More

    ತೆಂಗು ಮಾರಲಾಗದೆ ರೈತರ ಪರದಾಟ

    ರಾಜೇಂದ್ರ ಶಿಂಗನಮನೆ ಶಿರಸಿ

    ಕೋವಿಡ್-19 ವೈರಸ್ ಕಾರಣಕ್ಕೆ ಬಾಗಿಲು ಮುಚ್ಚಿರುವ ದೇವಾಲಯಗಳು ಹಾಗೂ ಪಾರ್ಸೆಲ್ ವ್ಯವಸ್ಥೆಗೆ ಮಾತ್ರ ಸೀಮಿತವಾಗಿರುವ ಹೋಟೆಲ್ ಉದ್ಯಮದಿಂದಾಗಿ ತೆಂಗು ಬೆಳೆಗಾರರು ಕಂಗಾಲಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಾಜು 25 ಸಾವಿರ ಕೃಷಿಕರು 5907 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಿದ್ದಾರೆ. ಕರಾವಳಿ ತಾಲೂಕುಗಳಾದ ಅಂಕೋಲಾ, ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಶೇ. 65ರಷ್ಟು ತೆಂಗು ಪ್ರದೇಶವಿದ್ದರೆ, ಘಟ್ಟದ ಮೇಲಿನ 6 ತಾಲೂಕುಗಳೆಲ್ಲ ಸೇರಿ ಶೇ. 35ರಷ್ಟು ತೆಂಗು ಬೆಳೆಯಿದೆ. ಜಿಲ್ಲೆ ವ್ಯಾಪ್ತಿಯಲ್ಲಿ 44 ಸಾವಿರ ಟನ್ ತೆಂಗು ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಶೇ. 50ರಷ್ಟು ಉತ್ಪನ್ನ ದೇವಾಲಯ, ಧಾರ್ವಿುಕ ಕಾರ್ಯಕ್ರಮ, ಹೋಟೆಲ್​ಗೆ ಬಳಕೆಯಾಗುತ್ತದೆ. ಶೇ. 15ರಿಂದ 20ರಷ್ಟು ಎಳನೀರಿಗೆ ಬಳಸಲಾಗುತ್ತದೆ. ಆದರೆ, ಲಾಕ್​ಡೌನ್ ಆದಾಗಿನಿಂದ ಈವರೆಗೆ ತೆಂಗಿನ ಬೇಡಿಕೆ ತೀವ್ರ ಕುಸಿದಿದ್ದು, ಮನೆ ಬಳಕೆಗೆ ಮಾತ್ರ ಸೀಮಿತವಾಗುತ್ತಿದೆ. ಇದರಿಂದಾಗಿ, ತೆಂಗು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗದೆ, ರೈತರ ಆದಾಯಕ್ಕೆ ತೀವ್ರ ಹೊಡೆತ ಬಿದ್ದಿದೆ.

    ಮಾರುಕಟ್ಟೆಯೇ ದೊಡ್ಡ ತಲೆನೋವು: ಕರಾವಳಿ ತಾಲೂಕುಗಳಲ್ಲಿ ಪ್ರತಿ ಮರಕ್ಕೆ 200ರಿಂದ 230 ಕಾಯಿಯಂತೆ 1 ಹೆಕ್ಟೇರ್​ಗೆ 20 ಸಾವಿರ ಕಾಯಿ ಇಳುವರಿ ಲಭ್ಯವಿದೆ. ಅದೇ ಘಟ್ಟದ ಮೇಲಿನ ತಾಲೂಕುಗಳಲ್ಲಿ ಈ ಪ್ರಮಾಣ ಪ್ರತಿ ಮರಕ್ಕೆ 140 ಕಾಯಿಗೆ ಇಳಿಕೆಯಾಗಿ ಹೆಕ್ಟೇರ್ ಒಂದಕ್ಕೆ 15 ಸಾವಿರ ಕಾಯಿ ಫಸಲು ಸಿಗುತ್ತಿದೆ. ಬಹುತೇಕ ಬೆಳೆಗಾರರು ಸ್ವಂತ ಖರ್ಚಿಗೆ ಬೇಕಾದ ಕಾಯಿ, ಅಡುಗೆಗೆ ಬೇಕಾದ ಎಣ್ಣೆಗೆ ಬಳಸುವ ಕಾಯಿ ಸಂಗ್ರಹಿಸಿ ಹೆಚ್ಚುವರಿ ಕಾಯಿಯನ್ನು ವ್ಯಾಪಾರಿಗಳು, ಸಂಘ- ಸಂಸ್ಥೆಗಳಿಗೆ ಮಾರುತ್ತಾರೆ. ಆದರೆ, ಈ ಬಾರಿ ಕೋವಿಡ್-19 ಕಾರಣಕ್ಕೆ ಮಾರುಕಟ್ಟೆ ಕುಸಿತ ಕಂಡ ಕಾರಣ ತೆಂಗು ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಅತ್ತ ತೆಂಗಿನಕಾಯಿಯನ್ನು ಕೊಯ್ಲು ಮಾಡದೆ ಮರದಲ್ಲಿ ಬಿಡುವಂತಿಲ್ಲ, ಇತ್ತ ಕೊಯ್ಲು ಮಾಡಿದರೆ ಮಾರುಕಟ್ಟೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

    ತಾಪಕ್ಕೆ ಒಡೆಯುವ ತೆಂಗು: ಲಾಕ್​ಡೌನ್​ನಿಂದ ಬೇಡಿಕೆ ಕಳೆದುಕೊಂಡ ತೆಂಗನ್ನು ಕೊಯ್ಲು ಮಾಡಿ ಮನೆಯಲ್ಲಿ ಸಂಗ್ರಹಿಸಿದರೆ ಬೇಸಿಗೆಯ ತಾಪಕ್ಕೆ ಶೇ. 20ರಷ್ಟು ತೆಂಗಿನ ಕಾಯಿಗಳು ಬರಡಾಗುತ್ತಿವೆ. ಜತೆಗೆ, ಮಾರುವ ಉದ್ದೇಶದಿಂದ ಸುಲಿದರೆ ಅದರಲ್ಲಿ ಶೇ. 20ರಷ್ಟು ಕಾಯಿಗಳು ಒಡೆಯುತ್ತಿವೆ. ಈ ಕಾಯಿಗಳನ್ನು ಮನೆ ಬಳಕೆಗೆ ಬಳಸಿಯೂ ಹೆಚ್ಚಾಗುತ್ತಿದೆ. ಇಂಥ ಸಂದಿಗ್ಧತೆಯಲ್ಲಿ ಕೊಯ್ಲು ಮಾಡಿದ ಕಾಯಿಗಳನ್ನು ಖರೀದಿಸಲು ವ್ಯಾಪಾರಿಗಳೇ ಹಿಂದೇಟು ಹಾಕುತ್ತಿದ್ದಾರೆ.

    ಹೆಚ್ಚು ತೆಂಗಿನಕಾಯಿ ಬೇಡಿಕೆ ಇರುವ ಕ್ಷೇತ್ರವಾದ ದೇವಾಲಯಗಳು ಬಾಗಿಲು ಮುಚ್ಚಿವೆ. ಧಾರ್ವಿುಕ ಕಾರ್ಯಕ್ರಮಗಳು ತೀರಾ ವಿರಳವಾಗಿವೆ. ಹೋಟೆಲ್ ಉದ್ಯಮವು ಗ್ರಾಹಕರಿಲ್ಲದೆ ನೆಲಕಚ್ಚಿದೆ. ಇಂತಹ ಸಂದರ್ಭದಲ್ಲಿ ಕಾಯಿಗೆ ಬೇಡಿಕೆ ತಗ್ಗಿದೆ. ಬೆಳೆಗಾರರಿಂದ ವ್ಯಾಪಾರಿಗಳು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ಸಂಘ, ಸಂಸ್ಥೆಗಳು ಖರೀದಿಸಿದರೂ ಹೆಚ್ಚಿನ ಪ್ರಮಾಣದ ಕಾಯಿ ಹಾಗೆಯೇ ಉಳಿಯುತ್ತಿದೆ. ಇದು ಪ್ರಮುಖ ಬೆಳೆಯ ಜತೆ, ಉಪಬೆಳೆಯಾಗಿ ತೆಂಗು ಬೆಳೆಯುತ್ತಿರುವವರಿಗೂ ನಷ್ಟದ ಕಾಲವಾಗಿದೆ. | ಗಣಪತಿ ಹೆಗಡೆ ತೆಂಗು ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts