾವರಿ ವ್ಯವಸ್ಥೆ ಇಲ್ಲದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕ್ಷೇತ್ರದ ಅಭಿವೃದ್ಧಿಗೆ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.


    ಮತ್ತೀಪುರದ ಮಹದೇವಯ್ಯ, ಮಹದೇವಸ್ವಾಮಿ, ಹಲಗಾಪುರದ ಶಿವಲಂಕಾರಿ, ಮರಿಯಪುರದ ಪ್ರಕಾಶ್, ಎಲ್ಲೇಮಾಳದ ವೆಂಕಟರಾಜು, ಚಿಂಚಳ್ಳಿಯ ವೀರಪ್ಪಾಚಾರಿ, ಹೊಸಹಳ್ಳಿಯ ಮಹದೇವ ಸೇರಿದಂತೆ ಇನ್ನಿತರ ಮುಖಂಡರು ಬಿಜೆಪಿ ಹಾಗೂ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು.


    ಚಾಮುಲ್ ನಿರ್ದೇಶಕ ಮಹದೇವಪ್ರಸಾದ್, ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಮುಖಂಡರಾದ ಶಾಗ್ಯದ ರವಿ, ನಾಗೇಂದ್ರಬಾಬು, ಶಿವಮೂರ್ತಿ, ಮಂಜೇಶ್, ರಾಜುಗೌಡ, ರವಿ, ಮಹದೇವಗೌಡ, ರಮೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts