More

    ದಿನಸಿ ಮಾರ್ಕೆಟ್​ನಲ್ಲಿ ಜನಸಂದಣಿ

    ಹುಬ್ಬಳ್ಳಿ: ಇಲ್ಲಿಯ ಎಪಿಎಂಸಿ ಆವರಣದಲ್ಲಿರುವ ದಿನಸಿ (ಅಕ್ಕಿಹೊಂಡ) ಮಾರ್ಕೆಟ್​ನಲ್ಲಿ ದಿನ ನಿತ್ಯದ ಬಳಕೆ ವಸ್ತುಗಳ ಖರೀದಿಗೆ ಜನ ಮುಗಿ ಬೀಳುತ್ತಿದ್ದಾರೆ.

    ಅದರಲ್ಲೂ ತಿಂಗಳ ಮೊದಲ ವಾರ ಬಹಳಷ್ಟು ಜನರು ಸಂಬಳವಾದ ಕೂಡಲೇ ದಿನಸಿ ಖರೀದಿಗೆ ಬರುತ್ತಾರೆ. ಹಾಗಾಗಿ ಬೇರೆ ದಿನಗಳಿಗಿಂತ ಈಗ ಜನದಟ್ಟಣೆ ಹೆಚ್ಚಾಗಿದೆ. ದಿನಸಿ ಮಾರ್ಕೆಟ್​ನ ಪ್ರತಿಯೊಂದು ಮಳಿಗೆ ಎದುರು ಉದ್ದುದ್ದ ಸಾಲು ಕಂಡು ಬರುತ್ತಿದೆ.

    ಕರೊನಾ ಸೋಂಕು ಹರಡುವ ಭೀತಿ ಹಿನ್ನಲೆಯಲ್ಲಿ ಅಂಗಡಿಕಾರರು ಸಹ ಒಂದೇ ಕಡೆ ಬಾಗಿಲು ತೆರೆದು ಪ್ರತಿಯೊಬ್ಬರು ಸರದಿಯಲ್ಲಿ ಬರುವಂತೆ ವ್ಯವಸ್ಥೆ ಮಾಡಿದ್ದಾರೆ. ಪರಸ್ಪರ ಜನರು ಅಂತರ ಕಾಯ್ದುಕೊಳ್ಳಲು ಸೂಚನೆ ಸಹ ಕೊಡುತ್ತಿದ್ದಾರೆ. ಅಂಗಡಿಗಳ ಹತ್ತಿರ ಜನ ಬರದಂತೆ ಗೇಟ್ ಬಳಿಯೇ ತಡೆಗೋಡೆ ನಿರ್ವಿುಸಿಕೊಂಡಿದ್ದಾರೆ.

    ಆದಾಗ್ಯೂ ಜನರು ಅಂಗಡಿ ಮುಂದೆ ಜಮಾಯಿಸುತ್ತಿರುವುದರಿಂದ ಜನರ ಮಧ್ಯೆ ಅಂತರ ಅಷ್ಟಾಗಿ ಕಂಡು ಬರುತ್ತಿಲ್ಲ. ಒಬ್ಬರ ಹಿಂದೆ ಒಬ್ಬರು ನಿಲ್ಲುತ್ತಿದ್ದಾರೆ. ಸರದಿ ಬರುವವರೆಗೂ ತಾಸುಗಟ್ಟಲೇ ಅಲ್ಲಿಯೇ ನಿಲ್ಲಬೇಕಾದ ಅನಿವಾರ್ಯತೆಯೂ ಜನರಿಗೆ ಬರುತ್ತಿದೆ. ಪೊಲೀಸರು ಸಹ ಸ್ಥಳದಲ್ಲಿ ಇದ್ದು ಜನರಿಗೆ ತಿಳಿವಳಿಕೆ ನೀಡುತ್ತಿದ್ದಾರೆ. ಆದರೂ ಕೇಳದ ಜನ ಸೂಚನೆಗಳನ್ನು ಪಾಲಿಸುತ್ತಿಲ್ಲ. ಹಾಗಾಗಿ ದಿನಸಿ ಮಾರ್ಕೆಟ್​ನಲ್ಲಿ ಜನಸಂದಣಿ ಕಂಡು ಬರುತ್ತಿದೆ.

    ಕೆಲ ವಸ್ತುಗಳ ಕೊರತೆ: ದಿನಸಿ ಮಾರ್ಕೆಟ್​ನಲ್ಲಿ ಕೆಲ ವಸ್ತುಗಳ ಕೊರತೆಯಾಗುತ್ತಿದೆ. ಲಾಕ್​ಡೌನ್ ಆದ ನಂತರ ಕಳೆದೊಂದು ವಾರದಿಂದ ಎಲ್ಲ ದಿನಸಿ ಇತ್ತು. ಆದರೆ, ಇದೀಗ ಒಂದೊಂದೇ ವಸ್ತುಗಳ ಕೊರತೆಯಾಗುತ್ತಿದೆ.

    ಮುಖ್ಯವಾಗಿ ಎಫ್​ಎಂಸಿಜಿ (ಫಾಸ್ಟ್ ಮೂವಿಂಗ್ ಕಂಜ್ಯುಮರ್ ಗೂಡ್ಸ್)ಗಳಾದ ಸೋಪು, ಪೇಸ್ಟ್, ಬ್ರಷ್, ಶ್ಯಾಂಪು, ಬಿಸ್ಕಿಟ್ಸ್ ಇತ್ಯಾದಿಗಳು ಈಗಾಗಲೇ ಖಾಲಿಯಾಗಿವೆ. ಸರಕು ಸಾಗಾಟ ವಾಹನಗಳ ಸಂಚಾರ ಅನುಮತಿ ನೀಡಲಾಗಿದ್ದರೂ ಕಾರ್ವಿುಕರು ಬಾರದಿರುವುದು ಸೇರಿ ವಿವಿಧ ಕಾರಣಗಳಿಗೆ ಅವುಗಳನ್ನು ತರಿಸಿಕೊಳ್ಳಲು ಆಗಿಲ್ಲ ಎನ್ನಲಾಗಿದೆ.

    ರವೆ, ಅಕ್ಕಿ, ಹಿಟ್ಟು, ಬೇಳೆ ಇತ್ಯಾದಿಗಳಿಗೆ ಸದ್ಯಕ್ಕೆ ಕೊರತೆ ಇಲ್ಲ. ಆದರೆ, ಎಫ್​ಎಂಸಿಜಿ ವಸ್ತುಗಳು ಖಾಲಿಯಾಗಿವೆ. ಅವುಗಳು ಬೇರೆ ಜಿಲ್ಲೆಯಿಂದ ಬರಬೇಕಾಗಿರುವುದರಿಂದ ತೊಂದರೆಯಾಗಿದೆ ಎನ್ನುತ್ತಾರೆ ಎಪಿಎಂಸಿ ಪ್ರಾಂಗಣದ ದಿನಸಿ ವರ್ತಕ ಸುರೇಶ ಅಂಗಡಿ ಅವರು.

    ತರಕಾರಿ: ಹುಬ್ಬಳ್ಳಿ ಎಪಿಎಂಸಿ ತರಕಾರಿ ಮಾರ್ಕೆಟ್​ನಲ್ಲಿ ಎಂದಿನಂತೆ ಸಗಟು ವ್ಯಾಪಾರ ನಡೆಯಿತು. ಜನದಟ್ಟಣೆ ಇರಲಿಲ್ಲ. ವಿವಿಧ ರಸ್ತೆಗಳಿಗೆ ತರಕಾರಿ ಮಾರ್ಕೆಟ್ ಹಂಚಿ ಹೋಗಿರುವುದು ಅನುಕೂಲವಾಗಿದೆ. ಕರೊನಾ ಸೋಂಕು ಹರಡದಂತೆ ತಡೆಯಲು ಇದು ಸರಿಯಾದ ಮಾರ್ಗವಾಗಿದೆ. ಯಾವುದೇ ಗೌಜು, ಗದ್ದಲ ಇಲ್ಲದೇ ಸುವ್ಯವಸ್ಥಿತವಾಗಿ ತರಕಾರಿ ಮಾರ್ಕೆಟ್ ನಡೆದಿರುವುದು ಜನರಿಗೆ ನೆಮ್ಮದಿ ತಂದಿದೆ. ಕೆಲವೇ ವರ್ತಕರ ಹಿತಾಸಕ್ತಿಗಾಗಿ ಈ ಮೊದಲು ನಡೆಯುತ್ತಿದ್ದ ಇಕ್ಕಟ್ಟಾದ ಮೂಲ ತರಕಾರಿ ಮಾರುಕಟ್ಟೆಯಲ್ಲಿ ಹಲವು ಗೋಲ್​ವಾಲ್​ಗಳು ನಡೆಯುತ್ತಿದ್ದವು. ಮಧ್ಯವರ್ತಿಗಳು ದರ ಇಳಿಸುತ್ತಿದ್ದರಿಂದ ರೈತರ ಶೋಷಣೆಯೂ ಆಗುತ್ತಿತ್ತು. ಇದೀಗ ವಿಶಾಲ ಜಾಗದಲ್ಲಿ ಆರಾಮವಾಗಿ ಕುಳಿತು ವ್ಯಾಪಾರ ನಡೆಯುತ್ತಿದೆ. ಯಾವುದೇ ಗೊಂದಲ ಇಲ್ಲ. ಇದೇ ರೀತಿ ವಹಿವಾಟು ನಡೆಯಬೇಕು ಎಂದು ಕೊಪ್ಪಳದಿಂದ ಬಂದಿದ್ದ ರೈತರೊಬ್ಬರು ಅನುಭವ ಹಂಚಿಕೊಂಡರು.

    ದಾಖಲೆ ಬರೆದ ಕಾರ್ವಿುಕರ ಶ್ರಮದಾನ: ಹು-ಧಾ ಅವಳಿನಗರದ ವಿವಿಧ ಗೋದಾಮುಗಳಲ್ಲಿದ್ದ 1000 ಮೆಟ್ರಿಕ್ ಟನ್ ಗೋಧಿ ಏ. 3ರಂದು ಎತ್ತಲಾಗಿದ್ದು, ಒಂದೇ ದಿನದಲ್ಲಿ ಈ ಎಲ್ಲ ಧಾನ್ಯ ಸಾಗಿಸುವಲ್ಲಿ ಯಶಸ್ವಿಯಾಗಿರುವ ಕಾರ್ವಿುಕರ ಶ್ರಮದಾನ ದಾಖಲೆ ಬರೆದಿದೆ. ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿದಾರರಿಗೆ ಈ ಗೋಧಿ ವಿತರಿಸಲಾಗುತ್ತದೆ. ಇದು ದಿನವೊಂದರಲ್ಲಿ ಎತ್ತಿದಚ ಅಧಿಕ ಪ್ರಮಾಣದ ದಾಖಲೆಯಾಗಿದೆ. ಧಾರವಾಡ ಜಿಲ್ಲೆಗೆ 13,720 ಕ್ವಿಂಟಾಲ್ ಅಕ್ಕಿ ಹಂಚಿಕೆಯಾಗಿದ್ದು, ಈಗಾಗಲೇ 10232 ಕ್ವಿಂಟಾಲ್ ಅಕ್ಕಿ ಗೋದಾಮಿನಿಂದ ತೆಗೆಯಲಾಗಿದೆ. ಇನ್ನೂ 3487 ಕ್ವಿಂಟಲ್ ಅಕ್ಕಿ ತೆಗೆಯಬೇಕಾಗಿದೆ. ಹಂಚಿಕೆಯಾಗಿರುವ 1400 ಮೆಟ್ರಿಕ್ ಟನ್ ಗೋಧಿಯಲ್ಲಿ, ಈಗಾಗಲೇ 1014 ಮೆಟ್ರಿಕ್ ಟನ್ ಗೋಧಿ ಇಂದು ಎತ್ತಲಾಗಿದೆ. ಹುಬ್ಬಳ್ಳಿಯ ಬಮ್ಮಾಪುರ, ಉಣಕಲ್​ನ ಭಾರತೀಯ ಆಹಾರ ನಿಗಮದ ಗೋದಾಮುಗಳು, 8 ಸಗಟು ಖರೀದಿದಾರರ ಗೋದಾಮುಗಳು, ಹುಬ್ಬಳ್ಳಿ, ಧಾರವಾಡ, ನವಲಗುಂದ, ಕುಂದಗೋಳ ಹಾಗೂ ಕಲಘಟಗಿಯಲ್ಲಿರುವ ಕರ್ನಾಟಕ ರಾಜ್ಯ ಆಹಾರ ನಾಗರಿಕ ಸರಬರಾಜು ನಿಗಮದ 7 ಗೋದಾಮುಗಳು ಹಾಗೂ ಹುಬ್ಬಳ್ಳಿಯ ಕೇಂದ್ರಿಯ ಗ್ರಾಹಕರ ಗೋದಾಮು ಸೊಸೈಟಿಯ ಉಗ್ರಾಣಗಳಿಂದ ನಾಲ್ಕು ಸಗಟು ಸಾಗಣೆ ಗುತ್ತಿಗೆದಾರ ಸಂಸ್ಥೆಗಳ 500 ರಿಂದ 600 ಶ್ರಮಿಕ ಹಮಾಲರು ಈ ಬೃಹತ್ ಪ್ರಮಾಣದ ಗೋದಿ ಸಾಗಣೆ ಮಾಡಿರುವುದನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಶಂಸಿಸಿದ್ದಾರೆ. ನಾಳೆ ಸಂಜೆಯೊಳಗೆ ಈ ಆಹಾರ ಧಾನ್ಯ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ತಲುಪಲಿದೆ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಎಫ್​ಸಿಐನ ಮಂಜುನಾಥ ಹೊಂಗಲ್, ವರುಣ ದೇವ್, ಕೆಎಫ್​ಸಿಎಸ್​ಸಿ ವ್ಯವಸ್ಥಾಪಕ ಅನಿಲ ಹಂದಿಗೋಳ, ಸಂಗಪ್ಪ ಪಸಾರದ, ಕೇಶವ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts