More

    ದಲಿತ ಸಂಘಟನೆಗಳ ಮುಖಂಡರ ಪ್ರತಿಭಟನೆ

    ಹುಣಸೂರು: ಡಿ.6ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ದಲಿತ ಸಂಘಟನೆಗಳ ಪ್ರತಿಭಟನಾ ಕಾರ್ಯಕ್ರಮದ ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿದ್ದ ಪೋಸ್ಟರ್‌ಗಳ ಮೇಲೆ ಹನುಮ ಜಯಂತಿ ಆಚರಣೆ ಪೋಸ್ಟರ್ ಅಂಟಿಸುವ ಮೂಲಕ ಸಂವಿಧಾನಶಿಲ್ಪಿ ಅಂಬೇಡ್ಕರ್‌ಗೆ ಅವಮಾನಿಸಲಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

    ಪಟ್ಟಣದ ಸಂವಿಧಾನ ವೃತ್ತದಲ್ಲಿ ಸೋಮವಾರ ಜಮಾಯಿಸಿದ ಮುಖಂಡರು, ತಾಲೂಕು ಆಡಳಿತ ನ್ಯಾಯ ದೊರಕಿಸಿಕೊಡಲು ಆಗ್ರಹಿಸಿ ಘೋಷಣೆಗಳನ್ನು ಮೊಳಗಿಸಿದರು. ವಕೀಲ ಪುಟ್ಟರಾಜು ಮಾತನಾಡಿ, ಪಟ್ಟಣ ವ್ಯಾಪ್ತಿಯ 10-20 ಕಡೆಗಳಲ್ಲಿ ಉದ್ದೇಶ ಪೂರ್ವಕವಾಗಿ ಅಂಬೇಡ್ಕರ್ ಭಾವಚಿತ್ರವಿರುವ ಪೋಸ್ಟರ್ ಮೇಲೆ ಹನುಮ ಜಯಂತಿ ಪೋಸ್ಟರ್ ಅಂಟಿಸಿದ್ದಾರೆ. ಇದು ಖಂಡನೀಯ. ತಾಲೂಕು ಆಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
    ಪ್ರತಿಭಟನಾ ಸ್ಥಳಕ್ಕೆ ಡಿವೈಎಸ್‌ಪಿ ರವಿಪ್ರಸಾದ್ ಆಗಮಿಸಿ ಪ್ರತಿಭಟನಾಕಾರರಿಂದ ಮಾಹಿತಿ ಪಡೆದರು. ಸ್ಥಳಕ್ಕೆ ಹನುಮಂತ್ಸುತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್ ಅವರನ್ನು ಕರೆಯಿಸಿ ಈ ಕುರಿತು ಸ್ಪಷ್ಟೀಕರಣ ಕೋರಿದಾಗ, ತಮ್ಮ ಗಮನಕ್ಕೆ ವಿಷಯ ಬಂದ ಕೂಡಲೇ ತಮ್ಮ ಸಂಘಟನೆ ಸದಸ್ಯರು ಸ್ಥಳಕ್ಕೆ ಧಾವಿಸಿ ಎಲ್ಲ ಪೋಸ್ಟರ್‌ಗಳನ್ನು ತೆರವುಗೊಳಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದೇವೆ. ಯಾರೋ ಕೆಲ ಕಿಡಿಗೇಡಿಗಳು ಇಂಥ ಕೃತ್ಯ ನಡೆಸಿದ್ದಾರೆ. ಆದರೂ ಆಗಿರುವ ಅಚಾತುರ್ಯಕ್ಕೆ ಇಡೀ ಸಮಿತಿ ಪರವಾಗಿ ನಾನು ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ. ದಲಿತ ಸಂಘಟನೆ ಮುಖಂಡರು ನಮ್ಮನ್ನು ಮನ್ನಿಸಿ ಹನುಮ ಜಯಂತಿ ಆಚರಣೆಗೆ ಸಹಕರಿಸಬೇಕೆಂದು ಕೋರಿದರು.

    ನಂತರ ಡಿವೈಎಸ್‌ಪಿ ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು. ಕಿಡಿಗೇಡಿಗಳನ್ನು ಗುರುತಿಸಿ ಕಾನೂನುಕ್ರಮ ಜರುಗಿಸದಿದ್ದರೆ ಡಿ.7ರಂದು ಹುಣಸೂರಿನಲ್ಲಿ ರಸ್ತೆ ಸಂಚಾರ ತಡೆ ನಡೆಸುವುದಾಗಿ ಪುಟ್ಟರಾಜು ಎಚ್ಚರಿಸಿದರು.

    ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷ ದೊಡ್ಡಹೆಜ್ಜೂರು ನಾಗೇಶ್, ಪುಟ್ಟಮಾದಯ್ಯ, ಸಿದ್ದೇಶ್, ಬಸವರಾಜು, ವೆಂಕಟೇಶ್, ಶಿವಣ್ಣ, ಸಂತೋಷ್, ಕಾಂತರಾಜು, ತಟ್ಟೆಕೆರೆ ನಾಗರಾಜು, ಚಿತ್ರರಂಜನ್, ಪ್ರಸನ್ನ ಸೋಮನಹಳ್ಲಿ, ಸಂಪತ್, ಹನುಮಯ್ಯ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts