More

    ತುತ್ತು ಅನ್ನಕ್ಕೂ ಕುತ್ತು ತಂದ ಮಳೆರಾಯ!

    ಬೆಳಗಾವಿ: “ಹೊಟ್ಟೆಪಾಡಿಗಾಗಿ ದೂರದ ಊರುಗಳಿಂದ ವಲಸೆ ಬಂದು ದುಡಿದು ಬದುಕುತ್ತಿದ್ದೇವೆ. ನಮ್ಮೂರಲ್ಲಿ ಸ್ವಂತ ಮನೆ, ಜಮೀನೂ ಇಲ್ಲ. ಎಲ್ಲಿ ಹೋದರೂ ದುಡಿಯುವುದು ತಪ್ಪಲ್ಲ. ದುಡಿದು ತಿನ್ನೋಣವೆಂದರೆ ಈಗ ಮಳೆ ಬಂದು ನಮ್ಮ ತುತ್ತು ಅನ್ನವನ್ನೂ ಕಿತ್ತುಕೊಂಡಿದೆ’.

    ಬೆಳಗಾವಿ ನಗರದ ಮಂಡೋಲಿ ರಸ್ತೆಯ ಕೈವಲ್ಯ ಯೋಗ ಮಂದಿರದಲ್ಲಿ ಆರಂಭಿಸಿರುವ ಕಾಳಜಿ ಕೇಂದ್ರದಲ್ಲಿರುವ ಅತಿವೃಷ್ಟಿ ಸಂತ್ರಸ್ತ ಕುಟುಂಬದ ಸದಸ್ಯರು ಅಳಲು ತೋಡಿಕೊಂಡ ಪರಿ ಇದು. ಸರ್ಕಾರ ತೆರೆದಿರುವ ಈ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಲ್ಲಿ ಮಹಿಳೆಯರು, ಮಕ್ಕಳಿದ್ದಾರೆ. ಅವರೆಲ್ಲ ಗಾಳಿ, ಮಳೆ, ಚಳಿಗೆ ನಲುಗುತ್ತಿದ್ದಾರೆ. ಇನ್ನೊಂದೆಡೆ ಹೆತ್ತವರನ್ನು ಹಿಂಬಾಲಿಸಿದ ಮಕ್ಕಳು ಶಾಲೆ ಇಲ್ಲದೆ ಊಟ, ನಿದ್ರೆಗೆ ಸೀಮಿತರಾಗಿದ್ದಾರೆ. ಕಾಳಜಿ ಕೇಂದ್ರ ಆವರಣದ ಅಂಗಳವೇ ಅವರಿಗೆ ಆಟದ ತಾಣವಾಗಿದೆ.

    ನಾಲ್ಕು ಗೋಡೆಗಳ ಕಟ್ಟಡವೇ ಬಡ ಕುಟುಂಬಗಳಿಗೆ ಅರಮನೆಯಾಗಿದೆ. ಸರ್ಕಾರ ನೀಡುವ ಅನ್ನವೇ ಅಮೃತವಾಗಿದೆ. ಜೀವನೋಪಾಯಕ್ಕೆ ಅಲೆದಾಡುವ ಈ ಅಲೆಮಾರಿ ಕುಟಂಬಗಳಿಗೆ ಸರ್ಕಾರದಿಂದ ಸೂರು ಬೇಕಿದೆ. ಹತ್ತು ವರ್ಷಗಳ ಹಿಂದೆ ದುಡಿಮೆಗಾಗಿ ಬೈಲಹೊಂಗಲ ತಾಲೂಕಿನಿಂದ ಕುಟುಂಬ ಸಮೇತ ಬೆಳಗಾವಿ ನಗರಕ್ಕೆ ವಲಸೆ ಬಂದು ಚೌಗಲೆವಾಡಿಯಲ್ಲಿದ್ದೇವೆ. ಜೋರು ಮಳೆ ಬಂದರೆ ಮನೆಯ ಒಳಗೆ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸುತ್ತಿದೆ

    ಈ ಬಾರಿ ನಿರಂತರವಾಗಿ ಮಳೆ ಸುರಿದಿದ್ದರಿಂದ ಮನೆಯ ತುಂಬೆಲ್ಲ ನೀರು ನಿಂತಿದೆ .ಮಕ್ಕಳನ್ನು ಕರೆದುಕೊಂಡು ಕೈಗೆ ಸಿಕ್ಕ ಪಾತ್ರೆ, ಹಾಸಿಗೆ ಹಿಡಿದು ಹೊರಗೆ ಬಂದಿದ್ದೀವಿ. ದುಡಿಮೆ ಇಲ್ಲದ ವೇಳೆ ಹೊಟ್ಟೆಗಾಗಿ ಮಾಡಿದ ಸಾಲ ವಾರಕ್ಕೊಮ್ಮೆ ಕಂತು ಪಾವತಿಸಬೇಕು. ಕಾಳಜಿ ಕೇಂದ್ರದಲ್ಲಿ ನಮಗೆ ಊಟ, ಉಪಚಾರ ಚಲೋ ಐತ್ರಿ. ಆದರೆ, ದುಡಿಮೆ ಇಲ್ಲ ಎನ್ನುವುದು ಈ ದುಡಿಯುವ ಜೀವಗಳ ಅಳಲು.

    ನಿತ್ಯ 600 ರೂ. ದಿನಗೂಲಿ: 10 ವರ್ಷಗಳಿಂದ ಬೆಳಗಾವಿ ನಗರದಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದೇವೆ. ನನ್ನ ಪತ್ನಿ ಮನೆ ಗೆಲಸ ಮಾಡುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರ ಇದ್ದಾನೆ. ಎಲ್ಲ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ನಿತ್ಯ 600 ರೂ. ಪಗಾರ ಮನೆಗೆ ತರುತ್ತೇವೆ. ಆದರೆ, ಇದೀಗ ಧಾರಾಕಾರ ಮಳೆ ನಮ್ಮ ಬದುಕು ಕಸಿದುಕೊಂಡಿದೆ. ಸರ್ಕಾರದ ಕಾಳಜಿ ಕೇಂದ್ರದಲ್ಲಿದ್ದೇವೆ. ಆದರೆ, ದುಡಿಮೆ, ಆದಾಯ ಇಲ್ಲದಂತಾಗಿದೆ. ಮುಂದಿನ ಖರ್ಚು&ವೆಚ್ಚದ ಚಿಂತೆ ನಮ್ಮನ್ನು ಕಾಡುತ್ತಿದೆ. ಪರಿಹಾರ ನೀಡಲು ಬ್ಯಾಂಕ್​ ದಾಖಲೆ ನೀಡುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸಂತ್ರಸ್ತೆ, ಬೈಲಹೊಂಗಲ ತಾಲೂಕಿನ ಮುತವಾಡ ಗ್ರಾಮದ ಸವಿತಾ ದುರ್ಗಪ್ಪ ಸೊಗಲದ ಹೇಳುತ್ತಾರೆ.

    ಚಚಡಿ ಗ್ರಾಮದಲ್ಲಿ ಸರ್ಕಾರವು ನಮ್ಮ ಕುಟುಂಬಕ್ಕೆ 1 ಎಕರೆ ಜಮೀನು ನೀಡಿದೆ. ಒಂದು ಜನತಾ ಮನೆ ಇದೆ. ಆದರೆ, ನನ್ನ ಸಹೋದರ ಅಲ್ಲಿರುತ್ತಾನೆ. ಹಾಗಾಗಿ ನಾವು ಬೆಳಗಾವಿ ನಗರದಲ್ಲಿ ದುಡಿದು ಬದುಕು ಸಾಗಿಸುತ್ತಿದ್ದೇವೆ. 14 ವರ್ಷದಿಂದ ಇಲ್ಲಿಯೇ ಇದ್ದೇವೆ. ಓರ್ವ ಮಗಳನ್ನು ಮದುವೆ ಮಾಡಿಕೊಟ್ಟಿದ್ದೇನೆ. ಕಟ್ಟಡ ನಿರ್ಮಾಣದ ಕೆಲಸಕ್ಕೆ ಹೋಗುತ್ತೇನೆ. ನಿತ್ಯ 450 ರೂ. ಪಗಾರ ಕೈಗೆ ಸಿಗುತ್ತದೆ. 2 ಸಾವಿರ ರೂ. ತಿಂಗಳ ಬಾಡಿಗೆ ಮನೆಯಲ್ಲಿದ್ದೇವೆ.
    |ಬಸಪ್ಪ ಮಲ್ಲಪ್ಪ ಹಾರಗೊಪ್ಪ, ಕಸ್ತೂರಿ ಹಾರಗೊಪ್ಪ ಬೈಲಹೊಂಗಲ ತಾಲೂಕು ಚಚಡಿ ಗ್ರಾಮ

    ಎಂಟು ವರ್ಷದಿಂದ ಚೌಗಲೆವಾಡಿಯಲ್ಲಿ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದೇವೆ. ಮಳೆ ನೀರು ಮನೆಗೆ ನುಗ್ಗಿದ್ದರಿಂದ ಮನೆಯಲ್ಲಿರುವ ಎಲ್ಲ ವಸ್ತುಗಳು ಹಾನಿಯಾಗಿವೆ. ನಾಲ್ಕು ಜನ ಮಕ್ಕಳು ಓದುತ್ತಿದ್ದಾರೆ. ಮಳೆಯಿಂದಾಗಿ ಶಾಲೆಗೆ ಮಕ್ಕಳು ಹೋಗಿಲ್ಲ. ಸದ್ಯ ಕಾಳಜಿ ಕೇಂದ್ರದಲ್ಲಿದ್ದೇವೆ.
    |ನಾಗಪ್ಪ ಯಲ್ಲಪ್ಪ ಕಡ್ಲೆಕೊಪ್ಪ, ಬೈಲಹೊಂಗಲ ತಾಲೂಕಿನ, ಮೇಕಲಮರಡಿ ಗ್ರಾಮ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts