More

    ತ್ಯಾಜ್ಯ ವಿಲೇವಾರಿಗೆ ನಿರ್ಲಕ್ಷ್ಯ

    ರಾಣೆಬೆನ್ನೂರ: ಇಲ್ಲಿಯ ಕೋರ್ಟ್ ಹಿಂಭಾಗದ ಎಕೆಜಿ ಕಾಲನಿ ಹಾಗೂ ದುರ್ಗಾ ವೃತ್ತದಲ್ಲಿ ನಗರಸಭೆ ಸಿಬ್ಬಂದಿ ತ್ಯಾಜ್ಯ ವಿಲೇವಾರಿಯನ್ನು ಸೂಕ್ತ ರೀತಿಯಲ್ಲಿ ಮಾಡದ ಕಾರಣ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.

    ತಾಲೂಕು ಕೋರ್ಟ್ ಕಾಂಪೌಂಡ್​ಗೆ ಹೊಂದಿಕೊಂಡ ಎಕೆಜಿ ಕಾಲನಿಯ ಮುಖ್ಯರಸ್ತೆಯಲ್ಲಿ ಕಸ ಎಸೆಯಲು ಸ್ಥಳಾವಕಾಶ ಮಾಡಲಾಗಿದೆ. ಆದರೆ, ಅಲ್ಲಿನ ತ್ಯಾಜ್ಯವನ್ನು ವಾರವಾದರೂ ವಿಲೇವಾರಿ ಮಾಡುತ್ತಿಲ್ಲ. ಹಂದಿ, ನಾಯಿಗಳು ತ್ಯಾಜ್ಯವನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದು, ಕಸ ಮುಖ್ಯರಸ್ತೆಯಲ್ಲಿ ಹರಡಿಕೊಳ್ಳುತ್ತಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಚಕ್ರಕ್ಕೆ ಪ್ಲಾಸ್ಟಿಕ್ ಹಾಳೆಗಳು ಸಿಲುಕಿ ರಸ್ತೆಯುದ್ದಕ್ಕೂ ತ್ಯಾಜ್ಯ ಹರಿದಾಡುತ್ತಿದೆ. ಇನ್ನು ದುರ್ಗಾ ವೃತ್ತದಲ್ಲಿ ಗೋಡೆಯೊಂದರ ಬದಿ ತ್ಯಾಜ್ಯ ಎಸೆಯುತ್ತಿದ್ದು, ಪ್ಲಾಸ್ಟಿಕ್ ಅನ್ನು ಅಲ್ಲೇ ಸುಡಲಾಗುತ್ತಿದೆ. ಇದರಿಂದ ವಿಪರೀತ ಕೊಳಚೆಯಾಗುತ್ತಿದ್ದು, ಹಂದಿಗಳ ವಾಸಸ್ಥಾನವಾಗಿದೆ.

    ನಗರಸಭೆ ಸ್ವಚ್ಛತಾ ಸಿಬ್ಬಂದಿ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಕೊಳಚೆ ಸ್ವಚ್ಛಗೊಳಿಸುವಂತೆ ಕೇಳಿಕೊಂಡರೂ ಕ್ಯಾರೇ ಎನ್ನುತ್ತಿಲ್ಲ. ತ್ಯಾಜ್ಯ ವಿಲೇವಾರಿಗೆ ನಾಲ್ಕೈದು ದಿನಕ್ಕೊಮ್ಮೆ ಬರುತ್ತಾರೆ. ಈ ಕುರಿತು ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆರೋಪ.

    ಮಳೆ ಬಂದಾಗ ತ್ಯಾಜ್ಯವು ಮನೆಗಳಿಗೆ ನುಗ್ಗುತ್ತದೆ. ಇದರಿಂದ ರೋಗದ ಭೀತಿ ಎದುರಾಗಿದೆ. ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ತ್ಯಾಜ್ಯ ವಿಲೇವಾರಿಗೆ ಮುಂದಾಗಬೇಕು ಎಂದು ಜನತೆ ಒತ್ತಾಯಿಸಿದ್ದಾರೆ.

    ತ್ಯಾಜ್ಯ ವಿಲೇವಾರಿ ಮಾಡದಿರುವ ಕುರಿತು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಇತ್ತ ಕಡೆ ತಲೆ ಹಾಕಿಯೂ ನೋಡುತ್ತಿಲ್ಲ. ತಿಪ್ಪೆಗಳ ದುರ್ನಾತಕ್ಕೆ ಬೇಸತ್ತು ಹೋಗಿದ್ದೇವೆ. ಮುಂದಿನ ದಿನಗಳಲ್ಲಿ ಸರಿಯಾಗಿ ಕಸ ವಿಲೇವಾರಿ ಮಾಡದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ.

    | ಅಲ್ಲಾಭಕ್ಷ, ಸ್ಥಳೀಯ ನಿವಾಸಿ

    ರಾಣೆಬೆನ್ನೂರಿನ ಎಕೆಜಿ ಕಾಲನಿ, ದುರ್ಗಾ ವೃತ್ತದಲ್ಲಿ ತ್ಯಾಜ್ಯ ವಿಲೇವಾರಿ ವಿಳಂಬ ಕುರಿತು ಪರಿಸರ ಇಂಜಿನಿಯರ್ ಅವರಿಂದ ಮಾಹಿತಿ ಪಡೆದು, ಕೂಡಲೆ ಸರಿಪಡಿಸಲು ಸೂಚಿಸಲಾಗುವುದು.

    | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts