More

    ತುಂಗಭದ್ರಾ ನದಿಗೆ 1.81 ಲಕ್ಷ ಕ್ಯೂಸೆಕ್ ನೀರು

    ಮುಂಡರಗಿ: ಮಲೆನಾಡಿನ ವಿವಿಧೆಡೆ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ, ತಾಲೂಕಿನ ಹಮ್ಮಿಗಿ ಬಳಿಯ ಸಿಂಗಟಾಲೂರ ಏತ ನೀರಾವರಿ ಯೋಜನೆ ಬ್ಯಾರೇಜ್​ನ 26 ಗೇಟ್​ಗಳ ಪೈಕಿ 20 ಗೇಟ್​ಗಳ ಮೂಲಕ ನೀರನ್ನು ತುಂಗಭದ್ರಾ ನದಿಗೆ ಹರಿಬಿಡಲಾಗುತ್ತಿದೆ.
    ಸಿಂಗಟಾಲೂರ ಬ್ಯಾರೇಜ್​ನಿಂದ ಬುಧವಾರ 1,81,055 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಜುಲೈ ಮೊದಲ ವಾರದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಕ್ರಮೇಣ ನೀರಿನ ಹರಿವು ಕಡಿಮೆಯಾಗಿತ್ತು. ಆದರೆ, ಆ.7ರಿಂದ ದಿನದಿಂದ ದಿನಕ್ಕೆ ನದಿಗೆ ಹೆಚ್ಚು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಬ್ಯಾರೇಜ್​ನ 20 ಗೇಟ್​ಗಳನ್ನು ತೆರೆದು ನದಿಗೆ ನೀರನ್ನು ಹರಿಬಿಡಲಾಗುತ್ತಿದೆ.
    ಸದ್ಯ ಬ್ಯಾರೇಜ್ 3.12ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಹಿನ್ನೀರಿನಿಂದ ಗುಮ್ಮಗೋಳ, ಬಿದರಳ್ಳಿ, ವಿಠಲಾಪೂರ ಮತ್ತು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಅಲ್ಲಿಪೂರ ಗ್ರಾಮ ಮುಳುಗಡೆ ಪ್ರದೇಶಕ್ಕೆ ಒಳಪಟ್ಟಿವೆ. ನಾಲ್ಕು ಗ್ರಾಮಗಳನ್ನು ಇದುವರೆಗೂ ಸ್ಥಳಾಂತರಿಸದ ಕಾರಣ ಬ್ಯಾರೇಜ್​ನಲ್ಲಿ 1.98 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹಿಸಲಾಗುತ್ತಿದೆ. ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.
    ಸಿಂಗಟಾಲೂರ ಬ್ಯಾರೇಜ್​ನಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊರಗಡೆ ಬಿಡುವುದರಿಂದ ನದಿ ಪಾತ್ರದ ಜಮೀನಿನ ಭತ್ತ ಮೊದಲಾದ ಬೆಳೆಗಳು ಜಲಾವೃತಗೊಂಡು ರೈತರು ಸಂಕಷ್ಟ ಸ್ಥಿತಿ ಎದುರಿಸುವಂತಾಗಿದೆ. ಹೆಚ್ಚು ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಹಿನ್ನೀರಿನ ಮುಳುಗಡೆ ಪ್ರದೇಶಕ್ಕೆ ಒಳಪಡುವಂತಹ ಗ್ರಾಮಸ್ಥರು ಆತಂಕ ಪಡುವಂತಾಗಿದೆ.

    ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ದಿನದಿಂದ ದಿನಕ್ಕೆ ನೀರಿನ ಹರಿವು ಹೆಚ್ಚಳವಾಗುತ್ತಿದೆ. ಬುಧವಾರ 1,81,055 ಕ್ಯೂಸೆಕ್ ನೀರನ್ನು ಸಿಂಗಟಾಲೂರ ಬ್ಯಾರೇಜ್​ನ 20 ಗೇಟ್​ಗಳ ಮೂಲಕ ನದಿಗೆ ಹರಿಬಿಡಲಾಗಿದೆ. ಸದ್ಯ ಬ್ಯಾರೇಜ್​ನಲ್ಲಿ 1.98 ಟಿಎಂಸಿ ಅಡಿ ನೀರು ಸಂಗ್ರಹಿಸಲಾಗುತ್ತಿದೆ. ಇನ್ನೂ ಎರಡು ದಿನ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇದೆ.
    | ರಾಘವೇಂದ್ರ ಎಚ್.ಸಿ. ಸಿಂಗಟಾಲೂರ ಬ್ಯಾರೇಜ್ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts