More

    ದಸಂಸ ಕಾರ್ಯಕರ್ತರ ಪ್ರತಿಭಟನೆ

    ನಂಜನಗೂಡು: ಕೋಮು ಸಂಘರ್ಷ ಹತ್ತಿಕ್ಕಲು ಹಾಗೂ ಮಹಿಳೆಯರ ಬೆತ್ತಲೆ ಮೆರವಣಿಗೆ ಘಟನೆ ತಡೆಯುವಲ್ಲಿ ವಿಫಲವಾಗಿರುವ ಮಣಿಪುರ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.


    ನಗರದ ಮಿನಿವಿಧಾನಸೌಧದ ಎದುರು ಸೇರಿದ ಕಾರ್ಯಕರ್ತರು ಮಣಿಪುರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕೇಂದ್ರ ಸರ್ಕಾರದ ವೈಫಲ್ಯವನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.


    ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ ಮಾತನಾಡಿ, ಮೂರು ತಿಂಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷದಲ್ಲಿ ಅಸಂಖ್ಯಾತ ನಾಗರಿಕರು ಸಾವು ನೋವಿಗೆ ತುತ್ತಾಗಿದ್ದಾರೆ. ಅಷ್ಟಕ್ಕೆ ಸೀಮಿತವಾಗದೆ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಬೆತ್ತಲೆ ಮೆರವಣಿಗೆ ನಡೆಸುವ ಮೂಲಕ ಅನಾಗರಿಕ ವರ್ತನೆ ತೋರಿರುವುದು ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ ಎಂದು ಆರೋಪಿಸಿದರು.


    ಮಣಿಪುರದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದ್ದರೂ ತಹಬದಿಗೆ ತರುವಲ್ಲಿ ಮಣಿಪುರ ಸರ್ಕಾರ ವಿಫಲವಾಗಿದೆ. ಆಡಳಿತ ಯಂತ್ರವನ್ನು ಸರಿಪಡಿಸುವಲ್ಲಿ ಕೇಂದ್ರ ಸರ್ಕಾರವೂ ವಿಫಲವಾಗಿದೆ. ಹೀಗಾಗಿ ರಾಷ್ಟ್ರಪತಿ ಮಧ್ಯೆ ಪ್ರವೇಶಿಸಿ ಮಣಿಪುರ ಸರ್ಕಾರವನ್ನು ವಜಾಗೊಳಿಸಬೇಕು. ಕೂಡಲೇ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ ಅಲ್ಲಿನ ಜನರು ನೆಮ್ಮದಿಯಿಂದ ಜೀವಿಸುವಂತಾಗಬೇಕು. ಆ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.


    ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಶಿವಕುಮಾರ್ ಕಾಸನೂರು ಅವರ ಮೂಲಕ ರಾಷ್ಟ್ರಪತಿಗೆ ಬರೆದಿರುವ ಮನವಿ ಪತ್ರವನ್ನು ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಿದರು.
    ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದೇವರಸನಹಳ್ಳಿ ಬಸವರಾಜು, ನಗರ್ಲೆ ವಿಜಯಕುಮಾರ್, ರೈತಸಂಘದ ತಾಲೂಕು ಅಧ್ಯಕ್ಷ ಸತೀಶ್‌ರಾವ್, ಪ್ರತಿಧ್ವನಿ ವೇದಿಕೆ ಅಧ್ಯಕ್ಷ ತ್ರಿನೇಶ್, ಮುಳ್ಳೂರು ನವೀನ್, ಬಸವರಾಜು, ಶಿವಣ್ಣ, ಶಿವಲಿಂಗ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts