More

    ತುಳುಭವನ ಕಚೇರಿ ನಿರ್ಮಾಣ ಪೂರ್ಣ

    ಪುರುಷೋತ್ತಮ ಭಟ್ ಮಂಜೇಶ್ವರ
    ತುಳುವರ ಬಹುಬೇಡಿಕೆಯ ಕೇರಳ ರಾಜ್ಯ ತುಳು ಅಕಾಡೆಮಿಯ ತುಳು ಭವನದ ಪ್ರಥಮ ಹಂತದ ಕಚೇರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಹಲವು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ತುಳು ಅಕಾಡೆಮಿ ಭವನ ನಿರ್ಮಾಣ ಕಾರ್ಯ ಕಳೆದ ಒಂದು ವರ್ಷದಿಂದ ಭರದಿಂದ ಸಾಗಿತ್ತು. ಪ್ರಥಮ ಹಂತದಲ್ಲಿ (ನೆಲಅಂತಸ್ತು)ಒಟ್ಟು 25 ಲಕ್ಷ ರೂ. ವೆಚ್ಚದಲ್ಲಿ ಅಕಾಡೆಮಿಯ ಕಚೇರಿ, ಅಧ್ಯಕ್ಷ, ಕಾರ್ಯದರ್ಶಿಯ ಕೊಠಡಿ, ಗ್ರಂಥಾಲಯ, ಸಭಾ ಕೊಠಡಿ, ಪ್ರತ್ಯೇಕ ಶೌಚಗೃಹವಿದೆ. ಅತಿಥಿಗಳಿಗೆ ತಂಗಲು ಪ್ರತ್ಯೇಕ ಕೊಠಡಿಗಳಿವೆ.
    ಮೊದಲ ಅಂತಸ್ತಿನಲ್ಲಿ ಸಭಾಂಗಣ, ತುಳು ಜನಪದ ವಸ್ತುಗಳ ಪ್ರದರ್ಶನಕ್ಕೆ ಯೋಗ್ಯವಾಗುವಂತೆ ಮ್ಯೂಸಿಯಂ ನಿರ್ಮಾಣ ಮಾಡಲಾಗುವುದು. ಇದಕ್ಕೆ ಮಂಜೇಶ್ವರ ಶಾಸಕರಾಗಿದ್ದ ದಿ.ಪಿ.ಬಿ.ಅಬ್ದುಲ್ ರಜಾಕ್‌ರವರ ಶಾಸಕ ನಿಧಿಯಿಂದ ಮಂಜೂರುಗೊಂಡ 45 ಲಕ್ಷ ರೂ. ಅನುದಾನವನ್ನು ಸೂಕ್ತ ರೀತಿಯಲ್ಲಿ ವಿನಿಯೋಗಿಸಲಾಗುವುದು ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ.

    ಕಾರ್ಯಚಟುವಟಿಕೆ ಚುರುಕು: ತುಳು ಜಾನಪದ, ಸಂಸ್ಕೃತಿ, ಕಲೆ, ಭಾಷೆ, ಸಾಹಿತ್ಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದ್ದು. ಅಕಾಡೆಮಿ ಕಟ್ಟಡ ನಿರ್ಮಾಣದಿಂದ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾರ್ಯ ಚಟುವಟಿಕೆಗಳಿಗೆ ಹೊಸ ಹುರುಪು ಸಿಕ್ಕಿದೆ. ಇತ್ತೀಚೆಗೆ ಅಕಾಡೆಮಿ ಸಾರಥ್ಯದಲ್ಲಿ ತುಳು ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಎರಡು ದಿನಗಳ ವಿಚಾರ ಸಂಕಿರಣವನ್ನು ಕಾಸರಗೋಡಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಂಜೇಶ್ವರ ತಾಲೂಕು ಹೊಸಂಗಡಿ ಸಮೀಪವಿರುವ ದುರ್ಗಿಪಳ್ಳದ ತುಳು ಭವನ ಕಚೇರಿಯಲ್ಲಿಯೇ ಮುಂದಿನ ಎಲ್ಲ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.

    ರಂಗ ಮಂದಿರ ಯೋಜನೆ: ಇದರ ಜತೆಗೆ ಸುಸಜ್ಜಿತ ಸಾಂಸ್ಕೃತಿಕ ರಂಗಮಂದಿರ ನಿರ್ಮಾಣ ಯೋಜನೆಯ ರೂಪುರೇಷೆ ಸಿದ್ಧ್ದಪಡಿಸಲಾಗುತ್ತಿದೆ. ರಂಗ ಮಂದಿರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ, ತುಳುರಂಗಭೂಮಿ, ವಿವಿಧ ಜಾನಪದ ಪ್ರಕಾರಗಳು, ಪಾಡ್ದನ ತತ್ಸಂಬಂಧಿ ಸಂಶೋಧನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ವಾರಕ್ಕೊಂದು ಬಾರಿ ಸ್ಥಳೀಯರಿಗೆ, ಆಸಕ್ತರಿಗೆ ತುಳು ಸಿನಿಮಾ ವೀಕ್ಷಣೆ, ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಅವಕಾಶ ಕಲಿಸುವ ಯೋಜನೆ ಇದೆ.

    ವಿದ್ಯಾರ್ಥಿ ಸಮೂಹದ ಸಂಶೋಧನೆಗೆ ಅನುಕೂಲವಾಗುವಂತೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯದ ತಾಣವಾಗಿ ತುಳುಭವನ ಬೆಳೆಸಲಾಗುವುದು. ಕಚೇರಿ ಕೆಲಸ ಕಾರ್ಯಗಳಿಗೆ ಅಗತ್ಯವಾದ ಸಿಬ್ಬಂದಿ ನೇಮಕವನ್ನು ಕೇರಳ ರಾಜ್ಯ ಸರ್ಕಾರ ಮಾಡಬೇಕಿದೆ. ಫೆಬ್ರವರಿ ತಿಂಗಳಲ್ಲಿ ತುಳು ಭವನದ ಉದ್ಘಾಟನೆ ನಡೆಸುವ ಯೋಚನೆ ಇದೆ.
    -ಉಮೇಶ್ ಎಂ.ಸಾಲಿಯಾನ, ಕೇರಳ ತುಳು ಅಕಾಡೆಮಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts