More

    ದನಗಳ ಜಾತ್ರೆಗೆ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ


    ಹಾಸನ : ಚನ್ನರಾಯಪಟ್ಟಣದ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿಯ 91 ನೇ ದನಗಳ ಬೃಹತ್ ಜಾತ್ರಾ ಮಹೋತ್ಸವಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಶನಿವಾರ ಚಾಲನೆ ನೀಡಿದರು.


    ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಊರ ಮಧ್ಯಭಾಗದಲ್ಲಿರುವ ಶ್ರೀ ಬಸವೇಶ್ವರಸ್ವಾಮಿ ಮೆರೆವಿಗ್ರಹ ದೇಗುಲಕ್ಕೆ ಹಸಿರು ಚಪ್ಪರ ಹಾಕಲಾಗಿತ್ತು. ಬಾಳೆಕಂದು, ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ 7.30 ರಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸಿದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭಕ್ತರು ಪಾದಪೂಜೆ ಮಾಡಿ ಸ್ವಾಗತಿಸಿದರು.


    ಮೆರೆವಿಗ್ರಹ ದೇಗುಲದ ಗರ್ಭಗುಡಿಯಲ್ಲಿ ವಿವಿಧ ಬಗೆಯ ಪುಷ್ಪ ಹಾಗೂ ಒಡವೆ-ವಸ್ತ್ರಗಳಿಂದ ಸಿಂಗರಿಸಲಾಗಿದ್ದ ಶ್ರೀ ಬಸವೇಶ್ವರಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚುಂಚಶ್ರೀಗಳು ಚಾಲನೆ ನೀಡಿದರು.


    ಶ್ರೀಗಳ ಸಾನ್ನಿಧ್ಯದಲ್ಲಿ ಊರ ಮಧ್ಯದಲ್ಲಿರುವ ಮೆರೆವಿಗ್ರಹ ದೇಗುಲದಿಂದ ಶ್ರೀ ಬಸವೇಶ್ವರಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವವು ಮಂಗಳವಾದ್ಯದೊಂದಿಗೆ ಆರಂಭಗೊಂಡು ಗ್ರಾಮದ ರಾಜಬೀದಿಯಲ್ಲಿ ವೈಭವದಿಂದ ಸಾಗಿತು. ಅಲ್ಲಿಂದ ಬೋರೆ ಮೇಗಲ ಶ್ರೀಕ್ಷೇತ್ರದ ಮೂಲ ಸನ್ನಿಧಿಗೆ ಆಗಮಿಸಿತು.


    ಧರ್ಮ ಧ್ವಜಾರೋಹಣ: ಶ್ರೀಕ್ಷೇತ್ರದ ಆವರಣದಲ್ಲಿ ಶ್ರೀಗಳು ಧರ್ಮ ಧ್ವಜಾರೋಹಣ ನೆರವೇರಿಸಿ ಸನ್ನಿಧಿಯಲ್ಲಿ ನಡೆಯಲಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಗಂಗಾಪೂಜೆ, ಗೋಪೂಜೆ, ಅಂಕುರಾರ್ಪಣೆ ಬಳಿಕ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಅಭಿಷೇಕ ಹಾಗೂ ವಿವಿಧ ಪೂಜಾ ಕೈಂರ್ಯಗಳನ್ನು ನೆರವೇರಿಸಿದರು.


    ಹಾಸನ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ, ಶ್ರೀಕ್ಷೇತ್ರ ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಶಾಸಕ ಸಿ.ಎನ್.ಬಾಲಕೃಷ್ಣ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರಮೀಳಾ ಪ್ರಕಾಶ್, ಕಬ್ಬಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪೃಥ್ವಿಕುಮಾರ್, ಮಾಜಿ ಅಧ್ಯಕ್ಷ ಶಿವನಂಜೇಗೌಡ, ದಿಡಗ ಗ್ರಾಪಂ ಮಾಜಿ ಅಧ್ಯಕ್ಷ ಎನ್.ಆರ್.ರತ್ನರಾಜ್, ಮಾಜಿ ಸದಸ್ಯ ತೋಟಿ ನಾಗರಾಜ್, ಪ್ರಮುಖರಾದ ಗಣೇಶ್‌ಗೌಡ, ಹೊನ್ನೇಗೌಡ, ಜವರೇಗೌಡ, ಕಬ್ಬಳಿ ಹಾಗೂ ಸುತ್ತಮುತ್ತಲ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts