ರಿಪ್ಪನ್‌ಪೇಟೆ: ಜಾತಿ, ಮತಗಳೆನ್ನದೇ ಸರ್ವ ಸಮುದಾಯಗಳ ಅಭ್ಯುದಯಕ್ಕಾಗಿ ಶ್ರಮಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಿಗೆ ಸಲ್ಲುತ್ತದೆ. ವಿಶ್ವ ಬಂಧುತ್ವದ ಆದರ್ಶ ಭಾವನೆಗಳನ್ನು ಹೊಂದಿ ಧರ್ಮ ಕಟ್ಟಿ ಬೆಳೆಸುವ ಜವಾಬ್ದಾರಿ ನಾಡಿನ ಮಠಗಳ ಮೇಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರಗಳು ಹೇಳಿದರು.
ಮಂಗಳವಾರ ಕವಲೇದುರ್ಗದ ಭುವನಗಿರಿ ಸಂಸ್ಥಾನ ಹಿರೇಮಠದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜೆ, ಮಂಡಲ ಪೂಜೆಯ ಮುಕ್ತಾಯ, ನೂತನ ಕಟ್ಟಡ ಉದ್ಘಾಟನೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಎಲ್ಲರೂ ಅವರವರ ಧರ್ಮಕ್ಕೆ ಜಯವಾಗಲಿ ಎಂದರೆ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಭಾವೈಕ್ಯ ಸಂದೇಶ ನೀಡಿದ್ದಾರೆ ಎಂದರು.
ಪ್ರತಿಯೊಬ್ಬರಲ್ಲೂ ಸ್ವಾಭಿಮಾನದ ಜತೆಗೆ ದೇಶಾಭಿಮಾನ ಬೆಳೆಯಬೇಕು. ಕವಲೇದುರ್ಗದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ಶ್ರೀ ಮಠದ ಅಧಿಕಾರ ವಹಿಸಿಕೊಂಡ ನಂತರ ಸತ್ಯ ಸಂಕಲ್ಪದೊಂದಿಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕವಲೇದುರ್ಗ ಭುವನಗಿರಿ ಸಂಸ್ಥಾನ ಮಠ ಉತ್ತುಂಗಕ್ಕೇರಲಿದೆ ಎಂದ ಅವರು, ಶ್ರೀ ರಂಭಾಪುರಿ ಪೀಠದಿಂದ ಹಸಿರು ಮಡಿ, ಸ್ಮರಣಿಕೆಯನ್ನು ಕವಲೇದುರ್ಗ ಶ್ರೀಗಳಿಗೆ ನೀಡಿ ಅಶೀರ್ವದಿಸಿದರು.
ಮಳಲಿಮಠದ ಡಾ. ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರಿನ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹರಪನಹಳ್ಳಿ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು. ಶಾಸಕ ಆರಗ ಜ್ಞಾನೇಂದ್ರ, ಲತಾ, ಹಾಲಪ್ಪಗೌಡ, ಗುರುಮೂರ್ತಿ ನಾಯಕ, ಪಾಂಡಣ್ಣ, ರಾಘವೇಂದ್ರ, ವಿಘ್ನೇಶ್ವರ ಸೊಲ್ಲಾಪುರಮಠ, ಪ್ರಶಾಂತ ರಿಪ್ಪನ್‌ಪೇಟೆ, ಯುವರಾಜ ಗೌಡ, ಸಿ.ಎಚ್.ಬಾಳನಗೌಡ, ವರ್ತೇಶ್ ಗೌಡ, ಬಸವರಾಜ ಸೇರಿ ಅನೇಕರಿಗೆ ಜಗದ್ಗುರುಗಳು ಗುರುರಕ್ಷೆ ನೀಡಿದರು. ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತ ಸಂಕುಲಕ್ಕೆ ಶುಭ ಹಾರೈಸಿದರು.