More

    ದಾವಣಗೆರೆಯಲ್ಲಿ ವಂದೇ ಭಾರತ್ ರೈಲಿಗೆ ಭರ್ಜರಿ ಸ್ವಾಗತ- ಸೆಲ್ಫೀ ಮೂಡಿಗೆ ಜಾರಿದ ಜನ

    ದಾವಣಗೆರೆ: ಧಾರವಾಡ-ಕೆಎಸ್‌ಆರ್ ಬೆಂಗಳೂರು ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಮಂಗಳವಾರದಿಂದ ಆರಂಭವಾಗಿದ್ದು, ದಾವಣಗೆರೆಯಲ್ಲಿ ಸ್ಥಳೀಯ ಜನರು ಭರ್ಜರಿ ಸ್ವಾಗತ ನೀಡಿದರು.
    8 ಬೋಗಿಗಳು, 530 ಆಸನ ಸಾಮರ್ಥ್ಯವುಳ್ಳ, ವಿಶೇಷ ಸೌಲಭ್ಯಗಳುಳ್ಳ ಈ ರೈಲು ಮಧ್ಯಾಹ್ನ ದೊಡ್ಡ ಶಬ್ದ ಮಾಡುತ್ತಲೆ ದಾವಣಗೆರೆ ತಲುಪುತ್ತಿದ್ದಂತೆ ಜನರು ವಂದೇಮಾತರಂ ಘೋಷಣೆ ಹಾಕಿದರು. ಹಷೋದ್ಗಾರ ವ್ಯಕ್ತಪಡಿಸಿದರು.
    ಪ್ಲಾಟ್‌ಫಾರಂ ಮೇಲೆ ನೆರೆದಿದ್ದ ಜನರು ಮೊಬೈಲ್‌ಗಳಲ್ಲಿ ವೀಡಿಯೋ, ಚಿತ್ರ ಸೆರೆ ಹಿಡಿದರು. ಸೆಲ್ಫೀಗೆ ಮುಗಿ ಬಿದ್ದರು. ರೈಲು ನಿಲ್ಲುತ್ತಿದ್ದಂತೆ ಕೆಲವರು ರೈಲನ್ನು ಹತ್ತಿ ಅಲ್ಲಿನ ಸೌಲಭ್ಯಗಳು, ವಿಶೇಷತೆಗಳನ್ನು ಕಣ್ತುಂಬಿಕೊಂಡರು. ಜನರೊಂದಿಗೆ ಸಂಭ್ರಮಿಸಿದ ಸಂಸದ ಜಿ.ಎಂ.ಸಿದ್ದೇಶ್ವರ ರೈಲಿನತ್ತ ಕೈ ಸಂಜ್ಞೆ ಮಾಡಿದರು.
    ಸಾಂಕೇತಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ ‘2014ನೇ ವರ್ಷದವರೆಗೆ 375 ಕಿ.ಮೀ, ರೈಲು ಜೋಡಿಮಾರ್ಗ ನಿರ್ಮಾಣವಾಗಿದ್ದರೆ ಪ್ರಧಾನಿ ಮೋದಿ ಕಾಲದಲ್ಲಿ 1394 ಕಿಮೀವರೆಗೆ ಏರಿಕೆಯಾಗಿದೆ. 2014ರ ವರೆಗೆ 1600 ಕಿ.ಮೀ. ರೈಲು ಮಾರ್ಗದ ವಿದ್ಯುದೀಕರಣವಾಗಿದೆ. ಕಳೆದ 9 ವರ್ಷದಲ್ಲಿ 37 ಸಾವಿರ ಕಿಮೀ ವರೆಗೆ ವಿಸ್ತರಣೆಯಾಗಿದೆ. ಮೋದಿ ಸರ್ಕಾರದಲ್ಲಿ ರೈಲು ಇಲಾಖೆಯಲ್ಲಿ ಕ್ರಾಂತಿಯಾಗಿದೆ’ ಎಂದು ಬಣ್ಣಿಸಿದರು.
    ಮಂಗಳವಾರ ಒಟ್ಟು ಐದು ವಂದೇಭಾರತ್ ಎಕ್ಸ್‌ಪ್ರೆಲ್ ರೈಲುಗಳು ಸಂಚಾರ ಆರಂಭಿಸುತ್ತಿದ್ದು ಇದರೊಂದಿಗೆ ದೇಶದಲ್ಲಿ ಈಗಿರುವ ವಂದೇ ಭಾರತ್ ರೈಲುಗಳ ಸಂಖ್ಯೆ 24ಕ್ಕೆ ಏರಿದೆ. ಮೇಕ್ ಇನ್ ಇಂಡಿಯಾದಡಿ, ವಿಶ್ವದರ್ಜೆ ಸೌಲಭ್ಯಗಳನ್ನು ಕಲ್ಪಿಸುತ್ತಿರುವ ಈ ರೈಲುಗಳು ಪ್ರಯಾಣಿಕರ ಮನಸ್ಸನ್ನು ಗೆದ್ದಿವೆ. ಮೋದಿ ಅವರ ಕಾಲದಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ, ವಿಮಾನ ಮಾರ್ಗಗಳು ಹೆಚ್ಚಿವೆ ಎಂದು ಹೇಳಿದರು.
    ದಾವಣಗೆರೆಯಲ್ಲಿ 50 ವರ್ಷದಷ್ಟು ಹಳೆಯದಾದ ರೈಲು ನಿಲ್ದಾಣ ಸುವ್ಯವಸ್ಥೆಯಿಂದ ಕೂಡಿರಲಿಲ್ಲ. 14 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಿದ್ದೇವೆ. ಅಶೋಕ ರೈಲ್ವೆ ಗೇಟ್ ಬಳಿ ಜನಸಂಚಾರಕ್ಕಾಗಿ ಅಂಡರ್‌ಪಾಸ್ ನಿರ್ಮಿಸಲಾಗಿದೆ. ಆದರೆ ಜಾಗದ ಕೊರತೆಯಿಂದಾಗಿ ಅಲ್ಲಿ ತೊಂದರೆಯಾಗಿದೆ.
    ಆದರೆ ವಿಪಕ್ಷದರು ಟೀಕೆ ಮಾಡುತ್ತಿದ್ದಾರೆ. ಜಾಗ ಲಭ್ಯವಾಗಿದ್ದರೆ ಶೂನ್ಯ ಡಿಗ್ರಿಯಲ್ಲೂ ಕಾಮಗಾರಿ ಮಾಡಿರುತ್ತಿದ್ದೆವು. ಆದರೆ ಜಾಗದ ಲಭ್ಯತೆ ಕಡಿಮೆ ಇದೆ. ವಿಪಕ್ಷದವರು ಟೀಕೆಗಾಗಿ ಟೀಕೆ ಮಾಡಬಾರದು. ಇಲ್ಲಿ ಸಬ್‌ವೇ ಮಾಡಲಿಕ್ಕೆ ಸಹ ಸೂಚನೆ ನೀಡಿದ್ದೇವೆ ಎಂದರು.
    ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ್‌ಗೆ ಮಹತ್ವ ನೀಡಿದ್ದಾರೆ. ರೈಲು ನಿಲ್ದಾಣಗಳಲ್ಲಿಯೂ ಸರಿಯಾದ ನಿರ್ವಹಣೆ ಆಗಬೇಕು. ಇದಕ್ಕೆ ಸಾರ್ವಜನಿಕರ ತೆರಿಗೆ ಹಣ ಬಳಸುತ್ತಿರುವ ಕಾರಣಕ್ಕೆ ಇವನ್ನು ನಮ್ಮದೇ ಆಸ್ತಿ ಎಂದು ಭಾವಿಸಿ ಎಚ್ಚರಿಕೆ ವಹಿಸಬೇಕು ಎಂದರು.
    ದಾವಣಗೆರೆ ರೈಲು ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಬಾತ್‌ರೂಂನ ನಲ್ಲಿಗಳು ಮುರಿದಿರುವ ಕಡೆಗಳಲ್ಲಿ ಬದಲಿ ನಲ್ಲಿಗಳನ್ನು ಅಳವಡಿಸುವಂತೆ ಹಾಗೂ ಮಕ್ಕಳಿಗೆ ಹಾಲುಣಿಸುವ ತಾಯಿ ಕೇಂದ್ರದಲ್ಲಿ ಮೇಜು, ಮಂಚ ಅಳವಡಿಸುವಂತೆಯೂ ಡಿಆರ್‌ಎಂ ಶಿಲ್ಪಿ ಅಗರವಾಲ್ ಅವರಿಗೆ ಸೂಚನೆ ನೀಡಿದರು. ಇನ್ನು 2-3 ದಿನದಲ್ಲಿ ನಿಲ್ದಾಣಕ್ಕೆ ಭೇಟಿ ನೀಡಲಿದ್ದು, ಸ್ವಚ್ಛತೆಯನ್ನು ಪರಿಶೀಲಿಸುವುದಾಗಿ ಅಲ್ಲಿನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
    ಪ್ರಾಸ್ತಾವಿಕ ಮಾತನಾಡಿದ ಮಹಾಂತೇಶ ಆರ್.ಕಮ್ಮಾರ ವಂದೇಭಾರತ್ ಇಂದಿನ ಮಕ್ಕಳ ಜಮಾನದ ರೈಲು. ಇಲ್ಲಿ ಅಂತರ್ಜಾಲ, ಜಿಪಿಎಸ್ ಇನ್ನಿತರೆ ಸೌಲಭ್ಯಗಳಿವೆ. ಜನರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
    ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್, ಮೇಯರ್ ವಿನಾಯಕ ಪೈಲ್ವಾನ್, ಉಪಮೇಯರ್ ಯಶೋದಾ ಯೋಗೀಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಯಶವಂತರಾವ್ ಜಾಧವ್, ಗಾಯತ್ರಮ್ಮ, ರೇಣುಕಾ, ಲೋಹಿತಾಶ್ವ ಇತರರಿದ್ದರು. ಸಾಲಿಗ್ರಾಮ ಗಣೇಶ ಶೆಣೈ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts