More

    ತೆಂಗು ಬೆಲೆ ಏರಿಕೆ ಗುಂಗು…

    ರಾಜೇಂದ್ರ ಶಿಂಗನಮನೆ ಶಿರಸಿ

    ಇಳುವರಿ ಕುಂಠಿತಗೊಂಡ ಪರಿಣಾಮ ತೆಂಗಿನಕಾಯಿಗೆ ಭಾರಿ ಬೇಡಿಕೆ ಬಂದಿದ್ದು, ದರವೂ ಏರುಗತಿಯಲ್ಲಿ ಸಾಗಿದೆ. ದರ ಹೆಚ್ಚಳವು ಬೆಳೆಗಾರರಿಗೆ ವರವಾದರೆ ಗ್ರಾಹಕರಿಗೆ ಬರೆಯಾಗಿ ಪರಿಣಮಿಸಿದೆ.

    ತಿಂಗಳಿಂದೀಚೆಗೆ ಮಾರುಕಟ್ಟೆಯಲ್ಲಿ ಕೆಜಿ ತೆಂಗಿನಕಾಯಿಗೆ ಅಂದಾಜು 10 ರೂ. ಏರಿಕೆಯಾಗಿದೆ. ಸದ್ಯ ಪ್ರತಿ ಕೆಜಿ 46ರಿಂದ 50ರೂಪಾಯಿಗೆ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಬರುತ್ತಿರುವ ತೆಂಗಿನಕಾಯಿ ಪ್ರಮಾಣದಲ್ಲಿ ಇಳಿಕೆಯಾಗಿರುವುದು ದರ ಏರಿಕೆಗೆ ಕಾರಣ ಎನ್ನಲಾಗಿದೆ.

    ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ತೆಂಗಿನಹೂವು ಒಣಗಿ ಉದುರುತ್ತಿರುವುದು ಒಂದೆಡೆಯಾದರೆ ಎಳನೀರಿಗೆ ಕೆಂಜಣಿಲು ಕಾಟ ಇನ್ನೊಂದೆಡೆ. ತೆಂಗು ಬೆಳೆಗಾರರನ್ನು ಕಾಡುತ್ತಿರುವ ಕೆಂಜಣಿಲುಗಳು (ಕೆಂಪು ಅಳಿಲು) ಎಳನೀರು ಹಂತದಲ್ಲಿನ ಕಾಯಿಗಳನ್ನು ಹಾಳು ಮಾಡುತ್ತಿವೆ. ಇವುಗಳ ಜತೆ, ಜೇನು ಸಂತತಿ ಇಳಿಕೆಯಾದ ಕಾರಣ ಪರಾಗಸ್ಪರ್ಷ ಪ್ರಕ್ರಿಯೆ ಸರಿಯಾಗಿ ಆಗದಿರುವುದು ಕೂಡ ತೆಂಗಿನ ಇಳುವರಿ ಕುಂಠಿತಕ್ಕೆ ಕಾರಣವಾಗಿದೆ. ಬೇಡಿಕೆಯಷ್ಟು ಉತ್ಪಾದನೆ ಇಲ್ಲದಿರುವುದು ದರ ಹೆಚ್ಚಲು ಕಾರಣವಾಗಿದೆ ಎಂಬುದು ತೆಂಗು ಬೆಳೆಗಾರರ ಮಾತಾಗಿದೆ.

    ಶೇ.40ರಷ್ಟು ಇಳಿಕೆ: ವಿವಿಧ ಕಾರಣಗಳಿಂದ ಮಾರುಕಟ್ಟೆಗೆ ಬರುತ್ತಿರುವ ತೆಂಗಿನಕಾಯಿ ಪ್ರಮಾಣದಲ್ಲಿ ಅಂದಾಜು ಶೇ.35ರಿಂದ 40ರಷ್ಟು ಕುಸಿದಿದೆ. ಉತ್ತಮ ದರವಿದ್ದರೂ ಬೆಳೆ ಇಲ್ಲದಂತಾಗಿದೆ. ಕಳೆದ ವರ್ಷ ಪ್ರತಿ ತಿಂಗಳು ಅಂದಾಜು 60 ಟನ್ ಖರೀದಿಯಾಗುತ್ತಿತ್ತು. ಆದರೆ, ಈ ಬಾರಿ 3 ತಿಂಗಳ ಅವಧಿಗೆ 60 ಟನ್ ಖರೀದಿಸಲೂ ಆಗುತ್ತಿಲ್ಲ ಎನ್ನುತ್ತಾರೆ ತೆಂಗುಮಂಡಿ ಮಾಲೀಕ ರಮೇಶ ನಾಯ್ಕ.

    ಗ್ರಾಹಕ ಕಂಗಾಲು: ಕರೊನಾದಿಂದ ಸರಿಯಾದ ಕೆಲಸವಿಲ್ಲದೆ, ಲಾಕ್​ಡೌನ್​ನಿಂದ ಸಮರ್ಪಕ ವ್ಯವಹಾರವಿಲ್ಲದೆ ಕಂಗಾಲಾಗಿರುವ ಜನರು ಈಗ ಏರುತ್ತಿರುವ ತೆಂಗಿನಕಾಯಿ ದರದಿಂದ ಕಂಗಾಲಾಗಿದ್ದಾರೆ. ಕಳೆದ ವರ್ಷ ಮಾರ್ಚ್ ಆರಂಭಕ್ಕೆ ಖರೀದಿ ದರ 28 ರೂಪಾಯಿ, ಮಾರಾಟ ದರ 32 ರೂಪಾಯಿ ಇದ್ದುದು, ಈ ಬಾರಿ ಇದೇ ಸಮಯಕ್ಕೆ ಖರೀದಿ ದರವೇ 42 ರೂಪಾಯಿ ಮುಟ್ಟಿದೆ. ಮಾರಾಟ ದರ ಕನಿಷ್ಠ 46 ರೂಪಾಯಿ ಇದ್ದು, ಸಂತೆ, ಮಾರುಕಟ್ಟೆಯಲ್ಲಿ ಕೆಜಿ ಕಾಯಿಗೆ 50 ರೂಪಾಯಿವರೆಗೂ ಮಾರಾಟ ಮಾಡಲಾಗುತ್ತಿದೆ. ಇದು ಜನಸಾಮಾನ್ಯರ ಜೇಬಿಗೆ ಕತ್ತರಿಯಾಗಿದೆ ಎಂಬುದು ಗ್ರಾಹಕರ ಅಭಿಪ್ರಾಯ.

    ಕೊಬ್ಬರಿ ಬೆಲೆಯೂ ಜಾಸ್ತಿ: ತೆಂಗಿನ ಇಳುವರಿಯಲ್ಲಿ ಇಳಿಕೆಯಾಗಿರುವುದು ಕೊಬ್ಬರಿ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. ನಿರೀಕ್ಷಿತ ಕೊಬ್ಬರಿ ಮಾರುಕಟ್ಟೆಗೆ ಬಾರದ ಕಾರಣ ದರ ಏರಿಕೆಯಾಗಿದೆ. ಕೆಜಿ ಕೊಬ್ಬರಿಗೆ ಗರಿಷ್ಠ 37ರೂಪಾಯಿ ದಾಖಲಾಗಿದೆ. ಇದರಿಂದಾಗಿ ಕೊಬ್ಬರಿ ಎಣ್ಣೆ ದರದಲ್ಲೂ ಸಾಕಷ್ಟು ಏರಿಕೆಯಾಗುತ್ತಿದೆ.

    ಹಲವು ಕಾರಣಗಳಿಂದ ತೆಂಗಿನ ಇಳುವರಿ ಕುಸಿದಿದೆ. ಹವಾಮಾನ ವೈಪರೀತ್ಯದಿಂದಾಗಿ ಹೂವು ಕಚ್ಚುವುದು, ಹೂವಿಂದ ಕಾಯಿ ಕಚ್ಚುವುದು ಕಡಿಮೆಯಾಗುತ್ತಿದೆ. ಈ ಕಾರಣಕ್ಕೆ ಪ್ರತಿ ತೆಂಗಿನ ಮರದಲ್ಲಿ ವಾರ್ಷಿಕ ಸರಾಸರಿ 45ರಿಂದ 50 ತೆಂಗಿನಕಾಯಿ ಕಡಿಮೆಯಾದರೆ ಕೆಂಜಣಿಲು ಹಾವಳಿಯಿಂದ ಅಂದಾಜು 10ರಿಂದ 15 ಕಾಯಿಗಳು ಹಾಳಾಗುತ್ತಿವೆ. ಇದು ಸರಾಸರಿ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. – ರವಿ ಹೆಗಡೆ ಯಡಳ್ಳಿ, ತೆಂಗು ಬೆಳೆಗಾರ

    ತೆಂಗಿನಕಾಯಿ ಖರೀದಿಯಲ್ಲಿ ಮುಂಚೂಣಿಯಲ್ಲಿರುವ ಕದಂಬ ಸಂಸ್ಥೆಯು ಕಳೆದ ವರ್ಷ 11 ಸಾವಿರ ಕ್ವಿಂಟಾಲ್ ಖರೀದಿಸಿತ್ತು. ಈ ವರ್ಷ ಗರಿಷ್ಠ 7 ಸಾವಿರ ಕ್ವಿಂಟಾಲ್ ಖರೀದಿಸುವ ಸಾಧ್ಯತೆಯಿದೆ. – ವಿಶ್ವೇಶ್ವರ ಭಟ್ಟ, ಕದಂಬ ಮಾರ್ಕೆಟಿಂಗ್ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts