More

    ದಸರಾ ಹೆಣ್ಣಾನೆಗಳಿಗೆ ಗರ್ಭಧಾರಣೆ ಪರೀಕ್ಷೆ

    ಮೈಸೂರು: ನಾಡಹಬ್ಬ ದಸರಾ ಸಮೀಪಿಸುತ್ತಿರುವಂತೆಯೇ ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಲ್ಲದೆ, ಈ ಬಾರಿ ಹೆಣ್ಣಾನೆಗಳಿಗೆ ಗರ್ಭಧಾರಣೆ ಪರೀಕ್ಷೆ (ಪ್ರೆಗ್ನೆನ್ಸಿ ಟೆಸ್ಟ್) ಮಾಡಲು ಅರಣ್ಯ ಇಲಾಖೆ ಮುಂದಾಗಿದೆ.
    ಹಿಂದಿನ ದಸರಾ ಸಮಯದಲ್ಲಿ ರಾಮಾಪುರ ಆನೆ ಶಿಬಿರದಿಂದ ‘ಲಕ್ಷ್ಮೀ’ ಎಂಬ ಹೆಣ್ಣಾನೆಯನ್ನು ಗರ್ಭ ಧರಿಸಿರುವ ಮಾಹಿತಿ ತಿಳಿಯದೆ ಕರೆತರಲಾಗಿತ್ತು. ಹೀಗಾಗಿ ದಸರಾ ವೇಳೆ ಅರಮನೆ ಆವರಣದಲ್ಲಿಯೇ ಗಂಡು ಮರಿಗೆ ಜನ್ಮ ನೀಡಿತ್ತು. ಬಳಿಕ ಅದನ್ನು ಪ್ರತ್ಯೇಕವಾಗಿ ಇರಿಸಿ ಆರೈಕೆ ಮಾಡಬೇಕಾಯಿತು.
    ಗರ್ಭಿಣಿ ಎಂದು ತಿಳಿಯದೆ ಆನೆ ಕರೆತಂದಿದ್ದ ಅರಣ್ಯ ಇಲಾಖೆಯ ಕಾರ್ಯವೈಖರಿಗೆ ರಾಷ್ಟ್ರ ಮಟ್ಟದಲ್ಲಿಯೂ ಟೀಕೆಗಳು ವ್ಯಕ್ತವಾಗಿ ವನ್ಯಜೀವಿ ತಜ್ಞರು, ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತಿರುವ ಅರಣ್ಯ ಇಲಾಖೆ ಈ ಬಾರಿ ಆನೆಗಳ ಆಯ್ಕೆ ಮಾನದಂಡವನ್ನು ಬದಲಿಸಿದೆ.
    ಪ್ರತಿವರ್ಷ ಅರಣ್ಯ ಇಲಾಖೆ ಸಾಕಾನೆ ಶಿಬಿರಗಳಿಗೆ ತೆರಳಿ ಆನೆಗಳಿಗೆ ಶಬ್ದ ಪರಿಚಯದ ಬಗ್ಗೆ ಪಟಾಕಿ, ವಾಹನ ಶಬ್ದ ಪರೀಕ್ಷೆ ನಡೆಸಿ ಬಳಿಕ ಆರೋಗ್ಯ ತಪಾಸಣೆ ನಡೆಸಲಾಗುತ್ತಿತ್ತು. ಈಗ ಹೆಚ್ಚುವರಿಯಾಗಿ ಹೆಣ್ಣಾನೆಗಳ ಗರ್ಭಾವಸ್ಥೆಯನ್ನು ಪರೀಕ್ಷೆ ಮಾಡಲಾಗುತ್ತಿದೆ.
    ಮೂರು ವಾರಗಳ ಅಂತರದಲ್ಲಿ ನಾಲ್ಕು ಬಾರಿ ಹೆಣ್ಣಾನೆಗಳ ರಕ್ತ ಮಾದರಿಯನ್ನು ಪರೀಕ್ಷಿಸಿ, ಆನೆ ಗರ್ಭಿಣಿಯೋ ಅಲ್ಲವೋ ಎಂದು ಖಚಿತಪಡಿಸಿಕೊಂಡು ಬಳಿಕ ಆಯ್ಕೆ ಮಾಡಲಿದೆ. ಇದಕ್ಕಾಗಿ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದ ವರಲಕ್ಷ್ಮೀ ಮತ್ತು ಹೊಸ ಆನೆ ಲಕ್ಷ್ಮೀ ಹಾಗೂ ದುಬಾರೆ, ರಾಮಾಪುರ ಆನೆ ಶಿಬಿರಗಳ ಹೆಣ್ಣಾನೆಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
    ದಸರಾಕ್ಕೆ ಆನೆಗಳನ್ನು ಆಯ್ಕೆ ಮಾಡುವಾಗ ಹಿಂದಿನ ಉತ್ಸವದಲ್ಲಿ ಪಾಲ್ಗೊಂಡ ಅನುಭವ, ಆನೆಯ ಸನ್ನಡತೆ, ಶಬ್ದಗಳಿಗೆ ಬೆದರದೆ ಇರುವುದು, ಮಾವುತ ಮತ್ತು ಕಾವಡಿಗಳ ದಸರಾ ಅನುಭವ, ಜನ ಮತ್ತು ವಾಹನ ದಟ್ಟಣೆಗೆ ಬೆದರದೆ ಇರುವುದೇ ಆಯ್ಕೆ ಮಾನದಂಡವಾಗಿತ್ತು.
    14 ಆನೆ ಕರೆತರಲು ಚಿಂತನೆ:
    ಈ ಬಾರಿ ದಸರಾಕ್ಕೆ ಅಂಬಾರಿ ಹೊರುವ ಕ್ಯಾಪ್ಟನ್ ‘ಅಭಿಮನ್ಯು’ ನೇತೃತ್ವದಲ್ಲಿ 14 ಆನೆಗಳನ್ನು ಕರೆತರಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ದಸರಾ ಉತ್ಸವಕ್ಕೆ ಮೂರು ತಿಂಗಳಷ್ಟೇ ಬಾಕಿ ಇದ್ದು, ತಾಲೀಮು ನಡೆಸುವ ಸಲುವಾಗಿ 2 ತಿಂಗಳು ಮುಂಚಿತವಾಗಿಯೇ ಗಜಪಡೆಯನ್ನು ಮೈಸೂರಿಗೆ ಕರೆತರಲು ಇಲಾಖೆ ನಿರ್ಧರಿಸಿದೆ.
    ಇದಕ್ಕಾಗಿ ದುಬಾರೆ, ಮತ್ತಿಗೋಡು, ರಾಮಾಪುರ ಹಾಗೂ ಕೆ.ಗುಡಿ ಸಾಕಾನೆ ಶಿಬಿರಗಳಿಗೆ ಅರಣ್ಯಾಧಿಕಾರಿಗಳು ಮತ್ತು ವೈದ್ಯರ ತಂಡ ಜು.20ರ ನಂತರ ತೆರಳಿ ಆನೆಗಳನ್ನು ಪರೀಕ್ಷಿಸಿ ತಿಂಗಳಾಂತ್ಯಕ್ಕೆ ದಸರಾದಲ್ಲಿ ಭಾಗವಹಿಸುವ ಆನೆಗಳ ಪಟ್ಟಿ ಸಿದ್ಧಪಡಿಸಲಿದೆ. ಬಳಿಕ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ದಸರೆಗೆ ಬರುವ ಆನೆಗಳನ್ನು ಅಂತಿಮಗೊಳಿಸಲಾಗುತ್ತದೆ.
    ಮತ್ತಿಗೋಡು ಆನೆ ಶಿಬಿರದ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ಮಹೇಂದ್ರ, ಭೀಮ, ಅಶ್ವತ್ಥಾಮ, ವರಲಕ್ಷ್ಮೀ ಆನೆಗಳನ್ನು ಪರಿಗಣಿಸಲಾಗಿದೆ. ದುಬಾರೆ ಆನೆ ಶಿಬಿರದಿಂದ ಧನಂಜಯ, ಸುಗ್ರೀವ, ಗೋಪಿ, ಪ್ರಶಾಂತ, ಶ್ರೀರಾಮ, ವಿಕ್ರಮ ಮತ್ತು ಪಾರ್ಥಸಾರಥಿ, ಕಾವೇರಿ ಆನೆಗಳನ್ನು ಕರೆತರಲು ಚಿಂತನೆ ನಡೆಸಿದೆ.
    ಮೂರು ಆನೆಗಳು ಇಲ್ಲ:
    ಕಳೆದ ಬಾರಿ ದಸರಾಕ್ಕೆ ಆಗಮಿಸಿದ್ದ 14 ಆನೆಗಳಲ್ಲಿ 3 ಆನೆಗಳು ಈ ಬಾರಿ ಇಲ್ಲ. ಮುಂದಿನ ಅಂಬಾರಿ ಹೊರುವ ಆನೆ ಎಂದೇ ಬಿಂಬಿತವಾಗಿದ್ದ ಗೋಪಾಲಸ್ವಾಮಿ ಆನೆ ಕಳೆದ ನವೆಂಬರ್‌ನಲ್ಲಿ ಕಾಡಾನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದರೆ, ‘ಮಾಜಿ ಕ್ಯಾಪ್ಟನ್’ ಅರ್ಜುನ ಆನೆಗೆ ವಯಸ್ಸಾಗಿರುವುದರಿಂದ ಈ ಬಾರಿ ದೂರ ಉಳಿದಿದೆ. ಇನ್ನು ದಸರಾಕ್ಕೆ ಬಂದು ಗಂಡು ಮರಿಗೆ ಜನ್ಮ ನೀದಿದ್ದ ಲಕ್ಷ್ಮೀ ಆನೆಗೂ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ.

    ಮಾಸಾಂತ್ಯಕ್ಕೆ ದಸರಾ ಆನೆಗಳ ಆಯ್ಕೆ
    ಈ ಬಾರಿ 14 ಆನೆಗಳನ್ನು ಕರೆತರಲು ಉದ್ದೇಶಿಸಿದ್ದು, ಮಾಸಾಂತ್ಯದಲ್ಲಿ ಆನೆಗಳನ್ನು ಆಯ್ಕೆ ಮಾಡಿ ಪಟ್ಟಿ ಸಿದ್ಧಪಡಿಸಲಾಗುವುದು. ಗರ್ಭ ಧರಿಸಿರುವ ಬಗ್ಗೆ ತಿಳಿಯಲು ಹೆಣ್ಣಾನೆಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು.
    ಡಾ.ಮಾಲತಿಪ್ರಿಯಾ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ವೃತ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts