More

    ದಾವಣಗೆರೆ ಎರಡನೇ ರಾಜಧಾನಿಯಾಗಲಿ -ಬಸವಪ್ರಭು ಸ್ವಾಮೀಜಿ ಒತ್ತಾಯ – ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ

    ದಾವಣಗೆರೆ: ಕನ್ನಡ ಭಾಷೆಯ ಉಳಿವಿಗೆ ದಾವಣಗೆರೆಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಣೆ ಮಾಡಬೇಕು ಎಂದು ಚಿತ್ರದುರ್ಗ ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.
    ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
    ದಾವಣಗೆರೆ ರಾಜಧಾನಿಯಾಗಿದ್ದರೆ ಕನ್ನಡಕ್ಕೆ ತೊಂದರೆ ಬರುತ್ತಿರಲಿಲ್ಲ. ಬೆಂಗಳೂರು ರಾಜಧಾನಿಯಾಗಿದ್ದರಿಂದ ಕನ್ನಡ ಉಳಿವಿಗಾಗಿ ಹೋರಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.
    ಹೊನ್ನಾಳಿ ಬಳಿ ಜಲಾಶಯ ನಿರ್ಮಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬಹುದಾಗಿತ್ತು. ಈಗಲೂ ಕಾಲ ಮಿಂಚಿಲ್ಲ. ರಾಜ್ಯದ ಮಧ್ಯಭಾಗದಲ್ಲಿ ಜಲಾಶಯ ನಿರ್ಮಿಸಿದರೆ ದಾವಣಗೆರೆ ಸೇರಿ ಹಾವೇರಿ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಿಗೆ ನೀರನ್ನು ಒದಗಿಸಬಹುದು. ನೀರಾವರಿ ತಜ್ಞರು ಹಾಗೂ ಜಲ ಸಂಪನ್ಮೂಲ ಸಚಿವರು ಈ ಬಗ್ಗೆ ಚಿಂತನೆ ನಡೆಸಬೇಕು ಎಂದರು.
    ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಉದ್ಯೋಗ ನೀಡುವ ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು. ಶಿಕ್ಷಣ, ಉದ್ಯೋಗ ಹಾಗೂ ಕಾನೂನು ಮೊದಲಾದ ಕ್ಷೇತ್ರಗಳಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಕನ್ನಡ ಭಾಷೆಯ ಉಳಿವಿಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಮೀನಮೇಷ ಸಲ್ಲದು ಎಂದು ತಿಳಿಸಿದರು.
    ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಕನ್ನಡ ಭಾಷೆ ಬೆಳೆದಿದ್ದು ಉತ್ತುಂಗ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲೂ ಇದನ್ನು ಉಳಿಸಿ ಬೆಳೆಸಲು ಕನ್ನಡ ಮಾಧ್ಯಮಕ್ಕೆ ಪ್ರೋತ್ರಾಹಿಸಬೇಕು ಎಂದು ತಿಳಿಸಿದರು.
    ಶ್ರೀಶೈಲ ಎಜುಕೇಷನ್ ಟ್ರಸ್ಟ್‌ನ ಜಿ.ಎಂ.ಲಿಂಗರಾಜ್ ಮಾತನಾಡಿ, ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಅಧಿಕವಾಗಿದೆ. ಮಾತೃಭಾಷೆ ಕನ್ನಡ ವಿಶ್ವಕ್ಕೆ ಪಸರಿಸುವಂತಾಗಬೇಕು ಎಂದು ಆಶಿಸಿದರು.
    ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಜಿ.ಯಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್, ದೇವರಮನೆ ಶಿವರಾಜ್, ಪಕ್ಷಿ ತಜ್ಞ ಡಾ.ಎಸ್.ಶಿಶುಪಾಲ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್ ಇತರರು ಇದ್ದರು. ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts