More

    ತೂಬಗೆರೆ ನಾಡಕಚೇರಿಯಲ್ಲಿ ವಿದ್ಯುತ್ ಕಣ್ಣಾಮಚ್ಚಾಲೆ, ಸಾರ್ವಜನಿಕ ಸೇವೆ ಪಡೆಯಲು ಪರದಾಟ, ಅಧಿಕಾರಿಗಳ ಜಾಣಕುರುಡು

    ಶಿವು ತೂಬಗೆರೆ
    ಸೌಲಭ್ಯ ಪಡೆಯಲು ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರವೇ ಮನೆಬಾಗಿಲಿಗೆ ಸೌಲಭ್ಯ ತಲುಪಿಸುವ ಉದ್ದೇಶದಿಂದ ಡಿಸಿ ನಡಿಗೆ ಹಳ್ಳಿಯ ಕಡೆಗೆ ಎಂಬ ಮಹಾತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಿದೆ, ಆದರೆ ತೂಬಗೆರೆ ನಾಡಕಚೇರಿಯಲ್ಲಿ ಸೌಲಭ್ಯ ಪಡೆಯಲು ಜನರೇ ಕಚೇರಿ ಬಾಗಿಲಿಗೆ ಬಂದರೂ ಬರಿಕೈಲಿ ಹಿಂತಿರುಗುವ ಪರಿಸ್ಥಿತಿ ಎದುರಾಗಿದೆ.

    ಹೌದು. ತೂಬಗೆರೆ ಹೋಬಳಿಯ ನಾಡಕಚೇರಿಯಲ್ಲಿ ಈ ಹಿಂದಿನಿಂದಲೂ ವಿದ್ಯುತ್ ಸಮಸ್ಯೆ ಕಾಡುತ್ತಿದೆ, ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಆದಾಯ, ಜಾತಿ ಪ್ರಮಾಣ ಪತ್ರ, ವಂಶವೃಕ್ಷ ಸೇರಿ ಇನ್ನಿತರ ದಾಖಲೆ ಪಡೆಯಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇದೆ, ಹೊಲಮನೆಗಳ ಕೆಲಸ ಬಿಟ್ಟು ನಾಡಕಚೇರಿ ಎದುರು ಕಾಯುವುದೇ ಜನರ ದಿನನಿತ್ಯದ ಕೆಲಸವಾಗಿದೆ. ಕೆಲವು ದಿನಗಳಲ್ಲಿ ಇಡೀ ದಿನ ಕಾದರೂ ವಿದ್ಯುತ್ ಇಲ್ಲದೆ ಜನರು ಬರಿಗೈಲಿ ಹಿಂದಿರುತ್ತಿರುವುದು ಸಾಮಾನ್ಯವಾಗಿದೆ.

    2 ವರ್ಷದ ಹಿಂದೆಯೇ ಕೆಟ್ಟ ಯುಪಿಎಸ್: ನಾಲ್ಕು ವರ್ಷದ ಹಿಂದೆ ನಾಡಕಚೇರಿಗೆ ಯುಪಿಎಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಎರಡು ವರ್ಷದ ಹಿಂದೆಯೇ ಕೆಟ್ಟಿದೆ. ಇದುವರೆಗೆ ಅದನ್ನು ದುರಸ್ತಿ ಮಾಡಿಲ್ಲ. ಇದರಿಂದ ವಿದ್ಯುತ್ ಇದ್ದರಷ್ಟೆ ಕೆಲಸ ಇಲ್ಲವಾದರೆ ವಿದ್ಯುತ್ ಬರುವವರೆಗೆ ರೈತರು ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡು ಕೂರುವುದು ಅನಿವಾರ್ಯವಾಗಿದೆ.

    21 ದಿನದಲ್ಲಿ ಬರಲ್ಲ: ಇನ್ನೇನು ಕೆಲವೇ ದಿನಗಳಲ್ಲಿ ಶಾಲೆಗಳು ಆರಂಭವಾಗಲಿವೆ. ಮಕ್ಕಳನ್ನು ಶಾಲೆಗೆ ದಾಖಲಿಸಲು ಮುಖ್ಯವಾಗಿ ಜಾತಿ ಹಾಗೂ ಆದಾಯ ಪ್ರಮಾಣಪತ್ರ ಅತ್ಯವಶ್ಯಕವಾಗಿದೆ. ಆದರೆ ಈ ನಾಡಕಚೇರಿಯಲ್ಲಿ ವಿದ್ಯುತ್ ಸಮಸ್ಯೆ ನೆಪದಲ್ಲಿ ಇದ್ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ. 21 ದಿನದೊಳಗೆ ಯಾವುದೇ ದಾಖಲೆಯಾದರೂ ಲಾನುಭವಿಗಳಿಗೆ ತಲುಪಬೇಕೆಂಬ ನಿಯಮವಿದೆ. ಆದರೆ ಇಲ್ಲಿ ಮೂರ‌್ನಾಲ್ಕು ತಿಂಗಳಾದರೂ ದಾಖಲೆಗಳು ತಲುಪುವುದಿಲ್ಲ. ಇಲ್ಲಿನ ಸಿಬ್ಬಂದಿ ಯಾವಾಗಲು ವಿದ್ಯುತ್ ಕೊರತೆಯನ್ನೇ ಬೊಟ್ಟು ಮಾಡಿ ತೋರಿಸುತ್ತಾರೆ ಎಂಬುದು ಜನರ ಆರೋಪವಾಗಿದೆ.

    96 ಹಳ್ಳಿ ಜನರ ಪರದಾಟ: ತೂಬಗೆರೆ ಹೋಬಳಿ ಕಂದಾಯ ಇಲಾಖೆಯಲ್ಲಿ 12 ಕಂದಾಯ ವೃತ್ತಗಳಿದ್ದು, 96 ಹಳ್ಳಿಯ ಜನರು ಇದೇ ಕಂದಾಯ ಇಲಾಖೆಗೆ ಬರಬೇಕು. ಇಷ್ಟೂ ಹಳ್ಳಿಗಳಿಗೆ ಕೇವಲ ಐದು ಗ್ರಾಮಲೆಕ್ಕಾಧಿಕಾರಿಗಳನ್ನು ನೇಮಿಸಲಾಗಿದೆ. ಓರ್ವ ಗ್ರಾಮ ಲೆಕ್ಕಾಧಿಕಾರಿಗೆ ಮೂರರಿಂದ ನಾಲ್ಕು ವೃತ್ತಗಳ ಜವಾಬ್ದಾರಿ ವಹಿಸಲಾಗಿದೆ. ಇದರಿಂದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಒತ್ತಡ ಹೆಚ್ಚಾಗಿದ್ದು, ಸಮಯಕ್ಕೆ ಸರಿಯಾಗಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಸಾರ್ವಜನಿಕರು ಒಂದು ವೃತ್ತದಿಂದ ಮತ್ತೊಂದು ವೃತ್ತಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಸಿಬ್ಬಂದಿ ಕೊರತೆ: ಇನ್ನು ನಾಡಕಚೇರಿಯಲ್ಲಿ 1 ವರ್ಷದಿಂದ ಕೇಸ್ ವರ್ಕರ್ ಹುದ್ದೆ ಖಾಲಿಯಾಗಿದೆ. ಇದ್ದ ಒಬ್ಬ ಡಿ ಗ್ರೂಪ್ ನೌಕರ ಮೂರು ವರ್ಷದ ಹಿಂದೆ ವರ್ಗಾವಣೆಯಾಗಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ಮತ್ಯಾರನ್ನೂ ನಿಯೋಜಿಸಿಲ್ಲ, ಇದರಿಂದ ಸಾರ್ವಜನಿಕ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಂತೂ ರೈತರಿಗೆ ದುಬಾರಿಯಾಗಿ ಪರಿಣಮಿಸಿದೆ.

    ತೂಬಗೆರೆ ನಾಡಕಚೇರಿಯಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದೆ. ಇಲ್ಲಿನ ಯುಪಿಎಸ್ ರಿಪೇರಿ ಮಾಡಿಸುವ ಅಥವಾ ಬೇರೆ ಹೊಸ ಯುಪಿಎಸ್ ನೀಡುವ ಸಂಬಂಧ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಗಿದೆ, ಶೀಘ್ರದಲ್ಲೇ ಯುಪಿಎಸ್ ವ್ಯವಸ್ಥೆ ಕಲ್ಪಿಸಲಾಗುವುದು.
    ವೆಂಕಟೇಶ್‌ಮೂರ್ತಿ
    ಉಪತಹಸೀಲ್ದಾರ್

    ಶೀಘ್ರವೇ ಶಾಲೆಗಳು ಆರಂಭವಾಗಲಿವೆ. ಮಕ್ಕಳಿಗೆ ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ವಂಶವೃಕ್ಷ ಪಡೆಯಲು ನಾಡಕಚೇರಿಗೆ ಬಂದರೆ ವಿದ್ಯುತ್ ಇಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ, ಎರಡ್ಮೂರು ದಿನದಿಂದ ಕಚೇರಿಗೆ ಬಂದು ಬರಿಗೈಲಿ ವಾಪಾಸ್ ಆಗುವಂತಾಗಿದೆ. ಕನಿಷ್ಠ ಸೌಲಭ್ಯವಿಲ್ಲದೆ ಸರ್ಕಾರಿ ಕಚೇರಿಯನ್ನು ತೆರೆದಿರುವುದಾದರೂ ಏಕೆ ಎನ್ನುವುದೇ ತಿಳಿಯುತ್ತಿಲ್ಲ.
    ಸಂತೋಷ್
    ಗೊಲ್ಲಳ್ಳಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts