More

    ದಾಖಲಾತಿಯಂತೆ ತಿದ್ದುಪಡಿ ಸೇರ್ಪಡೆ ಮಾಡಿ -ಮತದಾರರ ಯಾದಿ ಪರಿಷ್ಕರಣೆ ಸಭೆ

    ದಾವಣಗೆರೆ: ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆಗೆ ಚುನಾವಣಾ ಆಯೋಗವು ಜ.12 ರ ವರೆಗೆ ಅವಕಾಶ ಕಲ್ಪಿಸಿದೆ. ತಿದ್ದುಪಡಿ, ಸೇರ್ಪಡೆ, ಮರಣ ಹೊಂದಿದ ಮತದಾರರ ಕುರಿತ ದಾಖಲಾತಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕಿ ಗುಂಜನ್ ಕೃಷ್ಣ ಸೂಚನೆ ನೀಡಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಮತದಾರರ ಪಟ್ಟಿ ಕುರಿತ ಪರಿಷ್ಕರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಅವಧಿಯಲ್ಲಿ ಹೆಚ್ಚು ಯುವ ಮತದಾರರನ್ನು ಸೇರ್ಪಡೆ ಮಾಡಲು ಮುಂದಾಗಬೇಕು ಎಂದರು.
    ಪರಿಷ್ಕರಣೆ ವೇಳೆ ಸ್ವಯಂಪ್ರೇರಿತವಾಗಿ ಯಾವುದೇ ದಾಖಲೀಕರಣ ಮಾಡದೇ ದಾಖಲಾತಿ ಆಧಾರದ ಮೇಲೆ ಹೆಸರು ಸೇರ್ಪಡೆ, ತಿದ್ದುಪಡಿ ಮಾಡಬಹುದು. ಮೃತ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಬೇಕು. ಯಾವುದೇ ಲೋಪ ಆಗದಂತೆ ಎಚ್ಚರ ವಹಿಸಬೇಕೆಂದರು.
    ಮತದಾರರ ಪಟ್ಟಿ ವೀಕ್ಷಕರ ಲಾಗಿನ್‌ಗೆ ಸಲ್ಲಿಕೆಯಾದ ನಮೂನೆ 6, 7, 8 ರಡಿ ಸಲ್ಲಿಸಿದ ಅರ್ಜಿಗಳಲ್ಲಿ 208 ಅನ್ನು ಎಲ್ಲರ ಸಮ್ಮುಖದಲ್ಲಿ ಪರಿಶೀಲನೆ ನಡೆಸಲಾಯಿತು.
    ಜಿಲ್ಲೆಯಲ್ಲಿ ಜ.4 ರ ವರೆಗೆ 7,27,204 ಪುರುಷ, 7,31,251 ಮಹಿಳೆಯರು, 120 ತ್ರಿಲಿಂಗಿ, 454 ಸೇವಾ ಮತದಾರರು ಸೇರಿ 14,59,029 ಮತದಾರರಿದ್ದಾರೆ. ಕ್ಷೇತ್ರವಾರು ಜಗಳೂರು 1,95,558, ಹರಿಹರ 2,09,919, ದಾವಣಗೆರೆ ಉತ್ತರ 2,46,105, ದಕ್ಷಿಣ 2,15,230, ಮಾಯಕೊಂಡ 1,93,070, ಚನ್ನಗಿರಿ 2,00,750, ಹೊನ್ನಾಳಿ 1,98,397 ಮತದಾರರಿದ್ದಾರೆ.
    ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಪಾಲಿಕೆ ಆಯುಕ್ತೆ ಎನ್.ರೇಣುಕಾ, ತಹಸೀಲ್ದಾರ್ ಡಾ.ಬಿ.ಎನ್. ಅಶ್ವತ್ಥ ಹಾಗೂ ರಾಜಕೀಯ ಪಕ್ಷಗಳ ಮುಖಂಡರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts