More

    ಮೈಸೂರು ದಸರಾದಲ್ಲಿ ಜಾನಪದ ಗೀತೆಗಳ ರಸದೌತಣ!

    ಮೈಸೂರು: ಗ್ರಾಮೀಣ ಜನರು ತಮ್ಮ ನೋವು, ನಲಿವುಗಳನ್ನು ಹಾಡಿನ ಮೂಲಕ ಕಟ್ಟಿ ಸಮಾಜಕ್ಕೆ ಮೌಲ್ಯಯುತ ಸಂದೇಶ ಸಾರಿದ ಜಾನಪದ ಗೀತೆಗಳನ್ನು ಹೊನ್ನಾರು ಜಾನಪದ ಗಾಯಕರು ಶುಕ್ರವಾರ ಸಂಜೆ ಅರಮನೆ ಆವರಣದಲ್ಲಿ ಅನಾವರಣಗೊಳಿಸಿದರು.
    ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಅರಮನೆ ವೇದಿಕೆಯಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ 7ನೇ ದಿನದಂದು ಗಾಯಕರು ಗ್ರಾಮೀಣ ಸೊಗಡಿನಲ್ಲಿ ಸೊಗಸಾದ ಜಾನಪದ ಗೀತೆಗಳ ರಸದೌತಣವನ್ನು ಶ್ರೋತೃಗಳಿಗೆ ಉಣಬಡಿಸಿದರು.
    ಮೊದಲಿಗೆ ಶರಣು ಶರಣಯ್ಯ ಎಂದು ಗಜಮುಖನಿಗೆ ನಮಿಸಿದರು. ನಂತರ ಝಳ್ನೀರ್ ಜಂಗೀನ ಪಾದಕೆ, ಒಲಿದು ಮಾರಮ್ಮಯ್ಯ ಒಲಿದು ಬಾರೆ… ಜೋಗಿ ಹಾಡು, ಹೂವ ಕುಯ್ಯಣ ಬನ್ನಿ ಮೊಗ್ಗ ಕುಯ್ಯಣ ಬನ್ನಿ… ಮುದ್ದು ಭೈರುವ ಸ್ವಾಮಿ ಹುಲಿಗದ್ದುಗೆ ಏರುವಾಗ… ಎಂಬ ಗೀತೆಗಳನ್ನು ಹಾಡಿ ಕೇಳುಗರನ್ನು ಪರವಶಗೊಳಿಸಿದರು.
    ಬಳಿಕ ಕೆಂಪಚಾರಿ ಕುಲುಮೆ, ನುಚ್ಚಾಯ್ತು ನೀರ ಹೊಳೆಯಾಗೆ… ನಾನು ಬತ್ತಿನ ಜಾತ್ರೆಗೆ ಮತ್ತು ಸತ್ಯಶರಣೆ ಶಂಕಮ್ಮನ ಕಥೆ ಹೋಲುವ ಕೋಲುಮಂಡೆ ಜಂಗಮ್ಮ ದೇವರು ಕೊರಣ್ಯಕ್ಕೆ ದಯ ಮಾಡವರೆ… ಎಂಬ ಗೀತೆಯನ್ನು ಹಾಡುತ್ತಾ ಜಾನಪದ ಸಂಸ್ಕೃತಿಯ ಹಿರಿಮೆ ಸಾರಿ ಎಲ್ಲರನ್ನೂ ರಂಜಿಸಿದರು.ಖ
    ಗಾಯಕರಾದ ಡಾ.ಪಿ.ಕೆ.ರಾಜಶೇಖರ್, ಪ್ರೊ.ಮೈಸೂರು ಕೃಷ್ಣಮೂರ್ತಿ, ಡಾ.ಮೈಸೂರು ಉಮೇಶ್, ಗಜಾನನ, ಚಿಕ್ಕಮಳಲಿ ಆರ್.ಮಹದೇವ, ಬಸವರಾಜು, ದಡದಳ್ಳಿ ಬ್ರಹ್ಮದೇವ್, ಶಂಭುಶಿಂಗಶೆಟ್ಟಿ, ರವಿಕುಮಾರ್ ಇಲವಾಲ ಅವರು ಜಾನಪದ ಗೀತೆಗಳನ್ನುಯನ್ನು ಪ್ರಸ್ತುತಪಡಿಸಿದರು.

    ಮೈಸೂರು ದಸರಾದಲ್ಲಿ ಜಾನಪದ ಗೀತೆಗಳ ರಸದೌತಣ!

    ಸಂಗೀತ ಜುಗಲ್ಬಂದಿ
    ಬಳಿಕ ವಿದ್ವಾನ್ ಮೈಸೂರು ಕಾರ್ತಿಕ್ ನಾಗರಾಜ್ ಅವರು ವಯೋಲಿನ್ ಹಾಗೂ ಉಸ್ತಾದ್ ಶಫೀಕ್ ಖಾನ್ ಅವರು ಸಿತಾರ್‌ನಲ್ಲಿ ಪ್ರಸ್ತುತಪಡಿಸಿದ ವಿಶೇಷ ಕರ್ನಾಟಕ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತದ ಜುಗಲ್ಬಂದಿ ವೀಕ್ಷಕರನ್ನು ಬೆರಗುಗೊಳಿಸಿತು.
    ಮೊದಲಿಗೆ ಜನಪ್ರಿಯ ರಚನೆಯಾದ ವಾತಾಪಿ ಗಣಪತಿಂಭಜೇ ಎಂಬ ಮುತ್ತುಸ್ವಾಮಿ ದೀಕ್ಷಿತರ ಕೃತಿಯನ್ನು ಹಾಗೂ ಸಂಗೀತ ಕಛೇರಿಯಲ್ಲಿ ಪ್ರಮುಖವಾಗಿ ಹಿಂದೋಳ ಅಥವಾ ಮಾಲ್ಕೊಮ್ಸ್ ರಾಗದಲ್ಲಿ ರಾಗ-ತಾನ-ಪಲ್ಲವಿಯನ್ನು ಪ್ರಸ್ತುತಪಡಿಸುವ ಮುಖೇನ ಸಂಗೀತ ಪ್ರಿಯರನ್ನು ಮಂತ್ರಮುಗ್ಧರನ್ನಾಗಿಸಿದರು.
    ಕಡೆಯದಾಗಿ ವಂದೇ ಮಾತರಂ ಗೀತೆಯನ್ನು ನುಡಿಸುವ ಮೂಲಕ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು. ಮೃದಂಗದಲ್ಲಿ ವಿದ್ವಾನ್ ತುಮಕೂರು ಬಿ.ರವಿಶಂಕರ್, ತಬಲದಲ್ಲಿ ಪಂಡಿತ್ ರವೀಂದ್ರ ಯಾವಗಲ್ ಸಾಥ್ ನೀಡಿದರು.
    ಫೊಟೋ ಇದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts