More

    ತುರುವೇಕೆರೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

    ತುರುವೇಕೆರೆ: ಕೊಬ್ಬರಿಗೆ 25 ಸಾವಿರ ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ವಿವಿಧ ಸಂಘಟನೆಗಳು ಗುರುವಾರ ಕರೆ ನೀಡಿದ್ದ ತುರುವೇಕೆರೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

    ಬೆಳಗ್ಗೆ 6 ಗಂಟೆಯಿಂದಲೇ ಪೆಟ್ರೋಲ್ ಬಂಕ್, ಹಾಲಿನ ಅಂಗಡಿ, ಮೆಡಿಕಲ್ಸ್, ಬ್ಯಾಂಕ್, ಶಾಲಾ-ಕಾಲೇಜುಗಳು, ಆಸ್ಪತ್ರೆ ಮತ್ತು ಸರ್ಕಾರಿ ಕಚೇರಿ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳನ್ನು ಅಂಗಡಿ ಮಾಲೀಕರು, ವರ್ತಕರು ಸ್ವಯಂಪ್ರೇರಿತರಾಗಿ ಮುಚ್ಚಿ ಬಂದ್‌ಗೆ ಸಾಥ್ ನೀಡಿದರು. ಸರ್ಕಾರಿ ಬಸ್‌ಗಳು, ಆಟೋ, ಬೈಕ್ ಹಾಗೂ ಇನ್ನಿತರ ವಾಹನಗಳ ಸಂಚಾರ ಸಾಮಾನ್ಯವಾಗಿತ್ತು. ಸರ್ಕಾರಿ ಕಚೇರಿಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.

    ರೈತ ಸಂಘದ ಹಾಗೂ ವಿವಿಧ ಸಂಘಟನೆಯ ಮುಖಂಡರು ಪಟ್ಟಣದ ಎಪಿಎಂಸಿ ಕಚೇರಿಯಿಂದ ಮೆರವಣಿಗೆ ಹೊರಟು ಬಾಣಸಂದ್ರ ಸರ್ಕಲ್​​​ನಲ್ಲಿ ಮಾನವ ಸರಪಳಿ ನಿರ್ಮಿಸಿ ಕೊಬ್ಬರಿಗೆ 25 ಸಾವಿರ ರೂ. ಬೆಂಬಲ ಬೆಲೆ ನಿಗದಿ ಪಡಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ನಂತರ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಅವರಿಗೆ ರೈತರು ಮನವಿ ಸಲ್ಲಿಸಿದರು. ಸಂಜೆ 6ಗಂಟೆಯವರೆಗೆ ಬಂದ್ ವಾತಾವರಣವಿತ್ತು.

    ಜಿಲ್ಲೆಯಲ್ಲೇ ಅತಿ ಹೆಚ್ಚು ತೆಂಗು ಬೆಳೆಯುವ ರೈತರಿದ್ದಾರೆ, ಕೊಬ್ಬರಿ ಬೆಲೆ ತೀವ್ರ ಕುಸಿತ ಕಂಡಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ವೈಜ್ಞಾನಿಕವಾಗಿ 25 ಸಾವಿರ ರೂಪಾಯಿ ನಿಗದಿ ಮಾಡಿ ಎಂದು ಮುಖಂಡ ಶಾಂತಕುಮಾರ್ ಆಗ್ರಹಿಸಿದರು.

    ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್, ಗೌರವಾಧ್ಯಕ್ಷ ಆರಾಧ್ಯ, ತಾಲೂಕು ಅಧ್ಯಕ್ಷ ನಾಗೇಂದ್ರ, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ, ಕಸಾಪ ಸಂಘದ ಅಧ್ಯಕ್ಷ ಡಿ.ಪಿ.ರಾಜು, ವರ್ತಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಆಟೋಚಾಲಕರ ಸಂಘದ ಅಧ್ಯಕ್ಷ ಗಂಗಣ್ಣ, ಸಿಐಟಿಯು ಕಾರ್ಯದರ್ಶಿ ಸತೀಶ್, ಜನಪರ ವೇದಿಕೆ ಅಧ್ಯಕ್ಷ ವೆಂಕಟೇಶ್, ಪ್ರಗತಿಪರ ರೈತ ಅರಳೀಕೆರೆ ತಿಮ್ಮಪ್ಪ ಇದ್ದರು.

    ರೈತರನ್ನು ಕಡೆಗಣಿಸುವ ಸರ್ಕಾರಗಳು: ರಾಜ್ಯದ ಕೃಷಿ ಬೆಲೆ ಆಯೋಗ ಕೊಬ್ಬರಿ ಬೆಳೆೆಗೆ 17,800 ರೂಪಾಯಿ ನಿಗದಿ ಮಾಡಲಾಗಿದೆ ಎಂದು ವರದಿ ನೀಡಿದೆ. ಆದರೆ ರಾಜ್ಯ ಸರ್ಕಾರ ಕೇವಲ 1,250 ರೂಪಾಯಿ ಬೆಂಬಲ ಬೆಲೆ ಘೋಷಿಸಿದ್ದು ಯಾವ ಮಾನದಂಡದಲ್ಲಿ ಎಂಬುದು ಅರ್ಥವಾಗುತ್ತಿಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನ ಹೊರಹಾಕಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರನ್ನು ಕಡೆಗಣಿಸುತ್ತಿದ್ದು, ಕೂಡಲೇ ಕ್ವಿಂಟಾಲ್ ಕೊಬ್ಬರಿಗೆ ರಾಜ್ಯ ಸರ್ಕಾರ 5 ಸಾವಿರ ಹಾಗೂ ಕೇಂದ್ರ ಸರ್ಕಾರ 5 ಸಾವಿರ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿದರು.ರಾಜ್ಯದ 12 ಜಿಲ್ಲೆಗಳಲ್ಲಿ ತೆಂಗು ಬೆಳೆ ಬೆಳೆಯುತ್ತಿದ್ದು, 12 ಜಿಲ್ಲೆಯ ಸಂಸದರು, ಶಾಸಕರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ, ಕೇಂದ್ರ ಸರ್ಕಾರಕ್ಕೆ ನಿಯೋಗದ ಮೂಲಕ ತೆರಳಿ ತೆಂಗು ಉತ್ಪಾದನಾ ಆಮದು ಶುಲ್ಕವನ್ನು ಶೇ.30 ರಿಂದ 50ಕ್ಕೆ ಏರಿಕೆ ಮಾಡಿದರೆ, ಕೊಬ್ಬರಿ ಬೆಲೆ ಸುಮಾರು 30 ರಿಂದ 40 ಸಾವಿರಕ್ಕೆ ಏರಿಕೆ ಆಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts