More

    ತುಂಗೆ ಒಡಲ ಗ್ರಾಪಂಗಳಲ್ಲಿ ಚುನಾವಣೆ ಕಾವು

    ರಾಣೆಬೆನ್ನೂರ: ತಾಲೂಕಿನ ಇತರೆಡೆಗಿಂತ ತುಂಗಭದ್ರಾ ನದಿಪಾತ್ರಕ್ಕೆ ಹೊಂದಿಕೊಂಡ ಗ್ರಾಪಂಗಳಲ್ಲಿ ಈ ಬಾರಿಯ ಚುನಾವಣೆ ಜೋರಾಗಿದ್ದು, ನಾಮಪತ್ರ ಸಲ್ಲಿಕೆಗೂ ಮುನ್ನವೇ ಕಾಂಚಾಣ ಕುಣಿಸಲು ಭರ್ಜರಿ ಸಿದ್ಧತೆ ಮಾಡಿಕೊಂಡ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

    ತಾಲೂಕಿನಲ್ಲಿ ತುಂಗಭದ್ರಾ ನದಿಗೆ ಹೊಂದಿಕೊಂಡು ಕೋಣನತಂಬಗಿ, ಮಾಕನೂರ, ಮುದೇನೂರ, ಲಿಂಗದಹಳ್ಳಿ, ಚಿಕ್ಕಕುರುವತ್ತಿ, ಹರನಗಿರಿ, ಮೇಡ್ಲೇರಿ, ಬೇಲೂರು, ಐರಣಿ, ಹಿರೇಬಿದರಿ, ನದಿಹರಳಹಳ್ಳಿ, ಕವಲೆತ್ತು, ಕುಮಾರಪಟ್ಟಣ, ಚೌಡಯ್ಯದಾನಪುರ ಗ್ರಾಪಂಗಳಿವೆ.

    ತುಂಗಭದ್ರಾ ನದಿಪಾತ್ರದ ಗ್ರಾಪಂಗಳಲ್ಲಿ ಆಯ್ಕೆಯಾಗುವವರೇ ಮರಳಿನ ದಣಿಗಳಾಗುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮತದಾರರಿಗೆ ನಾನಾ ಬಗೆಯ ಉಡುಗೊರೆ, ಹಣ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇತರ ಗ್ರಾಪಂ ಚುನಾವಣೆಯಲ್ಲಿ 100 ಅಥವಾ 200 ರೂ. ಹಂಚಿದರೆ, ತುಂಗಭದ್ರಾ ನದಿಪಾತ್ರದ ಗ್ರಾಪಂಗಳ ಚುನಾವಣೆಯಲ್ಲಿ 500 ರೂ.ವರೆಗೂ ಹಣ ಹಂಚಲು ಕೆಲವರು ವ್ಯವಸ್ಥೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಮರಳಿನ ದಾರಿ ಸುಗಮದ ಲೆಕ್ಕಾಚಾರ: ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ದಂಧೆ ಮೊದಲಿನಿಂದಲೂ ಎಗ್ಗಿಲ್ಲದಂತೆ ನಡೆಯುತ್ತ ಬಂದಿದೆ. ಇಲ್ಲಿನ ಗ್ರಾಪಂಗಳಲ್ಲಿ ಮೇಲುಗೈ ಸಾಧಿಸಿದರೆ, ಅಕ್ರಮವಾಗಿ ಮರಳು ಸಾಗಿಸುವವರಿಗೆ ನದಿಯಿಂದ ಮುಖ್ಯರಸ್ತೆಗೆ ದಾರಿ ಮಾಡಿಕೊಳ್ಳಲು ಹಾಗೂ ನದಿಯಿಂದ ಮರಳನ್ನು ಸುಲಭವಾಗಿ ಸಾಗಿಸಲು ಅನುಕೂಲವಾಗುತ್ತದೆ. ಪೊಲೀಸರಿಗೆ, ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಿಗೆ ಅಕ್ರಮದ ಬಗ್ಗೆ ದೂರು ನೀಡುವವರು ಹಾಗೂ ಮಾಹಿತಿ ನೀಡುವವರು ಕಡಿಮೆಯಾಗಲಿದ್ದಾರೆ ಎಂಬ ಲೆಕ್ಕಚಾರ ಮರಳು ಸಾಗಾಟಗಾರರದ್ದು.

    ತುಂಗಭದ್ರಾ ನದಿ ಅತಿ ಹೆಚ್ಚು ಮರಳು ದೊರೆಯುವ ಖನಿಜವಿದ್ದಂತೆ. ನದಿಪಾತ್ರಕ್ಕೆ ಹೊಂದಿಕೊಂಡ ಗ್ರಾಪಂಗಳ ವ್ಯಾಪ್ತಿಯಲ್ಲಿ ಮರಳಿನ ದಂಧೆ ಜೋರಾಗಿ ನಡೆಯುವ ಕಾರಣ ಯಾರ ಬಳಿಯೂ ಹಣಕ್ಕೆ ಕೊರತೆಯಿಲ್ಲ. ಆದ್ದರಿಂದ ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ. ಈ ಬಾರಿ ಚುನಾವಣೆಯಲ್ಲಿ ನಾವೇ ಗೆಲ್ಲಬೇಕು ಎಂದು ತೊಡೆತಟ್ಟಿ ನಿಂತವರು ಈ ಭಾಗದಲ್ಲಿ ಹೆಚ್ಚಾಗಿದ್ದಾರೆ.

    ಆದ್ದರಿಂದ ಈ ಬಗ್ಗೆ ಚುನಾವಣಾಧಿಕಾರಿಗಳು ಗಮನ ಹರಿಸಿ ಮತದಾರರಿಗೆ ಆಮಿಷವೊಡ್ಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂಬುದು ಗ್ರಾಮೀಣರ ಆಗ್ರಹವಾಗಿದೆ.

    ಅವಿರೋಧಕ್ಕೂ ಕಸರತ್ತು: ಇನ್ನು ಕೆಲವರು ಗ್ರಾಮದ ದೇವಸ್ಥಾನ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ ಸೇರಿ ವಿವಿಧ ಬಗೆಯ ಆಮಿಷವೊಡ್ಡಿ ಅವಿರೋಧ ಆಯ್ಕೆ ಮಾಡುವಂತೆ ಆಯಾ ಗ್ರಾಮಗಳ ಹಿರಿಯರ ಸಮ್ಮುಖದಲ್ಲಿ ಗುಪ್ತ ಸಭೆ ಕೂಡ ನಡೆಸುತ್ತಿದ್ದಾರೆ. ಆದರೆ, ಪ್ರತಿ ವಾರ್ಡ್​ಗೂ ಅಭ್ಯರ್ಥಿಗಳ ಪಟ್ಟಿ ಹೆಚ್ಚುತ್ತಿರುವ ಕಾರಣ ಸದ್ಯ ಯಾವ ಗ್ರಾಪಂನಲ್ಲೂ ಅವಿರೋಧ ಆಯ್ಕೆ ನಡೆದಿಲ್ಲ.

    ಚುನಾವಣೆಯಲ್ಲಿ ಮತದಾರರಿಗೆ ಹಣ ಸೇರಿ ಯಾವುದೇ ರೀತಿ ಆಮಿಷವೊಡ್ಡಲು ಅವಕಾಶವಿಲ್ಲ. ಈ ಬಗ್ಗೆ ಕಂಡು ಬಂದರೆ ಕೂಡಲೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

    | ಬಸನಗೌಡ ಕೋಟೂರ, ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts