More

    ತವರಿನತ್ತ ‘ಶ್ರಮಿಕ’ರ ಸಂಚಾರ

    ಹುಬ್ಬಳ್ಳಿ: ಉತ್ತರ ಕರ್ನಾಟಕದ ಮೊದಲ ಶ್ರಮಿಕ ಎಕ್ಸ್​ಪ್ರೆಸ್ ರೈಲು ಬುಧವಾರ ಮಧ್ಯಾಹ್ನ 12.30ಕ್ಕೆ ಹುಬ್ಬಳ್ಳಿಯಿಂದ ರಾಜಸ್ಥಾನದ ಜೋಧಪುರಕ್ಕೆ ಪ್ರಯಾಣ ಬೆಳೆಸಿತು. ಧಾರವಾಡ, ಬೆಳಗಾವಿ, ಗದಗ, ಹಾವೇರಿ ಸೇರಿ ಸುತ್ತಲಿನ ಜಿಲ್ಲೆಗಳ 1,452 ರಾಜಸ್ಥಾನದ ವಲಸೆ ಕಾರ್ವಿುಕರು ಹುಬ್ಬಳ್ಳಿ-ಜೋಧಪುರ ಶ್ರಮಿಕ ಸ್ಪೆಷಲ್ ಎಕ್ಸ್​ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದರು.

    ಹುಬ್ಬಳ್ಳಿ ರೈಲ್ವೆ ನಿಲ್ದಾಣ ಎದುರಿನ ರ್ಪಾಂಗ್ ಪ್ರದೇಶದಲ್ಲಿ ವಲಸೆ ಕಾರ್ವಿುಕರ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಗಾಗಿ ನಿರ್ವಿುಸಿದ್ದ 15 ಟೆಂಟ್​ಗಳಲ್ಲಿ ಜ್ವರ ತಪಾಸಣೆ ಹಾಗೂ ಇತರ ಆರೋಗ್ಯ ತಪಾಸಣೆಯನ್ನು ಬೆಳಗ್ಗೆ 6 ಗಂಟೆಯಿಂದ ನಡೆಸಲಾಯಿತು.

    ಬೆಳಗ್ಗೆ ಸುಮಾರು 5.30 ರಿಂದಲೇ ವಲಸೆ ಕಾರ್ವಿುಕರು ರೈಲ್ವೆ ನಿಲ್ದಾಣದತ್ತ ಬರತೊಡಗಿದ್ದರು. ಮಧ್ಯಾಹ್ನ ಸುಮಾರು 12 ಗಂಟೆಯವರೆಗೆ ಎಲ್ಲ ವಲಸೆ ಕಾರ್ವಿುಕರ ಆರೋಗ್ಯ ತಪಾಸಣೆ ನಡೆಸಿ, ರೈಲ್ವೆ ಪ್ರಯಾಣದ ಟಿಕೆಟ್ ನೀಡಲಾಯಿತು. ಅವರು ನಿಲ್ದಾಣದೊಳಗೆ ಪ್ರವೇಶಿಸುವ ಮುನ್ನ ಮತ್ತೊಮ್ಮೆ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ನಡೆಸಿ, ಕೈಗೆ ಸ್ಯಾನಿಟೈಸರ್ ಹಾಕಲಾಯಿತು. ಮಾಸ್ಕ್ ಧರಿಸದವರಿಗೆ ಮಾಸ್ಕ್ ಒದಗಿಸಲಾಯಿತು.

    ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು ಹಾಗೂ ಮಧ್ಯಾಹ್ನದ ಊಟಕ್ಕೆ ಪಲಾವ್ ಪ್ಯಾಕ್ ಅನ್ನು ನಿಲ್ದಾಣದಲ್ಲಿಯೇ ಒದಗಿಸಲಾಯಿತು.

    ಜಿಲ್ಲಾಧಿಕಾರಿ ದೀಪಾ ಚೋಳನ್, ಬೆಳಗಾವಿ ಉತ್ತರ ವಿಭಾಗದ ಐಜಿಪಿ ರಾಘವೇಂದ್ರ ಸುಹಾಸ್, ಧಾರವಾಡ ಎಸ್​ಪಿ ವರ್ತಿಕಾ ಕಟಿಯಾರ, ಹುಬ್ಬಳ್ಳಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಳಖೇಡೆ, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಹುಬ್ಬಳ್ಳಿ ಶಹರ ತಹಸೀಲ್ದಾರ ಶಶಿಧರ ಮಾಡ್ಯಾಳ, ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಸಿ, ನೈಋತ್ಯ ರೈಲ್ವೆ ವಲಯದ ರೈಲು ಬಳಕೆದಾರರ ಸಲಹಾ ಸಮಿತಿಯ ಮಹೇಂದ್ರ ಸಿಂಘಿ ಮತ್ತಿತರರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ವಲಸೆ ಕಾರ್ವಿುಕರ ಆರೋಗ್ಯ ತಪಾಸಣೆ ಹಾಗೂ ಇತರ ಕಾರ್ಯಗಳನ್ನು ಪರಿಶೀಲಿಸಿದರು.

    ರಾಜ್ಯ ಸೇರುವ ಸಂತಸ: ಕರೊನಾ ಸೋಂಕು ಹರಡದಂತೆ ತಡೆಯಲು ದೇಶದಾದ್ಯಂತ ಲಾಕ್​ಡೌನ್ ಘೋಷಿಸಿದ ನಂತರ ಸ್ವಂತ ರಾಜ್ಯ ನೋಡುವುದು ಮತ್ತೆ ಯಾವಾಗಲೋ ಎಂದು ಚಿಂತಿತರಾಗಿದ್ದವರ ಮುಖದಲ್ಲಿ ಬುಧವಾರ ತನ್ನೂರು ಸೇರುವ ಸಂತಸ ಮನೆ ಮಾಡಿತ್ತು. ಕುಟುಂಬ ನಿರ್ವಹಣೆಗಾಗಿ ಒಂದಿಷ್ಟು ಕಾಸು ಗಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಉತ್ತರ ಕರ್ನಾಟಕದ ವಿವಿಧೆಡೆ ಹೋಟೆಲ್, ಪಾನಿಪುರಿ, ಪ್ಲಾಸ್ಟಿಕ್ ವಸ್ತುಗಳ ಮಾರಾಟ ಸೇರಿದಂತೆ ಇತರ ವ್ಯಾಪಾರಕ್ಕಾಗಿ ದೂರದ ರಾಜಸ್ಥಾನದಿಂದ ಬಂದವರು ಲಾಕ್​ಡೌನ್​ನಿಂದಾಗಿ ಇಲ್ಲಿಯೇ ಸಿಲುಕಿಕೊಂಡಿದ್ದರು. ಎಲ್ಲ ವ್ಯವಹಾರ ಬಂದ್ ಆಗಿದ್ದರಿಂದ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದವರಿಗೆ ಸ್ವಂತ ಊರು ಸೇರಿಕೊಳ್ಳುವ ತವಕವಿತ್ತು. ವಲಸೆ ಕಾರ್ವಿುಕರನ್ನು ಅವರವರ ರಾಜ್ಯಗಳಿಗೆ ಕಳುಹಿಸುವುದಕ್ಕಾಗಿ ರೈಲ್ವೆ ಇಲಾಖೆ ಶ್ರಮಿಕ ರೈಲು ಸಂಚಾರ ಪ್ರಾರಂಭಿಸುವುದಾಗಿ ಮಾಡಿದ್ದ ಘೋಷಣೆ ಇವರ ಆಶಯ ಚಿಗುರೊಡೆಯುವಂತೆ ಮಾಡಿತ್ತು.

    ಹುಬ್ಬಳ್ಳಿಯಿಂದಲೂ ಶ್ರಮಿಕ ಸ್ಪೆಷಲ್ ಎಕ್ಸ್​ಪ್ರೆಸ್ ರೈಲು ರಾಜಸ್ಥಾನದ ಜೋಧಪುರಕ್ಕೆ ಹೊರಡಲಿರುವುದನ್ನು ಮನಗಂಡು ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಳ್ಳಾರಿ ಸೇರಿದಂತೆ ಹಲವಾರು ಜಿಲ್ಲೆಗಳ ವಲಸೆ ಕಾರ್ವಿುಕರು ತವರು ರಾಜ್ಯಕ್ಕೆ ತೆರಳಲು ಹೆಸರು ನೋಂದಾಯಿಸಿದ್ದರು.

    ದೂರದ ಜಿಲ್ಲೆಗಳ ವಲಸೆ ಕಾರ್ವಿುಕರನ್ನು ಬುಧವಾರ ಬೆಳಗ್ಗೆ ಜಿಲ್ಲಾಡಳಿತ ವಿಶೇಷ ಬಸ್​ಗಳಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಕರೆತಂದಿತು.

    ಸಣ್ಣ ಮಕ್ಕಳನ್ನು ಕಂಕುಗಳಲ್ಲಿ ಎತ್ತಿಕೊಂಡು, ಕೈಯಲ್ಲಿ ಭಾರದ ಲಗ್ಗೇಜ್ ಇದ್ದರೂ ಯಾವುದೇ ಆಯಾಸ ಇಲ್ಲದಂತೆ ಮಹಿಳೆಯರು, ಪುರುಷರು ಕುಟುಂಬ ಸಮೇತರಾಗಿ ಸಂತಸದಿಂದಲೇ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ಕೌಂಟರ್​ಗಳತ್ತ ಹೆಜ್ಜೆ ಹಾಕಿದರು.

    ಆರೋಗ್ಯ ತಪಾಸಣೆ ನಂತರ ಶಿಸ್ತಿನ ಸಿಪಾಯಿಗಳಂತೆ ಯಾವುದೇ ಗದ್ದಲ, ಗೋಜು ಇಲ್ಲದೆ ರೈಲಿನ ಬೋಗಿ ಏರಿ ಕುಳಿತರು. ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ರೈಲು ಹೊರಡಲು ಸಜ್ಜಾಗುತ್ತಿದ್ದಂತೆಯೇ ನಿಲ್ದಾಣದಲ್ಲಿದ್ದ ರೈಲ್ವೆ, ಪೊಲೀಸ್, ಆರೋಗ್ಯ, ಕಂದಾಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ವಲಸೆ ಕಾರ್ವಿುಕರಿಗೆ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡಲು ಮುಂದಾದರು.ಇದರಿಂದ ಭಾವುಕರಾದ ರಾಜಸ್ಥಾನಿ ಜನರು ಭಾರತ ಮಾತಾ ಕಿ ಜೈ, ವಂದೆ ಮಾತರಂ ಘೋಷಣೆ ಕೂಗಿ, ಕೈ ಬೀಸುವ ಮೂಲಕ ಅಧಿಕಾರಿ-ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts