More

    ತಳ ಸಮುದಾಯದ ಸಾಧಕರನ್ನೂ ಗುರುತಿಸಿ- ಪಾಲಿಕೆ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮುಖಂಡರ ಸಲಹೆ

    ದಾವಣಗೆರೆ: ಕಳೆದ ವರ್ಷ ಬಡ್ಡಿ ವ್ಯವಹಾರ ನಡೆಸುವವರಿಗೂ ರಾಜ್ಯೋತ್ಸವ ಸನ್ಮಾನ ನೀಡಿದ್ದೀರಿ. ಮುಂದಿನ ದಿನಗಳಲ್ಲಿ ಈ ಲೋಪ ಆಗದಿರಲಿ. ತಳ ಸಮುದಾಯದ ಸಾಧಕರನ್ನೂ ಗೌರವಿಸಿ..
    ನಗರಪಾಲಿಕೆ, ಕನ್ನಡಪರ ಸಂಘಟನೆಗಳು ಹಾಗೂ ಪತ್ರಕರ್ತರ ಸಹಯೋಗದಲ್ಲಿ ಆಯೋಜಿಸಲಿರುವ ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ಪಾಲಿಕೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಂಘಟನೆಗಳ ಮುಖಂಡರು ನೀಡಿದ ಸಲಹೆಗಳಿವು.
    ಮುಖಂಡ ಸೋಮ್ಲಾಪುರ ಹನುಮಂತಪ್ಪ ಮಾತನಾಡಿ ಚಮ್ಮಾರಿಕೆ, ದೋಭಿ ಇನ್ನಿತರೆ ಕಸುಬು ಮಾಡುವ ತಳ ಸಮುದಾಯದವರನ್ನು ಗುರ್ತಿಸಬೇಕು ಎಂದರು. ಯುವಕರು, ಸಾಧಕ ಅಂಗವಿಕಲರು, ಮುದ್ರಣಕಾರರು, ಶಿಕ್ಷಕರು ಹಾಗೂ ಶುಚಿತ್ವ ಕಾಯ್ದುಕೊಳ್ಳುವ ಹೋಟೆಲ್‌ಗಳಿಗೂ ಪಾಲಿಕೆ ಗೌರವ ಸಿಗಬೇಕೆಂದು ರತನ್, ರಾಜೇಂದ್ರ ಬಂಗೇರ ಮನವಿ ಮಾಡಿದರು.
    ಶುಭಮಂಗಳಾ, ಗೀತಾ ಚಂದ್ರಶೇಖರ್, ದಾಕ್ಷಾಯಣಮ್ಮ, ನೌಸಿನ್ ತಾಜ್ ಮಾತನಾಡಿ ಸಮಿತಿಗಳಲ್ಲಿ ಹೆಣ್ಣುಮಕ್ಕಳಿಗೂ ಅವಕಾಶ ನೀಡಬೇಕು. ಕ್ರೀಡಾ ವಿಜೇತರಿಗೆ ಪ್ರಮಾಣಪತ್ರ ನೀಡಬೇಕು. ಕನ್ನಡಪರ ಸಂಘಟನೆಗಳವರಿಗೂ ಆಸನ ಮೀಸಲಿಡಬೇಕು. ವಯೋಮಿತಿ ಇಲ್ಲದೆ ಸನ್ಮಾನಕ್ಕೆ ಆಯ್ಕೆ ನಡೆಯಲಿ. ಹಳೆ ಭಾಗದಲ್ಲಿ ಧ್ವಜ ಸ್ತಂಭಗಳು ಹಾಳಾಗಿದ್ದು ದುರಸ್ತಿ ಮಾಡಬೇಕೆಂದು ಹೇಳಿದರು.
    ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಮಾತನಾಡಿ ನಗರಪಾಲಿಕೆ ವ್ಯಾಪ್ತಿಯ ವಾಣಿಜ್ಯ ಮಳಿಗೆದಾರರು ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕಿಸಿಕೊಳ್ಳಲು ಅಧಿಕಾರಿಗಳು ಕ್ರಮ ವಹಿಸಬೇಕು. ಇಲ್ಲವೇ ನಾವೇ ಕ್ರಮ ವಹಿಸಲಾದರೂ ಅಧಿಕಾರ ಕೊಡಿ. ಈ ವಿಚಾರದಲ್ಲಿ ನಿರ್ಲಕ್ಷೃ ಬೇಡ ಎಂದರು.
    ಕನ್ನಡ ಚಳವಳಿ ಜಿಲ್ಲಾಧ್ಯಕ್ಷ ಟಿ.ಶಿವಕುಮಾರ್ ಮಾತನಾಡಿ ರಾಜ್ಯೋತ್ಸವ ಸಂದರ್ಭದಲ್ಲಿ ಹಳೆ ಭಾಗದಿಂದಲೂ ಮೆರವಣಿಗೆ ನಡೆಸುವಂತಾದರೆ ಆ ಭಾಗದಲ್ಲೂ ಕನ್ನಡದ ಜಾಗೃತಿ ಮೂಡಲಿದೆ ಎಂದು ತಿಳಿಸಿದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರಾನ್ಸಿಸ್ ಮಾತನಾಡಿ ಮಕ್ಕಳಿಗೂ ರಾಜ್ಯೋತ್ಸವದಲ್ಲಿ ಕಾರ್ಯಕ್ರಮ ಕಲ್ಪಿಸಬೇಕೆಂದರು.
    ಕನ್ನಡ ಚಳವಳಿ ಮುಖಂಡ ಕೆ.ಜಿ.ಶಿವಕುಮಾರ್ ಮಾತನಾಡಿ ಕರೊನಾ ಹಿನ್ನೆಲೆಯಲ್ಲಿ ಕಳೆದ ಬಾರಿ ಕಳೆಗಟ್ಟಿರಲಿಲ್ಲ. ಈ ಸಲ ಮೂರು ದಿನ ನಡೆಸಬೇಕು. ಶನಿವಾರ, ಭಾನುವಾರಗಳಂದು ಅಧಿಕಾರಿ- ಸಿಬ್ಬಂದಿ ಕೊರತೆ ಕಾಡಲಿದೆ. ಉಳಿದ ದಿನಗಳಲ್ಲಿ ಕಾರ್ಯಕ್ರಮ ನಡೆಸುವುದು ಸೂಕ್ತ. ಬಜೆಟ್‌ನಲ್ಲಿ ಮೀಸಲು ಹಣ ಕೊರತೆಯಾದಲ್ಲಿ ಟೆಂಡರ್ ನಡೆಸಲು ಕ್ರಮ ವಹಿಸಬೇಕು ಎಂದು ಹೇಳಿದರು.
    ಪ್ರತಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್ ಮಾತನಾಡಿ ಗುಣಮಟ್ಟದ ಬಟ್ಟೆಯ ಕನ್ನಡ ಬಾವುಟವನ್ನು ಪಾಲಿಕೆ ಮೇಲೆ ಆರೋಹಣ ಮಾಡಬೇಕು. ಉತ್ತರಾಖಾಂಡ, ಗುಜರಾತ್ ಇತರೆ ರಾಜ್ಯಗಳ ವಾಣಿಜ್ಯ ಮಳಿಗೆಗಳಲ್ಲಿ ನಿರ್ದಿಷ್ಟ ಅಳತೆಯ ಫಲಕಗಳಿವೆ. ಇಂತಹ ಕಾನೂನು ನಮ್ಮಲ್ಲೂ ಜಾರಿಯಾಗಬೇಕು. ಕನ್ನಡದ ಫಲಕಗಳನ್ನು ಹಾಕಿಸಬೇಕು ಎಂದರು.
    ಕರ್ನಾಟಕ ರಾಜ್ಯ ನಾಮಕರಣಗೊಂಡು 50 ವರ್ಷವಾದ ಸಂದರ್ಭದ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಕನಿಷ್ಠ 15ರಿಂದ 25 ಸಾವಿರ ಜನರು ಸೇರುವಂತಾಗಬೇಕು. ಪಾಲಿಕೆ ಬಜೆಟ್‌ನಲ್ಲಿ ರಾಜ್ಯೋತ್ಸವಕ್ಕೆ 50 ಲಕ್ಷ ರೂ. ನಿಗದಿ ಮಾಡಬೇಕು. ಹಬ್ಬದ ವಾತಾವರಣ ಮೂಡಿಸಲು ಸಾಹಿತ್ಯಗೋಷ್ಠಿ, ಕವಿಗೋಷ್ಠಿ, ಪುಸ್ತಕ ಪ್ರದರ್ಶನ- ಮಾರಾಟಕ್ಕೆ ಅವಕಾಶವಾಗಬೇಕು. ಇಡೀ ವರ್ಷ ಪ್ರತಿ ತಿಂಗಳಲ್ಲಿ ಕನ್ನಡ ಪರ ಸಂಘಟನೆಗಳು ಒಬ್ಬೊಬ್ಬ ಕವಿಯ ಕುರಿತ ಗೋಷ್ಠಿ ನಡೆಸುವ ಹೊಣೆ ವಹಿಸಬೇಕೆಂದು ಸಲಹೆ ನೀಡಿದರು.
    ಪಾಲಿಕೆ ಬಜೆಟ್‌ನಲ್ಲಿ 20 ಲಕ್ಷ ರೂ. ನಿಗದಿ ಇದೆ. ಇದನ್ನು ಹೆಚ್ಚಿಸಲು ಅವಕಾಶವಿದೆ. ದುಂದುವೆಚ್ಚ ಮಾಡದೆ ಅರ್ಥಪೂರ್ಣ ಆಚರಣೆ ಮಾಡೋಣ ಎಂದು ಪಾಲಿಕೆ ಸದಸ್ಯ ಎ.ನಾಗರಾಜ್ ಹೇಳಿದರು. ರಮೇಶ್ ವತನ್, ವಿಜಯ ಜಾಧವ್ ಮಾತನಾಡಿದರು.
    ಮೇಯರ್ ಬಿ.ಎಚ್.ವಿನಾಯಕ ಮಾತನಾಡಿ ಆಯುಕ್ತರು, ಅಧಿಕಾರಿಗಳು, ಪಾಲಿಕೆ ಸದಸ್ಯರು ಸೇರಿ ಮತ್ತೊಂದು ಸಭೆ ನಡೆಸಿ ರಾಜ್ಯೋತ್ಸವದ ದಿನಾಂಕ ನಿಗದಿಪಡಿಸಲಾಗುವುದು. ಅದ್ದೂರಿ ಆಚರಣೆಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
    ಉಪಮೇಯರ್ ಯಶೋದಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್, ಬಿ.ಎಚ್.ಉದಯಕುಮಾರ್, ಪಾಲಿಕೆ ಸದಸ್ಯ ಶಿವಾನಂದ್, ಅಧಿಕಾರಿ ಶ್ರವಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts