More

    ತಿ.ನರಸೀಪುರದಲ್ಲಿ ದಸಂಸ ಪ್ರತಿಭಟನೆ

    ತಿ.ನರಸೀಪುರ: ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಸದಸ್ಯರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

    ಪಟ್ಟಣದ ತಾಲೂಕು ಕಚೇರಿ ಎದುರು ಜಮಾವಣೆಗೊಂಡ ಸಮಿತಿ ಸದಸ್ಯರು, ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಎಂಬಾತನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿರುವುದು ಖಂಡನೀಯ ಎಂದು ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
    ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಬನ್ನಹಳ್ಳಿ ಸೋಮಣ್ಣ ಮಾತನಾಡಿ, ಧರ್ಮಸ್ಥಳದಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಘಟನೆ ಬಗ್ಗೆ ನ್ಯಾಯಯುತ ತನಿಖೆಯಾಗಬೇಕಿತ್ತು. ಕೃತ್ಯ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕಿತ್ತು. ಆದರೆ ಪೊಲೀಸ್ ಇಲಾಖೆ ಸಂತೋಷ್ ರಾವ್ ಎಂಬಾತನ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಸಿಬಿಐ ನ್ಯಾಯಾಲಯದಲ್ಲಿ ವಜಾ ಮಾಡಿ ಆರೋಪಿಯನ್ನು ನಿರಪರಾಧಿ ಎಂದು ಬಿಡುಗಡೆಗೊಳಿಸಿರುವುದು ಅನುಮಾನ ಹುಟ್ಟುವಂತೆ ಮಾಡಿದೆ ಎಂದು ಆರೋಪಿಸಿದರು.

    ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಡಾ.ಚಂದ್ರಶೇಖರ್ ಮಾತನಾಡಿ, 11 ವರ್ಷಗಳ ಹಿಂದೆ ನಡೆದ ಘಟನೆಗೆ ನ್ಯಾಯ ಸಿಕ್ಕಿಲ್ಲ. ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆ ಹಾಗೂ ಗೌರವ ಉಳಿಯಬೇಕಾದರೆ ಸೌಜನ್ಯಳ ಸಾವಿಗೆ ನ್ಯಾಯ ಸಿಗಲೇಬೇಕು. ಆರೋಪಿಗಳು ಹಾಗೂ ಆಶ್ರಯದಾತರಿಗೂ ಶಿಕ್ಷೆಯಾಗಬೇಕು. ಆದ್ದರಿಂದ ಸರ್ಕಾರ ಸೌಜನ್ಯಳ ಕೊಲೆ ಪ್ರಕರಣವನ್ನು ಮರುತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಿದರು.

    ದಸಂಸ ತಾಲೂಕು ಸಂಚಾಲಕ ಕೆಂಪಯ್ಯನಹುಂಡಿ ರಾಜು, ಪ್ರಧಾನ ಸಂಚಾಲಕ ಬನ್ನಹಳ್ಳಿ ಬಸವರಾಜು, ರೈತ ಮುಖಂಡ ಕಿರಗಸೂರು ಶಂಕರ್, ಎಲ್.ರಾಜಶೇಖರ್, ಸುರೇಶ್, ರಾಮು, ಕನ್ನಾಯಕನಹಳ್ಳಿ ಮರಿಸ್ವಾಮಿ, ಮಹದೇವ, ರಂಗಸ್ವಾಮಿ, ಸೋಮಣ್ಣ, ಮನು, ಜಯಣ್ಣ, ರವಿಕಾಂತ, ಕೇಶವ ಮೂರ್ತಿ, ಮಹದೇವಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts