More

    ತವರಿಗೆ ಬರುವವರ ಕ್ವಾರಂಟೈನ್​ಗೆ ಸಿದ್ಧತೆ

    ಹಾವೇರಿ: ಹೊರದೇಶ, ರಾಜ್ಯ ಹಾಗೂ ಜಿಲ್ಲೆಗಳಿಂದ ಜಿಲ್ಲೆಗೆ ಬರುವ ಪ್ರಯಾಣಿಕರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಚೆಕ್​ಪೋಸ್ಟ್​ಗಳಲ್ಲಿ ಕಟ್ಟುನಿಟ್ಟಾಗಿ ನಡೆಸಬೇಕು. ವೈದ್ಯರ ಸಲಹೆ ಮೇರೆಗೆ ಅವರನ್ನು ಕ್ವಾರಂಟೈನ್ ಮಾಡಲು ಸಿದ್ಧತೆ ಮಾಡಿಕೊಳ್ಳಿ ಎಂದು ತಹಸೀಲ್ದಾರ್​ಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಂಜೆ ತಹಸೀಲ್ದಾರ್ ಜತೆ ವಿಡಿಯೋ ಸಂವಾದ ನಡೆಸಿದ ಅವರು, ಹಡಗು ಮತ್ತು ವಿಮಾನ ಮೂಲಕ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣ ತಲುಪಲಿರುವ ವಿದೇಶಿಗರನ್ನು ಆಯಾ ಜಿಲ್ಲೆಗೆ ಕಳುಹಿಸಿಕೊಡುವ ಪ್ರಕ್ರಿಯೆ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಹಾವೇರಿಗೆ ಪ್ರವೇಶ ಮಾಡಲು ಮಾಕನೂರು ಹಾಗೂ ತಡಸ ಚೆಕ್​ಪೋಸ್ಟ್​ಗಳನ್ನು ಪ್ರವೇಶ ಮತ್ತು ನಿರ್ಗಮನ ಚೆಕ್​ಪೋಸ್ಟ್​ಗಳಾಗಿ ಗುರುತಿಸಲಾಗಿದೆ. ಈ ಚೆಕ್​ಪೋಸ್ಟ್​ಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು. ಅಗತ್ಯ ಸಿಬ್ಬಂದಿಯೊಂದಿಗೆ ಸಿದ್ಧವಾಗಿರಬೇಕು ಎಂದು ಸೂಚಿಸಿದರು.

    ವಿದೇಶ, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವವರನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿ ಕೈಗೊಳ್ಳಬೇಕಾದ ಮಾರ್ಗಸೂಚಿಯನ್ನು ಸರ್ಕಾರ ಈಗಾಗಲೇ ಪ್ರಕಟಿಸಿದೆ. ಚುನಾವಣಾ ಸಂದರ್ಭದಲ್ಲಿ ಚೆಕ್​ಪೋಸ್ಟ್​ಗಳಲ್ಲಿ ಮಾಡಿಕೊಳ್ಳುವ ಸಿದ್ಧತೆಯಂತೆ ವೈದ್ಯಾಧಿಕಾರಿಗಳು, ಕಂದಾಯ ಇಲಾಖೆ, ಪೊಲೀಸ್ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

    ಆರೋಗ್ಯ ತಪಾಸಣೆಗಾಗಿ ಮಾಕನೂರ ಹಾಗೂ ತಡಸ ಚೆಕ್​ಪೋಸ್ಟ್ ಬಳಿ ಹತ್ತಿರದ ಶಾಲಾ ಕಟ್ಟಡ ಗುರುತಿಸಿ ಪ್ರವಾಸಿಗರ ಆರೋಗ್ಯ ತಪಾಸಣೆ, ಆರೋಗ್ಯ ಸೇತು, ಕರೊನಾ ವಾಚ್ ಹಾಗೂ ಸೇವಾ ಸಿಂಧು ಆಪ್​ಗಳ ಪರಿಶೀಲನೆ, ಸ್ವಯಂ ದೃಢೀಕರಣ ಪತ್ರಗಳ ಪರಿಶೀಲನೆ, ಎಡಮುಂಗೈಗೆ ಕ್ವಾರಂಟೈನ್ ಸೀಲ್ ಹಾಕುವ ಕುರಿತು ಕ್ರಮ ಕೈಗೊಳ್ಳಬೇಕು. ಪೊಲೀಸ್ ವ್ಯವಸ್ಥೆಗಳ ಕುರಿತು ನಿಯಮ ಪಾಲನೆ ಮಾಡಬೇಕು. ಸರ್ಕಾರದ ಮಾರ್ಗಸೂಚಿಯಂತೆ 7 ದಿನ ಮತ್ತು 14 ದಿನ ಸಾಂಸ್ಥಿಕ ಹಾಗೂ ಹೋಮ್ ಕ್ವಾರಂಟೈನ್ ಮಾಡಲು ಅಗತ್ಯವಾದ ಹೋಟೆಲ್, ಹಾಸ್ಟೆಲ್, ಸಮುದಾಯ ಭವನ, ಶಾಲಾ ಕಟ್ಟಡಗಳನ್ನು ಗುರುತಿಸಿ ಅಗತ್ಯ ಸೌಕರ್ಯ ಕಲ್ಪಿಸಬೇಕು. ಅಲ್ಲದೆ, ನಿಗಾಕ್ಕೆ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು ಎಂದರು.

    ವಿದೇಶ ಹಾಗೂ ಹೊರ ರಾಜ್ಯದಿಂದ ಬರುವವರ ಆರೋಗ್ಯ ತಪಾಸಣೆ ಅತ್ಯಂತ ಕಟ್ಟುನಿಟ್ಟಾಗಿ ನಡೆಸಬೇಕು. ಯಾವುದೇ ನಿರ್ಲಕ್ಷ್ಯ ಮಾಡಬಾರದು. ಆತುರವನ್ನು ಮಾಡಬಾರದು. ಜಿಲ್ಲೆಗೆ ಪ್ರವೇಶಿಸುವ ಎಲ್ಲರನ್ನೂ ಕಡ್ಡಾಯವಾಗಿ ತಪಾಸಣೆ ನಡೆಸಿ ವೈದ್ಯರ ಸಲಹೆ ಮೇರೆಗೆ ಸಾಂಸ್ಥಿಕ ಅಥವಾ ಹೋಮ್ ಕ್ವಾರಂಟೈನ್​ಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

    ವಿಡಿಯೋ ಸಂವಾದಲ್ಲಿ ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್ ಶಂಕರ ಜಿ.ಎಸ್., ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರಾ, ಜಿಲ್ಲೆಯ ಎಲ್ಲ ತಹಸೀಲ್ದಾರ್​ಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts