More

    ಥರ್ಮಲ್ ಸ್ಕ್ರೀನಿಂಗ್ ಇಲ್ಲ… ಮಾಸ್ಕೂ ಧರಿಸಿಲ್ಲ…

    ರಾಣೆಬೆನ್ನೂರ: ಲಾಕ್​ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬಸ್ ಸಂಚಾರ ಆರಂಭಗೊಂಡಿದೆ. ಇದುವರೆಗೆ ಬಿಕೋ ಎನ್ನುತ್ತಿದ್ದ ಇಲ್ಲಿಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವು ಮಂಗಳವಾರ ಪ್ರಯಾಣಿಕರಿಂದ ತುಂಬಿಕೊಂಡಿತ್ತು.

    ಬಸ್​ಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮೂವರು ಕುಳಿತುಕೊಳ್ಳುವ ಸೀಟ್​ನಲ್ಲಿ ಇಬ್ಬರು ಹಾಗೂ ಇಬ್ಬರು ಕುಳಿತುಕೊಳ್ಳುವ ಸೀಟ್​ನಲ್ಲಿ ಒಬ್ಬರು ಮಾತ್ರ ಕುಳಿತುಕೊಳ್ಳಬೇಕು. ಪ್ರತಿಯೊಬ್ಬ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂಬ ಸರ್ಕಾರದ ನಿಯಮ ಇಲ್ಲಿಯ ಬಸ್ ನಿಲ್ದಾಣದಲ್ಲಿ ಗಾಳಿಗೆ ತೂರಲಾಗಿದೆ. ಪ್ರಯಾಣಿಕರಿಗೆ ಯಾವುದೇ ರೀತಿಯ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿಲ್ಲ. ಗ್ರಾಮೀಣ ಬಸ್ ಹಾಗೂ ದಾವಣಗೆರೆ-ರಾಣೆಬೆನ್ನೂರ, ಹಾವೇರಿ-ರಾಣೆಬೆನ್ನೂರ ಬಸ್​ಗಳಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸದೇ ಕುಳಿತ ದೃಶ್ಯಗಳು ಕಂಡುಬಂದವು.

    ಆಂತಕ ಹುಟ್ಟಿಸಿದ ದಾವಣಗೆರೆ ಬಸ್: ಪಕ್ಕದ ದಾವಣಗೆರೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಹೆಚ್ಚಳವಾಗಿದೆ. ಮಂಗಳವಾರ ಒಂದೇ ದಿನ 19 ಪ್ರಕರಣ ಪತ್ತೆಯಾಗಿದ್ದು, ಕರೊನಾ ರೋಗಿಗಳ ಸಂಖ್ಯೆ 109ಕ್ಕೆ ಏರಿಕೆಯಾಗಿದೆ. ಬಸ್ ಆರಂಭವಾಗುತ್ತಿದ್ದಂತೆ ರಾಣೆಬೆನ್ನೂರ- ದಾವಣಗೆರೆಗೆ ನೇರವಾಗಿ ಬಸ್​ಗಳನ್ನು ಬಿಡಲಾಗಿದೆ. ರಂಜಾನ್ ಹಿನ್ನೆಲೆಯಲ್ಲಿ ಬಟ್ಟೆ ಹಾಗೂ ಇತರ ವಸ್ತುಗಳನ್ನು ಖರೀದಿಸಲು ದಾವಣಗೆರೆಯಿಂದ ಹೆಚ್ಚಿನ ಜನತೆ ಬರುತ್ತಿದ್ದು, ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಳವಾಗಿದೆ.

    ದಾವಣಗೆರೆಯಿಂದ ಬರುವ ಪ್ರಯಾಣಿಕರನ್ನು ಯಾವುದೇ ರೀತಿಯ ತಪಾಸಣೆ ಮಾಡಲಾಗುತ್ತಿಲ್ಲ. ದಾವಣಗೆರೆಯಿಂದ ಇಲ್ಲಿಗೆ ಬಂದವರು ಬಸ್ ಇಳಿದು ನೇರವಾಗಿ ಹೊರಹೋಗುತ್ತಿದ್ದಾರೆ. ಅವರ ಥರ್ಮಲ್ ಸ್ಕ್ರೀನಿಂಗ್ ಮಾಡದ ಕಾರಣ ಸ್ಥಳೀಯರಲ್ಲಿ ಆಂತಕದ ವಾತಾವರಣ ಸೃಷ್ಟಿಯಾಗಿದೆ. ಸಾರಿಗೆ ಸಂಸ್ಥೆ ಅಧಿಕಾರಿಗಳು ದಾವಣಗೆರೆಯಿಂದ ಬರುವ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್​ಗೆ ಒಳಪಡಿಸಿ, ನಿಲ್ದಾಣದಿಂದ ಹೊರ ಕಳುಹಿಸಬೇಕು. ಸೋಂಕಿನ ಲಕ್ಷಣ ಕಂಡುಬಂದವರನ್ನು ಕೂಡಲೇ ಆಸ್ಪತ್ರೆಗೆ ಕಳುಹಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂಬುದು ಪ್ರಜ್ಞಾವಂತರ ಆಶಯವಾಗಿದೆ.

    ತಾಲೂಕಿನ ವಿವಿಧ ಗ್ರಾಮ, ಜಿಲ್ಲೆಯ ಹಿರೇಕೆರೂರ, ಬ್ಯಾಡಗಿ, ಹಾವೇರಿ, ಗುತ್ತಲ ಹಾಗೂ ರಾಜ್ಯದ ವಿವಿಧ ಜಿಲ್ಲೆಗೆ ಸೇರಿ ಒಟ್ಟು 46 ಬಸ್​ಗಳನ್ನು ಪ್ರಥಮ ಹಂತದಲ್ಲಿ ಓಡಿಸಲಾಗುತ್ತಿದೆ. ಜನದಟ್ಟಣೆ ಆಧಾರದ ಮೇಲೆ ಬಸ್​ಗಳ ಸಂಖ್ಯೆ ಹೆಚ್ಚಳ ಮಾಡುತ್ತೇವೆ ಎಂದು ಸಾರಿಗೆ ಸಂಸ್ಥೆ ವ್ಯವಸ್ಥಾಪಕ ಶಿವಮೂರ್ತಿ ಎಸ್. ಅವರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸರ್ಕಾರದ ನಿಯಮ ಪಾಲಿಸುವಲ್ಲಿ ಪ್ರಯಾಣಿಕರ ಪಾತ್ರ ಮುಖ್ಯವಾಗಿದೆ. ಬಸ್ ಆರಂಭವಾಗಿ ಒಂದನೇ ದಿನ ಆಗಿದ್ದರಿಂದ ಥರ್ಮಲ್ ಸ್ಕ್ರೀನಿಂಗ್ ಸೇರಿ ಇತರ ಕ್ರಮ ಕೈಗೊಳ್ಳಲು ವಿಳಂಬವಾಗಿದೆ. ಇನ್ಮುಂದೆ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳ ಬಿಡಲಾಗುವುದು. ಮಾಸ್ಕ್ ಧರಿಸದಿದ್ದರೆ ಬಸ್ ಹತ್ತಲು ಅವಕಾಶ ನೀಡಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.
    | ಶಿವಮೂರ್ತಿ ಎಸ್. ಸಾರಿಗೆ ಸಂಸ್ಥೆ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts