More

    ತಲೆಬುರುಡೆ ಕಚ್ಚಿಕೊಂಡು ಓಡಾಡಿದ ನಾಯಿಗಳು!

    ಜೊಯಿಡಾ: ಹೂತಿದ್ದ ಶವವೊಂದರ ತಲೆಬುರುಡೆಯನ್ನು ನಾಯಿಗಳು ಕಚ್ಚಿಕೊಂಡು ಓಡಾಡಿ ಆತಂಕ ಸೃಷ್ಟಿಸಿದ ಘಟನೆ ಶನಿವಾರ ಬೆಳ್ಳಂಬೆಳಗ್ಗೆ ತಾಲೂಕು ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ನಡೆದಿದೆ. ಆರೋಗ್ಯ, ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯ ಪ್ರಮಾದದಿಂದ ಈ ಘಟನೆ ನಡೆದಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಸಹಜ ಸಾವುಗಳು ಸಂಭವಿಸಿದಾಗ ಆಸ್ಪತ್ರೆ ಹಿಂಭಾಗದ ಶವಾಗಾರದಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಶವದ ವಾರಸುದಾರರು ಪತ್ತೆಯಾಗುವುದಿಲ್ಲ. ಅಂಥ ಸಂದರ್ಭದಲ್ಲಿ ಜನವಸತಿ ಪ್ರದೇಶದಿಂದ ದೂರದಲ್ಲಿ ಅಥವಾ ಸ್ಮಶಾನದಲ್ಲಿ ಶವ ಹೂಳಬೇಕು. ಆದರೆ, ಜೊಯಿಡಾ ಪಟ್ಟಣದಲ್ಲಿ ಸರ್ಕಾರಿ ಸ್ಮಶಾನವೇ ಇಲ್ಲ. ಇದನ್ನೇ ಸಬೂಬು ಮಾಡಿಕೊಂಡಿರುವ ತಾಲೂಕು ಆರೋಗ್ಯ ಕೇಂದ್ರದ ಅಧಿಕಾರಿಗಳು, ಪೊಲೀಸರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಆಸ್ಪತ್ರೆ ಹಿಂಭಾಗದ ಜಾಗದಲ್ಲೇ ಶವ ಹೂಳುತ್ತಿದ್ದಾರೆ. ಆದರೆ, ಅದಕ್ಕೆ ಅಗತ್ಯ ಪ್ರಮಾಣದಲ್ಲಿ ತಗ್ಗು ತೆಗೆಯುವುದಿಲ್ಲ. ಕಾಟಾಚಾರಕ್ಕೆ ಶವ ಹೂಳಿರುವ ಪರಿಣಾಮ ಕಾಡು ಹಂದಿಗಳು, ನಾಯಿಗಳು ಶವಗಳನ್ನು ಕೆದಕಿ ಹೊರಗೆ ತೆಗೆಯುತ್ತಿವೆ. ಅಂಥದ್ದೇ ಪ್ರಸಂಗ ಶನಿವಾರವೂ ನಡೆದಿದೆ.

    ಕೆಲವು ದಿನಗಳ ಹಿಂದಷ್ಟೇ ಅಪರಿಚಿತನ ಶವ ರಾಮನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ವಾರಸುದಾರರು ಬರಬಹುದೆಂದು ಜೊಯಿಡಾ ಆಸ್ಪತ್ರೆಯಲ್ಲಿ ಶವ ಇಡಲಾಗಿತ್ತು. ಆನಂತರ ವಾರಸುದಾರರು ಸಿಗದ ಕಾರಣ ಶವವನ್ನು ಆಸ್ಪತ್ರೆ ಹಿಂಭಾಗದಲ್ಲೇ ಕಾಟಾಚಾರಕ್ಕೆಂಬಂತೆ ಹೂಳಲಾಗಿದೆ. ಈ ಶವದ ತಲೆಬುರುಡೆಯನ್ನು ಕಚ್ಚಿಕೊಂಡು ನಾಯಿಗಳು ಓಡಾಡಿವೆ. ಅದನ್ನು ಕಂಡ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಪೊಲೀಸರು, ಸ್ಥಳೀಯ ಗ್ರಾಪಂಗೆ ವಿಷಯ ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ತಕ್ಷಣ ಶವದ ತಲೆ ಬುರುಡೆಗಾಗಿ ತಡಕಾಡಿದ್ದಾರೆ. ನಾಯಿಗಳು ತಲೆ ಬುರುಡೆಯನ್ನು ಆಸ್ಪತ್ರೆ ಹಿಂಭಾಗದ ಗದ್ದೆಗೆ ಹೊಂದಿಕೊಂಡಿರುವ ಹಳ್ಳದಲ್ಲಿ ಬಿಸಾಕಿದ್ದವು. ಇದನ್ನು ಸಿಬ್ಬಂದಿ ಚೀಲದಲ್ಲಿ ಹಾಕಿಕೊಂಡು ಹೋಗಿದ್ದಾರೆ ಎಂದು ಸ್ಥಳಿಯರು ತಿಳಿಸಿದ್ದಾರೆ.

    ಜನವಸತಿ ಪ್ರದೇಶದಲ್ಲಿ ಶವ ಹೂಳುವುದೇ ತಪ್ಪು. ಆದರೆ, ಆರೋಗ್ಯ ಇಲಾಖೆ ಇಂಥ ಪ್ರಮಾದವನ್ನು ಮೇಲಿಂದ ಮೇಲೆ ಮಾಡುತ್ತಿದೆ. ಇದರಿಂದಾಗಿ ಆಸ್ಪತ್ರೆ ಹಿಂಭಾಗದಲ್ಲಿ ಜನರು ಓಡಾಡಲು ಹೆದರುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಆಸ್ಪತ್ರೆಯೋ ಸ್ಮಶಾನವೋ: ಶವದ ವಾರಸುದಾರರು ಸಿಗದೆ ಇದ್ದಾಗ ಆ ಶವವನ್ನು ಹೂಳುವುದು ಪದ್ಧತಿ. ಹಾಗಂತ ಆಸ್ಪತ್ರೆಯ ಆವರಣದಲ್ಲಿಯೇ ಶವ ಹೂಳುತ್ತಿರುವುದು ಬೆಚ್ಚಿಬೀಳಿಸುವ ಸಂಗತಿ. ಆರೋಗ್ಯ ಇಲಾಖೆಯು ಶವವನ್ನು ಪೊಲೀಸರಿಗೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುತ್ತದೆ. ಹಾಗಂತ ಶವವನ್ನು ಜನವಸತಿ ಪ್ರದೇಶದಿಂದ ದೂರದಲ್ಲಿ ಹೂತರೆ ಸರಿ. ಆದರೆ, ಆಸ್ಪತ್ರೆಯ ಆವರಣದಲ್ಲಿಯೇ ಶವ ಹೂಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಇದನ್ನು ಕಂಡೂ ಕಾಣದಂತಿರುವ ಆರೋಗ್ಯ ಇಲಾಖೆಯ ವರ್ತನೆ ಅಕ್ಷಮ್ಯ. ಇದು ಆಸ್ಪತ್ರೆಯೋ, ಸ್ಮಶಾನವೋ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಈ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜನ ಆಸ್ಪತ್ರೆಗೆ ಬರಲು ಹೆದರುವಂತಾಗಿದೆ.

    ಆಸ್ಪತ್ರೆಯ ಸಿಬ್ಬಂದಿಯನ್ನು ಕಳುಹಿಸಿ ಪರಿಶೀಲಿಸಲಾಗಿದೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸ್ ಇಲಾಖೆಗೆ ಮತ್ತು ಗ್ರಾಮ ಪಂಚಾಯಿತಿಗೆ ಶವ ಹಸ್ತಾಂತರಿಸಲಾಗಿತ್ತು. ಅವರೇ ಆ ಶವದ ಅಂತ್ಯ ಸಂಸ್ಕಾರ ಮಾಡಿದ್ದಾರೆ.

    | ಡಾ. ವಿಜಯ ಕುಮಾರ, ತಾಲೂಕಾಸ್ಪತ್ರೆ ವೈದ್ಯಾಧಿಕಾರಿ, ಜೊಯಿಡಾ

    ಶವದ ವಾರಸುದಾರರು ಸಿಗದೆ ಇರುವುದರಿಂದ ಅದನ್ನು ಮಣ್ಣು ಮಾಡಲು ಗ್ರಾಮ ಪಂಚಾಯಿತಿಯಿಂದ ಲೇಬರ್​ಗಳಿಗೆ ಹಣ ನೀಡಲಾಗಿದೆ. ಈ ಬಗ್ಗೆ ವಿಚಾರಿಸಲಾಗುವುದು.

    | ಅರುಣ ಕಾಮ್ರೇಕರ, ಅಧ್ಯಕ್ಷ, ಜೊಯಿಡಾ ಗ್ರಾಪಂ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts