More

    ತಾಯಿಯ ಅಂತಃಕರಣದ ಅಸ್ಮಿತೆ ರಾಜೇಂದ್ರಶ್ರೀ

    ನಂಜನಗೂಡು: ಜಗವೆಲ್ಲ ನಗುತಿರಲಿ, ಜಗದ ಅಳುವು ನನಗಿರಲಿ ಎನ್ನುವ ತಾಯಿಯ ಅಂತಃಕರಣದ ಅಸ್ಮಿತೆ ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳು ಎಂದು ಆಧ್ಯಾತ್ಮಿಕ ಚಿಂತಕ ಶಂಕರ್ ದೇವನೂರು ಬಣ್ಣಿಸಿದರು.


    ನಗರದ ಹೌಸಿಂಗ್‌ಬೋರ್ಡ್ ಕಾಲನಿಯಲ್ಲಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಮಹಾಮನೆಯಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 107ನೇ ಜಯಂತಿ ಮಹೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ನುಡಿ ನೈವೇದ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಎಲ್ಲರ ಒಳಿತಿನಲ್ಲಿ ನಮ್ಮ ಒಳಿತಿದೆ ಎಂಬುದು ಶ್ರೀಗಳ ಧ್ಯೇಯವಾಕ್ಯವಾಗಿತ್ತು. ಮಾನವರೆಲ್ಲರೂ ಒಂದೇ ಎನ್ನುವ ಅವರ ಸಮತೆ, ಮಮತೆ, ಹೃದಯವಂತಿಕೆ, ಮಾನವೀಯ ಅಂತಃಕರಣ, ಶ್ರಮಶೀಲತೆ, ಸೇವಾ ಕೈಂಕರ್ಯ, ಕಾರುಣ್ಯವನ್ನು ತಾತ್ವಿಕವಾಗಿ ಪ್ರತಿಪಾದಿಸಿದ ವಾತ್ಸಲ್ಯಮೂರ್ತಿ, ಅಕ್ಷರ, ಅನ್ನ, ಆಶ್ರಯ ತ್ರಿವಿಧ ದಾಸೋಹ ಮುಖಾಂತರ ಮನುಕುಲದ ಗಾಯಕ್ಕೆ ಮದ್ದಾದ ಮಹಾನುಭಾವರು ಎಂದು ಸ್ಮರಿಸಿದರು.


    ಬಡತನ, ಮೌಢ್ಯ ನಿವಾರಣೆಗೆ ಶಿಕ್ಷಣವೇ ಮದ್ದು ಎಂಬುದನ್ನು ಅರಿತ ರಾಜೇಂದ್ರ ಶ್ರೀಗಳು ಸ್ವಾತಂತ್ರ್ಯ ಪೂರ್ವದಲ್ಲಿ ಹಸಿವು, ಬಡತನದಿಂದ ತತ್ತರಿಸಿ ಶಿಕ್ಷಣದಿಂದ ವಂಚಿತರಾಗಿದ್ದ ಕಾಲಘಟ್ಟದಲ್ಲಿ ಉಚಿತ ವಿದ್ಯಾರ್ಥಿನಿಲಯ ತೆರೆದರು. ಧವಸ, ಧಾನ್ಯ ಬೇಡಿ ತಂದು ಹಸಿದ ಹೊಟ್ಟೆ ತುಂಬಿಸಿ ಅವರು ಉಪವಾಸ ಇದ್ದ ನಿದರ್ಶನಗಳಿವೆ. ಪಟ್ಟಾಧಿಕಾರ ಸಂದರ್ಭದಲ್ಲಿ ಭಕ್ತರು ನೀಡಿದ್ದ ಚಿನ್ನದ ಕರಡಿಗೆ ಮಾರಿ ಮಕ್ಕಳ ಹಸಿವು ನಿವಾರಿಸಿದ ದಿವ್ಯ ಚೇತನರು ಎಂದು ಹೇಳಿದರು.


    ಯುದ್ಧ, ದ್ವೇಷದಿಂದ ಸಾಮ್ರಾಜ್ಯ ಗೆದ್ದವರು ಯಾರೂ ಇಲ್ಲ. ಪ್ರೀತಿ, ಕಾರುಣ್ಯ, ಅಂತಃಕರಣದಿಂದ ಎಲ್ಲವನ್ನು ತನ್ನದಾಗಿಸಿಕೊಳ್ಳಬಹುದು ಎಂಬುದನ್ನು ಜಗತ್ತಿಗೆ ಸಾರಿದ್ದು ಸುತ್ತೂರು ಮಠ. ರಾಜೇಂದ್ರ ಶ್ರೀಗಳ ಕಾರುಣ್ಯದ ರಥವನ್ನು ಮುನ್ನಡೆಸುತ್ತಿರುವ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನಮ್ಮ ದಿವ್ಯ ಪರಂಪರೆಯನ್ನು ಜಗತ್ತಿನೆಲ್ಲೆಡೆ ವಿಸ್ತರಿಸುತ್ತಾ ಸಮಾಜಕ್ಕೆ ನೆರಳಾಗಿದ್ದಾರೆ ಎಂದರು.


    ಕೆ.ಸಿ.ಶಿವಪ್ಪ ಅವರು ರಾಜೇಂದ್ರ ಶ್ರೀಗಳ ಕುರಿತು ರಚಿಸಿರುವ ಕವಿತೆಯನ್ನು ಶಂಕರ್ ದೇವನೂರು ವಾಚಿಸುತ್ತಿದ್ದಂತೆ ನೆರೆದಿದ್ದವರು ಭಾವುಕರಾದರು. ಸಾಮೂಹಿಕವಾಗಿ ಓಂಕಾರ ಧ್ಯಾನ ಹಾಗೂ ಶಿವ ಧ್ಯಾನದ ರಾಜೇಂದ್ರ ಶ್ರೀಗಳಿಗೆ ನೈವೇದ್ಯ ಸಲ್ಲಿಸಲಾಯಿತು. ಗಾಯಕ ಸ್ವರೂಪ್ ರಮೇಶ್ ಭಕ್ತಿ ಗೀತೆ ಗಾಯನ ಮಂತ್ರಮುಗ್ಧಗೊಳಿಸಿತು. ರಾಜ್ಯಮಟ್ಟದ ಸರ್ವೋದಯ ಪ್ರಶಸ್ತಿ ಪುರಸ್ಕೃತ ಪ್ರಸಾದ್ ಹಾಗೂ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಾಗರಾಜು ಅವರನ್ನು ಗೌರವಿಸಲಾಯಿತು.

    ನವಿಲೂರು ಹಾಗೂ ಚುಂಚನಹಳ್ಳಿ ಪಟ್ಟದ ಮಠಾಧ್ಯಕ್ಷ ಶ್ರೀ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ.ರೇವಣ್ಣ, ಕಾರ್ಯದರ್ಶಿ ಎನ್.ಆರ್.ಗಣೇಶ್‌ಮೂರ್ತಿ, ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ, ನಂಜನಗೂಡು ಯೋಗ ಫೌಂಡೇಶನ್ ಅಧ್ಯಕ್ಷ ಡಿಗ್ಗೇನಹಳ್ಳಿ ಪ್ರಕಾಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts