More

    ತಿಳಿದು ಬದುಕುವುದೇ ನಿಜವಾದ ಧರ್ಮ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಸಂಸ್ಕಾರ, ಸಜ್ಜನಿಕೆಯಿಂದ ಮನುಷ್ಯನ ಬದುಕು ಸಮೃದ್ಧಗೊಳ್ಳುತ್ತದೆ. ಒಬ್ಬರು ಇನ್ನೊಬ್ಬರನ್ನು ತುಳಿದು ಬದುಕಬಾರದು. ತಿಳಿದು ಬದುಕುವುದೇ ನಿಜವಾದ ಧರ್ಮ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

    ಸತ್ತೂರು ಗ್ರಾಮದ ಶ್ರೀ ಜಗದ್ಗುರು ದಾರುಕ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸೌಂದರ್ಯ ಜನರ ಗಮನ ಸೆಳೆಯಬಹುದು. ಆದರೆ, ಉತ್ತಮ ವ್ಯಕ್ತಿತ್ವ ಮನಸ್ಸನ್ನು ಆವರಿಸುತ್ತದೆ. ಬದುಕು ಬದಲಾಗಬೇಕಾದರೆ ಬದುಕುವ ದಾರಿಯೂ ಬದಲಾಗಬೇಕು. ಸಂಸ್ಕಾರಯುತ ಜೀವನ ರೂಪಿತಗೊಳ್ಳಲು ಶ್ರೀ ಗುರುವಿನ ಜ್ಞಾನ ಬೋಧಾಮೃತ ಅವಶ್ಯಕ. ವೀರಶೈವ ಧರ್ಮವು ಮಾನವೀಯ, ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿ ಉದ್ಧರಿಸಿದ್ದನ್ನು ಮರೆಯಲಾಗದು. ದೇವರಲ್ಲಿ ನಂಬಿಕೆ, ಗುರುವಿನಲ್ಲಿ ಶ್ರದ್ಧೆ ಮತ್ತು ಆಚಾರದಲ್ಲಿ ನಿಷ್ಠೆಯಿದ್ದರೆ ಬದುಕು ಉಜ್ವಲಗೊಳ್ಳುತ್ತದೆ ಎಂದರು.

    ಸುಳ್ಳದ ಶ್ರೀ ಶಿವಸಿದ್ಧರಾಮೇಶ್ವರ ಸ್ವಾಮೀಜಿ ಮತ್ತು ಶಿರಕೋಳದ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ, ನುಡಿ ನಮನ ಸಲ್ಲಿಸಿದರು. ಶೈಲಾ ಸಂಗಯ್ಯ ಪ್ರಭುಸ್ವಾಮಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಪ್ರಮುಖರಾದ ಗುರುರಾಜ ಹುಣಸಿಮರದ, ಪ್ರಕಾಶ ಬೆಂಡಿಗೇರಿ, ಡಾ. ಮಯೂರ ಮೋರೆ, ನೀಲಮ್ಮ ಅರವಾಳದ, ವಿಜಯಲಕ್ಷ್ಮೀ ಲೂತಿಮಠ, ಇಂದುಮತಿ ಮಾನ್ವಿ, ವಿಶ್ವನಾಥ ಹಿರೇಗೌಡರ, ಮಂಜುನಾಥ ಮಠಪತಿ, ಡಾ. ಶಿವಾನಂದ ಹಿರೇಮಠ, ರೇಣುಕ ಪ್ರಸಾದ ಇತರರು ಇದ್ದರು. ಕೊಟ್ರೇಶ್ವರ ಶಾಸ್ತ್ರಿ ನಿರೂಪಿಸಿದರು.

    ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ, ಭಕ್ತ ಸಮುದಾಯಕ್ಕೆ ಶುಭ ಹಾರೈಸಿದರು. ನಂತರ ಅನ್ನ ದಾಸೋಹ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts